ಭಾರತೀಯ ರೈಲ್ವೆಯ 478 ಸೂಪರ್‌ಫಾಸ್ಟ್ ರೈಲುಗಳಲ್ಲಿ, 123 ರೈಲುಗಳ ವೇಗವು ನಿಗದಿತ ‘ಗಂಟೆಗೆ 55 ಕಿ.ಮೀ.’ ವೇಗಕ್ಕಿಂತ ತೀರಾ ಕಡಿಮೆಯಿದೆ ಎಂದು ಸಂಸದೀಯ ಸಮಿತಿ ಗಮನಸೆಳೆದಿದೆ. ‘ಗರಿಷ್ಠ ಅನುಮತಿಸುವ ವೇಗ’ (ಮ್ಯಾಕ್ಸಿಮಮ್ ಪರ್ಮಿಟಿಂಗ್ ಸ್ಪೀಡ್ – MPS) ರೋಲಿಂಗ್ ಸ್ಟಾಕ್ ಮತ್ತು ವಿಭಾಗೀಯ ವೇಗಗಳನ್ನು ಗಮನದಲ್ಲಿಟ್ಟುಕೊಂಡು ‘ಸೂಪರ್‌ಫಾಸ್ಟ್ ರೈಲು’ಗಳ ಮಾನದಂಡವನ್ನು ಪರಿಶೀಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
2007ರ ಮೇನಲ್ಲಿ ರಾಷ್ಟ್ರೀಯ ಸಾರಿಗೆ ಸಂಸ್ಥೆಯು ನಿಗದಿ ಮಾಡಿದ ಮಾನದಂಡದಂತೆ ರೈಲಿನ ಸರಾಸರಿ ವೇಗವು ಬ್ರಾಡ್ ಗೇಜ್‌ನಲ್ಲಿ ಗಂಟೆಗೆ ಕನಿಷ್ಠ 55 ಕಿ.ಮೀ. ಮತ್ತು ಮೀಟರ್ ಗೇಜ್‌ನಲ್ಲಿ ಗಂಟೆಗೆ 45 ಕಿ.ಮೀ. ಇದ್ದರೆ, ಅದನ್ನು ಸೂಪರ್‌ಫಾಸ್ಟ್ (SF) ರೈಲು ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ಮಾನದಂಡವನ್ನು 123 ಸೂಪರ್‌ಫಾಸ್ಟ್ ರೈಲುಗಳು ಪೂರೈಸುತ್ತಿಲ್ಲ ಎಂಬುದನ್ನು ಸಂಸದೀಯ ಸಮಿತಿ ಗುರುತಿಸಿದೆ.
ಸಮಿತಿಯು ‘ಭಾರತೀಯ ರೈಲ್ವೆಯ ರೈಲು ಕಾರ್ಯಾಚರಣೆಗಳಲ್ಲಿನ ಸಮಯಪ್ರಜ್ಞೆ ಮತ್ತು ಪ್ರಯಾಣದ ಸಮಯ’ ಶೀರ್ಷಿಕೆಯಲ್ಲಿ ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ. “ಕಡಿಮೆ ವೇಗದಲ್ಲಿ ಓಡುತ್ತಿರುವ 123 ಸೂಪರ್‌ಫಾಸ್ಟ್ ರೈಲುಗಳನ್ನು ಹೊಸದಾಗಿ ಪರಿಚಯಿಸಿದಾಗ, ಇವುಗಳ ಪೈಕಿ 47 ರೈಲುಗಳು ಗಂಟೆಗೆ 55 ಕಿ.ಮೀ.ಗಿಂತ ಹೆಚ್ಚಿನ ವೇಗವನ್ನು ಹೊಂದಿವೆ ಎಂಬುದಾಗಿ ಸಚಿವಾಲಯವು ಹೇಳಿತ್ತು. ಆದರೆ, ಈ ರೈಲುಗಳ ವೇಗವೂ 55 ಕಿ.ಮೀ.ಗಿಂತ ಕಡಿಮೆಯೇ ಇದೆ” ಎಂದು ವರದಿ ವಿವರಿಸಿದೆ.
“ಕಾರ್ಯಾಚರಣೆಗಳು ಪ್ರಾರಂಭವಾದ ನಂತರ ಹೆಚ್ಚುವರಿ ನಿಲುಗಡೆಗಳನ್ನು ಸೇರಿಸಿರುವುದು ಹಲವಾರು ರೈಲುಗಳ ಸರಾಸರಿ ವೇಗದ ಮೇಲೆ ಪರಿಣಾಮ ಬೀರಿದೆ. ಕೇವಲ 55 ಕಿ.ಮೀ. ವೇಗದಲ್ಲಿ ಚಲಿಸುವ ರೈಲುಗಳನ್ನು ‘ಸೂಪರ್‌ಫಾಸ್ಟ್’ ಎಂದು ವರ್ಗೀಕರಿಸುವುದು ಕಳವಳಕಾರಿ” ಎಂದಿರುವ ಸಮಿತಿ, ಸಚಿವಾಲಯವೇ ನಿಗದಿಪಡಿಸಿದ ವೇಗ ಮಿತಿಗಳನ್ನು ರೈಲ್ವೆ ಪಾಲಿಸದಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?
“ಸೂಪರ್‌ಫಾಸ್ಟ್ ರೈಲುಗಳೆಂದು ಹೆಸರಿಸುವುದು ಹೆಚ್ಚಿನ ಶುಲ್ಕಗಳನ್ನು ಅನ್ವಯಿಸುವ ಉದ್ದೇಶವನ್ನಷ್ಟೇ ಹೊಂದಿದೆ” ಎಂದು ಸಮಿತಿ ತೀರ್ಮಾನಿಸಿದೆ. “ರೈಲುಗಳ ವೇಗ ಕಡಿಮೆಯಾದಾಗ, ಭಾರತೀಯ ರೈಲ್ವೆ ರೈಲನ್ನು ಸೂಪರ್‌ಫಾಸ್ಟ್ ವರ್ಗದಿಂದ ತೆಗೆದುಹಾಕಿ ದರವನ್ನು ಪರಿಷ್ಕರಿಸಬೇಕಾಗಿತ್ತು” ಎಂದು ಹೇಳಿದೆ.
“ರೈಲ್ವೆ ಸಚಿವಾಲಯವು ರೈಲುಗಳನ್ನು ‘ಸೂಪರ್‌ಫಾಸ್ಟ್’ ಎಂದು ವರ್ಗೀಕರಿಸುವ ಮಾನದಂಡಗಳನ್ನು ಪರಿಶೀಲಿಸಬೇಕು. 55 ಕಿ.ಮೀ. ವೇಗವನ್ನು ಪರಿಗಣಿಸುವ ಸೂಪರ್‌ಫಾಸ್ಟ್ ಮಾನದಂಡವು ಅಕಾಲಿಕವಾಗಿದೆ. ಪ್ರಸ್ತುತ ಸಮಯಕ್ಕೆ ಹೊಂದಿಕೆಯಾಗುವುದಿಲ್ಲ. ವಿಶೇಷವಾಗಿ ಚೀನಾ ಮತ್ತು ಜಪಾನ್‌ನಂತಹ ಪೂರ್ವ ಏಷ್ಯಾದ ಕೆಲವು ದೇಶಗಳು ನಮ್ಮ ವೇಗದ ಮಾನದಂಡಗಳನ್ನು ಮೀರಿದ ವೇಗದಲ್ಲಿ ತಮ್ಮ ರೈಲುಗಳನ್ನು ಓಡಿಸುತ್ತಿವೆ. ಭಾರತೀಯ ಸೂಪರ್‌ಫಾಸ್ಟ್ ರೈಲುಗಳ ಮಾನದಂಡವನ್ನು 100 ಕಿ.ಮೀ. ವೇಗವನ್ನು ಅಂದಾಜು ಮಾಡುವ ಜಾಗತಿಕ ಮಾನದಂಡಗಳೊಂದಿಗೆ ಹೊಂದಿಸಬೇಕು” ಎಂದು ಸಮಿತಿ ಹೇಳಿದೆ.




