ಪೋಷಕರು ಆನ್‌ಲೈನ್ ಗೇಮ್ ಆಡ್ಬೇಡಿ ಎಂದು ಬೈದದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಬಾಲಕಿಯರನ್ನು ಸ್ಥಳೀಯರಾದ ಚೇತನ್ ಕುಮಾರ್ ಅವರ ಮಕ್ಕಳು ವಿಶಿಕಾ (16), ಪ್ರಾಚಿ (14) ಹಾಗೂ ಪಖಿ (12) ಎಂದು ಗುರುತಿಸಲಾಗಿದೆ.
ಕೋವಿಡ್ ಸಮಯದಲ್ಲಿ ಮೂವರಿಗೂ ಮೊಬೈಲ್ ಕೊಡಿಸಲಾಗಿತ್ತು. ಆಗಿನಿಂದ ಮೂವರೂ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದರು. ಅದರಲ್ಲೂ ಆನ್‌ಲೈನ್ ಟಾಸ್ಕ್ ಆಧಾರಿತ ʼಕೊರಿಯನ್ ಲವ್ ಗೇಮ್ʼಅನ್ನು ಹೆಚ್ಚು ಆಡುತ್ತಿದ್ದರಂತೆ. ಆನ್‌ಲೈನ್ ಗೇಮ್ ಆಡಬೇಡಿ ಎಂದು ಬೈದು ಬುದ್ಧಿ ಹೇಳಿದ್ದಕ್ಕೆ ಸಿಟ್ಟಾದ ಮೂವರೂ ಸಹೋದರಿಯರು ಸಾಹಿಬಾಬಾದ್ ಪ್ರದೇಶದ ಟೀಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ ಸಿಟಿಯ ಟವರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬೆಳಗಿನ ಜಾವ 2.15ರ ಸುಮಾರಿಗೆ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ, ಅಧ್ಯಯನದಲ್ಲೂ ಹಿಂದೆ ಬಿದ್ದಿದ್ದರು ಎನ್ನಲಾಗಿದೆ. ಇನ್ನು ಮೃತ ಬಾಲಕಿಯರು ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದ್ದು, “ಸಾರಿ ಪಪ್ಪಾ, ನಾವು ಕೊರಿಯಾ ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ, ನೀವು ಅದರಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಬರೆದಿರುವುದಾಗಿ ತಂದೆ ಚೇತನ್ ಹೇಳಿದ್ದಾರೆ. ಜತೆಗೆ ಇದೊಂದು ದುರಂತ. ಎಲ್ಲಾ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿರಿ, ಆನ್‌ಲೈನ್ ಗೀಳಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.





