ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ದೆಹಲಿ ಪೊಲೀಸ್ ಪ್ರಶ್ನಿಸಿರುವ ಸಂಬಂಧ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರ ಪೀಠ ದೆಹಲಿ ಪೊಲೀಸ್ ಮನವಿ ಸಲ್ಲಿಸಿರುವ ಅರ್ಜಿಗೆ ನೋಟಿಸ್ ಜಾರಿಗೊಳಿಸಿದೆ.
ದೆಹಲಿ ಪೊಲೀಸರ ನಾಲ್ಕು ಅರ್ಜಿಯ ಜೊತೆಗೆ ಸೌಮ್ಯ ವಿಶ್ವನಾಥನ್ ಅವರ ತಾಯಿ ಸಲ್ಲಿಸಿರುವ ಬಾಕಿ ಅರ್ಜಿಯನ್ನು ಕೂಡ ಇದೇ ಅರ್ಜಿಗಳ ಜೊತೆ ಪಟ್ಟಿ ಮಾಡಲಾಗಿದೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಏಪ್ರಿಲ್ 2024ರಲ್ಲಿ ನಾಲ್ವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?
ದೆಹಲಿ ಹೈಕೋರ್ಟ್ ಫೆ.12, 2024ರಲ್ಲಿ ಸೌಮ್ಯ ವಿಶ್ವನಾಥನ್ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್‌ಜಿತ್ ಸಿಂಗ್ ಮಲಿಕ್ ಹಾಗೂ ಅಜಯ್ ಕುಮಾರ್ ಅವರಿಗೆ ಮೇಲ್ಮನವಿ ಪ್ರಕರಣಗಳು ವಿಲೇವಾರಿಯಾಗುವವರೆಗೆ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಜಮೀನು ಜಾರಿಗೊಳಿಸಿತ್ತು. ಆರೋಪಿಗಳು ಈಗಾಗಲೇ 14 ವರ್ಷ ಶಿಕ್ಷೆ ಅನುಭವಿಸಿದ್ದಾರೆ ಎಂದು ಕೋರ್ಟ್ ಉಲ್ಲೇಖಿಸಿತ್ತು.
ದೆಹಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಟರ್ ಜನರಲ್ ಎಸ್ ವಿ ರಾಜು ಅವರು ಕೋರ್ಟ್‌ಗೆ ಹಾಜರಾಗಿದ್ದರು.
ಇಂಡಿಯಾ ಟುಡೆ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ವಿಶ್ವನಾಥನ್ ಅವರು ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿನ ತಮ್ಮ ಕಾರಿನಲ್ಲಿ 2008ರ ಸೆಪ್ಟೆಂಬರ್‌ನಲ್ಲಿ ಹತ್ಯೆಗೀಡಾಗಿದ್ದರು.





