‘ಕೇರಳ ಸ್ಟೋರಿ-2; ಗೋಸ್ ಬಿಯಾಂಡ್’ ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್‌ನ ಬೆಚು ಕುರಿಯನ್ ಥಾಮಸ್ ಅವರ ಏಕ ಸದಸ್ಯ ಪೀಠ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಸಿನಿಮಾ ಬಿಡುಗಡೆ ಇದ್ದ ಕಾನೂನು ಅಡೆತಡೆಯನ್ನು ಮುಕ್ತಗೊಳಿಸಿ ಶುಕ್ರವಾರ ಆದೇಶಿಸಿದೆ.
ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕರು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ನಿರ್ಮಾಪಕರ ಪರ ಹಾಜರಿದ್ದ ವಕೀಲ ನೀರಜ್ ಕಿಶನ್ ಕೌಲ್ ಮತ್ತು ಎಲ್ವಿನ್ ಪೀಟರ್, “ಸಿನಿಮಾದಲ್ಲಿ ಸ್ಪಷ್ಟ ನಿರಾಕರಣಾ ಸೂಚನೆಗಳಿವೆ, ಈ ಕಥೆ ಕೇವಲ ಕೇರಳಕ್ಕೆ ಸೀಮಿತವಲ್ಲ. ಬಹು ರಾಜ್ಯಗಳ ಹಿನ್ನೆಲೆಯನ್ನು ಒಳಗೊಂಡಿದೆ. ಸಿಬಿಎಫ್‌ಸಿ ಪ್ರಮಾಣೀಕೃತ ಚಿತ್ರದ ಬಿಡುಗಡೆಗೆ ನಿರ್ಬಂಧ ಹೇರಿರುವುದು ಸೆನ್ಸಾರ್ ಶಿಪ್‌ನ ತೀವ್ರ ರೂಪವಾಗಿದೆ” ಎಂದು ವಾದಿಸಿದ್ದರು.
ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ಪಿ.ವಿ. ಬಾಲಕೃಷ್ಣನ್ ಅವರಿದ್ದ ಪೀಠವು, ಹಿಂದಿನ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ.
ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ
ಸಿನಿಮಾ ವಿರುದ್ಧ ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಎಂಬವರು ಅರ್ಜಿ ಸಲ್ಲಿಸಿದ್ದರು. “ಸಿನಿಮಾದಲ್ಲಿ ಕೇರಳವನ್ನು ತಪ್ಪಾಗಿ ಚಿತ್ರಿಸಲಾಗಿದೆ. ಸಿನಿಮಾ ಬಿಡುಗಡೆಯಾದರೆ ಕೇರಳದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಸಾಧ್ಯತೆ ಇದೆ. ಚಿತ್ರದ ಶೀರ್ಷಿಕೆ, ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ಹಿಂಸಾಚಾರ ಪ್ರಚೋದಿಸುವ ಅಂಶಗಳಿವೆ. ಇದು ಕೇರಳ ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತದೆ. ಈ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಬೇಕು” ಎಂದು ವಾದಿಸಿದ್ದರು.
ಅವರ ಅರ್ಜಿಯನ್ನು ಆಲಿಸಿದ್ದ ಬೆಚು ಕುರಿಯನ್ ಥಾಮಸ್ ಅವರ ಪೀಠವು, ಸಿನಿಮಾ ವಿರುದ್ಧದ ಅರ್ಜಿಗಳನ್ನು ಪರಿಶೀಲಿಸಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಸೂಚಿಸಿತ್ತು. 15 ದಿನಗಳವರೆಗೆ ಚಿತ್ರದ ಬಿಡುಗಡೆಗೆ ತಡೆ ನೀಡಿತ್ತು.




