ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೊತ್ತುವಳಿಯು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲದೆ, ಗ್ರಾಮೀಣ ಭಾರತದ ಜೀವನೋಪಾಯ ರಕ್ಷಣೆಗಾಗಿ ಕೈಗೊಂಡಿರುವ ಒಂದು ದೃಢ ನಿಲುವು. ಕೇಂದ್ರ ಸರ್ಕಾರದ ಪ್ರತಿಕ್ರಿಯೆಯು ಭವಿಷ್ಯದ ನಿರ್ಣಯಗಳನ್ನು ನಿರ್ಧರಿಸಲಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯನ್ನು ಮರುನಾಮಕರಣ ಮಾಡುವ ಮತ್ತು ಅದರ ಹಣಕಾಸು ರಚನೆಯನ್ನು ಬದಲಾಯಿಸುವ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಪ್ರಸ್ತಾಪವನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಿದೆ.
ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ಮಹಾತ್ಮ ಗಾಂಧಿಯವರ ಹೆಸರನ್ನು ಉಳಿಸಿಕೊಳ್ಳಲು ಮತ್ತು ಕೆಲಸದ ನಿಜವಾದ ಬೇಡಿಕೆ ಮತ್ತು ರಾಜ್ಯವಾರು ಕಾರ್ಯಕ್ಷಮತೆಯ ಆಧಾರದ ಮೇಲೆ ಸಮರ್ಪಕ, ನಿರಂತರ ನಿಧಿ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿತು. ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಈ ಯೋಜನೆಯ ಪ್ರಾಥಮಿಕ ಫಲಾನುಭವಿಗಳಾಗಿ ಉಳಿದಿದ್ದಾರೆ ಎಂಬುದನ್ನು ಗಮನಿಸಿ, ಗ್ರಾಮೀಣ ನಾಗರಿಕರ ಕೆಲಸದ ಹಕ್ಕನ್ನು ರಕ್ಷಿಸಬೇಕು ಎಂಬುದು ನಿರ್ಣಯದಲ್ಲಿ ಅಡಕವಾಗಿದೆ.
ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ದದ ಗೊತ್ತುವಳಿ ಅಂಗೀಕಾರದ ಅಂಶಗಳೇನು?
ಮನರೇಗಾ ಮರುನಾಮಕರಣ : ಮಹಾತ್ಮಾ ಗಾಂಧೀಜಿ ಹೆಸರನ್ನು ತೆಗೆದುಹಾಕಿ ವಿಬಿ ಜಿ ರಾಮ್ ಜಿ ಯೋಜನೆಗೆ ಬದಲಾಯಿಸುವುದು ಖಂಡನೀಯ. ಇದರಿಂದ ರಾಷ್ಟ್ರಪಿತರ ಗೌರವವನ್ನು ಕಸಿದುಕೊಂಡಂತಾಗಿದೆ. ಅಲ್ಲದೆ ಗಾಂಧೀಜಿಯವರ ಕನಸಿನಂತೆ ಪ್ರತಿ ಗ್ರಾಮವು ಸ್ವಾವಲಂಬಿ, ಸ್ವಾಯತ್ತ ಮತ್ತು ತನ್ನ ಆಡಳಿತವನ್ನು ತಾನೇ ನಡೆಸುವ ವ್ಯವಸ್ಥೆ ಮನರೇಗಾದಲ್ಲಿದೆ. ಇದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು, ಗ್ರಾಮೀಣ ಆರ್ಥಿಕತೆ, ಆರೋಗ್ಯ ಮತ್ತು ಮೂಲಸೌಕರ್ಯಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಶಕ್ತಗೊಳಿಸುವ ಪರಿಕಲ್ಪನೆಯಾಗಿದೆ. ಹಾಗಾಗಿ ಮನರೇಗಾ ಹೆಸರನ್ನು ಮರುನಾಮಕರಣ ಮಾಡಬೇಕು ಎಂಬ ಅಂಶ ನಿರ್ಣಯದಲ್ಲಿ ಅಡಗಿದೆ.
ಹಣಕಾಸು ಹಂಚಿಕೆ: ಮನರೇಗಾದಲ್ಲಿದ್ದ ಶೇ.100ರಷ್ಟು ಹಣಕಾಸು ಹಂಚಿಕೆಯ ಬದಲಿಗೆ ವಿಬಿ ಜಿ ರಾಮ್ ಜಿಯಲ್ಲಿ 60:40 (ಕೇಂದ್ರ:ರಾಜ್ಯ) ಅನುಪಾತದಲ್ಲಿರಲಿದೆ. ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ ಇರಲಿದೆ. ಈ ಹೊಸ ವ್ಯವಸ್ಥೆಯು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ. ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ ಇರಲಿದೆ. ಅಲ್ಲದೆ ಕೇಂದ್ರವೇ ಕೆಲಸದ ವ್ಯಾಪ್ತಿಗಳನ್ನು ನಿರ್ಧರಿಸುತ್ತದೆ. ಬಜೆಟ್ ಹಂಚಿಕೆಯನ್ನು ನಿಯಂತ್ರಿಸುತ್ತದೆ.
ಅನುದಾನ ವಿಧಾನ: ಬೇಡಿಕೆ ಆಧಾರಿತ(demand-driven) ವ್ಯವಸ್ಥೆಯ ಬದಲು ವಿವೇಚನಾ/ಮೌಲ್ಯಮಾಪನ ಆಧಾರಿತ (discretionary/assessment-based) ವ್ಯವಸ್ಥೆಯಲ್ಲಿದ್ದು, ಇದು ಪಾರದರ್ಶಕತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಹಿಂದಿನ ವರ್ಷಗಳಿಗಿಂತ ಕಡಿಮೆಯಲ್ಲದ ಅನುದಾನ ಬಿಡುಗಡೆ ಮಾಡಿ, ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿ/ಕುಲಗಳ ಜೀವನೋಪಾಯವನ್ನು ರಕ್ಷಣೆ ಮಾಡಬೇಕು ಎನ್ನಲಾಗಿದೆ.
ತಾಂತ್ರಿಕ ಬದಲಾವಣೆಗಳು: ಕಡ್ಡಾಯ ಆಧಾರ್ ಸೀಡಿಂಗ್, ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ಮತ್ತು ಇತರ ಆಡಳಿತಾತ್ಮಕ ಬದಲಾವಣೆಗಳಂತಹ ಕ್ರಮಗಳಿಂದ ಗ್ರಾಮೀಣ ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕವನ್ನು ನಿರ್ಣಯದಲ್ಲಿ ತಿಳಿಸಿದೆ.
ಸಾಮಾಜಿಕ ಪರಿಣಾಮ : ತಮಿಳುನಾಡಿನಲ್ಲಿ ಮಹಿಳೆಯರು, ಬಡವರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಫಲಾನುಭವಿಗಳಾಗಿದ್ದಾರೆ. ಇಲ್ಲಿಯ ಗ್ರಾಮೀಣ ಕಾರ್ಮಿಕರ ಉದ್ಯೋಗ ಹಕ್ಕು ಮತ್ತು ಸಾಮಾಜಿಕ ಭದ್ರತೆಗೆ ವಿಬಿ ಜಿ ರಾಮ್ ಜಿ ಧಕ್ಕೆ ತರುತ್ತದೆ ಎಂದು ಸರ್ಕಾರ ಆರೋಪಿಸಿದೆ.
ಒಕ್ಕೂಟ ವಿರೋಧಿ ಸ್ವಭಾವ: ವಿಬಿ ಜಿ ರಾಮ್ ಜಿ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಲ್ಲದೆ ಇದರಲ್ಲಿರುವ ಅಂಶಗಳು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ಬಡ ರಾಜ್ಯಗಳನ್ನು ಯೋಜನೆಯಿಂದ ಹೊರಗಿಡುವಂತೆ ಮಾಡುತ್ತದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಜತೆಗೆ ಕಾಂಗ್ರೆಸ್ ನಾಯಕರು ಇದನ್ನು ಸಂವಿಧಾನ ವಿರೋಧಿಯೆಂದು ಕರೆದಿದ್ದಾರೆ.
ಈ ಗೊತ್ತುವಳಿಯು ಧ್ವನಿಮತದ ಮೂಲಕ ಅಂಗೀಕರಿಸಲ್ಪಟ್ಟಿತು. ಸ್ಪೀಕರ್ ಎಂ ಅಪ್ಪಾವು ಅದನ್ನು ಏಕಮತದ್ದು ಎಂದು ಘೋಷಿಸಿದ್ದಾರೆ. DMK ಮಿತ್ರಪಕ್ಷಗಳಾದ ಕಾಂಗ್ರೆಸ್, VCK, CPI(M), CPI ಮತ್ತು ಇತರರು ಬೆಂಬಲ ನೀಡಿದ್ದಾರೆ. AIADMK ವಿಪಕ್ಷ ನಾಯಕ ಆರ್ ಬಿ ಉದಯಕುಮಾರ್ ಇದನ್ನು ರಾಜಕೀಯ ಪ್ರೇರಿತವೆಂದು ಕರೆದಿದ್ದು, ಪಕ್ಷವು ಮರುನಾಮಕರಣಕ್ಕೆ ವಿರೋಧ ವ್ಯಕ್ತಪಡಿಸಿತು. BJP ಸದಸ್ಯರು ಅಧಿವೇಶನದಿಂದ ಹೊರಗುಳಿದರು.
ಮುಖ್ಯಮಂತ್ರಿ ಸ್ಟಾಲಿನ್‌ರ ಹೇಳಿಕೆಗಳು ಮತ್ತು ಟೀಕೆಗಳು
ಮಂಡನೆಯ ಸಂದರ್ಭದಲ್ಲಿ ಸ್ಟಾಲಿನ್, “ಕೇಂದ್ರ ಸರ್ಕಾರವು ತಮಿಳುನಾಡಿಗೆ ಅನ್ಯಾಯ ದೋರಣೆ ಮಾಡುತ್ತಿದ್ದು, ಮನರೇಗಾ ಅಡಿಯಲ್ಲಿ ₹1,026 ಕೋಟಿ ವೇತನ ಮತ್ತು ₹1,087 ಕೋಟಿ ಸಾಮಗ್ರಿ ಅನುದಾನ ಬಿಡುಗಡೆ ಮಾಡುವುದನ್ನು ವಿಳಂಬ ಮಾಡಿದೆ. VB-G RAM G ಒಕ್ಕೂಟಕ್ಕೆ ವಿರುದ್ಧವಾಗಿದ್ದು, ರಾಜ್ಯಗಳ ಹಣಕಾಸು ಸ್ವಾಯತ್ತತೆ ಮತ್ತು ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ತಮಿಳುನಾಡು ಕೇಂದ್ರ ಮತ್ತು ರಾಜ್ಯ ಯೋಜನೆಗಳನ್ನು ಸಮಾನವಾಗಿ ನಡೆಸುತ್ತಿದ್ದರೂ ಕೇಂದ್ರದಿಂದ ದ್ರೋಹಕ್ಕೆ ಒಳಗಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಭೇಟಿ ನೀಡುವ ಮುನ್ನವೇ ಈ ಗೊತ್ತುವಳಿಯನ್ನು ಮಂಡಿಸಲಾಗಿದೆ. ತಾಕತ್ತಿದ್ದರೆ AIADMK ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿಯವರು ಮೋದಿಯವರೊಂದಿಗೆ ಈ ವಿಷಯವನ್ನು ಚರ್ಚಿಸಲಿ” ಎಂದು ಸವಾಲು ಹಾಕಿದರು.
ಹಿನ್ನೆಲೆ: ಮನರೇಗಾದಿಂದ ವಿಬಿ ಜಿ ರಾಮ್ ಜಿಗೆ ಬದಲಾವಣೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) 2005ರಲ್ಲಿ ಜಾರಿಗೆ ಬಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಖಾತರಿ ನೀಡುವ ಐತಿಹಾಸಿಕ ಕಾಯ್ದೆಯಾಗಿದೆ. ಇದು ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಕೇಂದ್ರ ಸರ್ಕಾರದ VB-G RAM G ಕಾಯ್ದೆ, 2025ರ ಮೂಲಕ ಮನರೇಗಾ ಕಾಯ್ದೆಯನ್ನು ಬದಲಾಯಿಸಿ, ಹೊಸ ಹೆಸರು ಮತ್ತು ರಚನೆಯನ್ನು ಜಾರಿಗೆ ತಂದಿದೆ. ಈ ಬದಲಾವಣೆಯು ಕೇಂದ್ರೀಕೃತ ನಿಯಂತ್ರಣವನ್ನು ಹೆಚ್ಚಿಸಿ, ರಾಜ್ಯಗಳ ಸ್ವಾಯತ್ತತೆಯನ್ನು ಕಡಿಮೆ ಮಾಡುತ್ತದೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಇದನ್ನೂ ಓದಿದ್ದೀರಾ? ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?
ತಮಿಳುನಾಡಿನಂತಹ ರಾಜ್ಯಗಳಲ್ಲಿ ಮನರೇಗಾ ಕಾಯ್ದೆಯು ಸುಮಾರು 74 ಲಕ್ಷ ಸಕ್ರಿಯ ಕಾರ್ಮಿಕರಿಗೆ(65 ಲಕ್ಷ ಕುಟುಂಬಗಳು, ಅದರಲ್ಲಿ 85% ಮಹಿಳೆಯರು) ಜೀವನಾಧಾರವಾಗಿದೆ. ಹಾಗಾಗಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೊತ್ತುವಳಿಯು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲದೆ, ಗ್ರಾಮೀಣ ಭಾರತದ ಜೀವನೋಪಾಯ ರಕ್ಷಣೆಗಾಗಿ ಕೈಗೊಂಡಿರುವ ಒಂದು ದೃಢ ನಿಲುವು. ಕೇಂದ್ರ ಸರ್ಕಾರದ ಪ್ರತಿಕ್ರಿಯೆಯು ಭವಿಷ್ಯದ ನಿರ್ಣಯಗಳನ್ನು ನಿರ್ಧರಿಸಲಿದೆ. ಹಾಗಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಸಮತೋಲನ ಕಾಯದುಕೊಳ್ಳಬೇಕು ಎಂಬುದನ್ನು ಈ ಗೊತ್ತುವಳಿ ಒತ್ತಿ ಹೇಳುತ್ತದೆ.
ಗ್ರಾಮೀಣ ಭಾರತದ ಬಡವರ ಹಕ್ಕುಗಳನ್ನು ರಕ್ಷಿಸುವುದು ಕೇವಲ ರಾಜಕೀಯ ವಿಷಯವಲ್ಲ; ಇದು ಸಂವಿಧಾನದ ಮೂಲ ತತ್ವಗಳಾದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜೀವನೋಪಾಯದ ಹಕ್ಕಿನ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರವು ಈ ಗೊತ್ತುವಳಿಯನ್ನು ಗಂಭೀರವಾಗಿ ಪರಿಗಣಿಸಿ, MGNREGAವನ್ನು ಮರಳಿ ಸ್ಥಾಪಿಸಿ, ಮಹಾತ್ಮಾ ಗಾಂಧಿಯ ಆದರ್ಶಗಳನ್ನು ಗೌರವಿಸಬೇಕು ಮತ್ತು ರಾಜ್ಯಗಳೊಂದಿಗೆ ಸಹಕಾರದ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸಬೇಕು. ಇಲ್ಲದಿದ್ದರೆ, ಗ್ರಾಮೀಣ ಭಾರತದ ಜನರ ಆಕ್ರೋಶವು ರಾಜಕೀಯ ಮತ್ತು ಸಾಮಾಜಿಕವಾಗಿ ದೊಡ್ಡ ಪರಿಣಾಮ ಬೀರಬಹುದು. ಈ ಗೊತ್ತುವಳಿಯು ಕೇವಲ ತಮಿಳುನಾಡಿನ ಧ್ವನಿಯಲ್ಲ; ಇಡೀ ದೇಶದ ಗ್ರಾಮೀಣ ಜನರ ಧ್ವನಿಯಾಗಿದೆ.





