ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳಿಗೆ ಸಂಬಂಧಿಸಿದಂತೆ 2025ರ ಜುಲೈನಿಂದ ಡಿಸೆಂಬರ್‌ವರೆಗಿನ 6 ತಿಂಗಳಲ್ಲಿ 1,698 ಪ್ರಕರಣಗಳನ್ನು ದಾಖಲಿಸಲಾಗಿದೆ. 665 ಮಂದಿಯನ್ನು ಬಂಧಿಸಲಾಗಿದೆ. ರೈಲುಗಳ ಮೇಲೆ ದಾಳಿ ನಡೆಸುವವರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.
“ವಿವಿಧ ರೈಲ್ವೆ ವಲಯಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.ಇಂತಹ ಕಾನೂನುಬಾಹಿರ ಕೃತ್ಯಗಳು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಸುರಕ್ಷತೆಗೆ ಅಪಾಯ ಉಂಟುಮಾಡುತ್ತವೆ. ಜೊತೆಗೆ, ಅಮೂಲ್ಯವಾದ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟುಮಾಡುತ್ತವೆ” ಎಂದು ರೈಲ್ವೆ ಸಚಿವಾಲಯವು ಹೇಳಿದೆ.
ರೈಲುಗಳ ಮೇಲೆ ಕಲ್ಲು ತೂರಾಟದ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ದಾಳಿಕೋರರ ಬಂಧನವು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಮತ್ತು ರೈಲ್ವೆ ಆಸ್ತಿಗೆ ಹಾನಿ ಮಾಡುವ ಚಟುವಟಿಕೆಗಳ ವಿಚಾರವಾಗಿ ರೈಲ್ವೆಯ ಶೂನ್ಯ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
“ಭಾರತೀಯ ರೈಲ್ವೆಯು ಕಣ್ಗಾವಲು ಕ್ರಮಗಳನ್ನು ತೀವ್ರಗೊಳಿಸಿದೆ. ಕಾಣ್ಗಾವಲು ದುರ್ಬಲವಿರುವ ವಿಭಾಗಗಳಲ್ಲಿ ಗಸ್ತು ಹೆಚ್ಚಿಸಿದೆ. ಈ ಪ್ರಯತ್ನಗಳು ಅಪರಾಧಿಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಬಂಧಿಸಲು ಸಾಧ್ಯವಾಗುವಂತೆ ಮಾಡಿವೆ” ಎಂದು ತಿಳಿಸಿದೆ.
“ಕಲ್ಲು ತೂರಾಟವು ಗಂಭೀರ ಕ್ರಿಮಿನಲ್ ಅಪರಾಧವಾಗಿದೆ. ಆರೋಪಿಗಳ ವಿರುದ್ಧ ಪ್ರಕರಣಗಳ ನೋಂದಣಿ ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಲ್ಲು ತೂರಾಟ ಅಥವಾ ಸಂಬಂಧಿತ ಕೃತ್ಯಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ತೀವ್ರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ವಲಯವಾರು ಕಲ್ಲು ತೂರಾಟ ಪ್ರಕರಣಗಳು;
| ವಲಯ | ಪ್ರಕರಣಗಳ ಸಂಖ್ಯೆ |
| Northern Railway | 363 |
| East Central Railway | 219 |
| South Central Railway | 140 |
| North Central Railway | 126 |
| Western Railway | 116 |
| Southern Railway | 108 |
| Central Railway | 96 |
| Eastern Railway | 71 |
| Northeast Frontier Railway | 67 |
| South Western Railway | 80 |
| West Central Railway | 77 |
| South Eastern Railway | 51 |
| East Coast Railway | 50 |
| South East Central Railway | 51 |
| North Western Railway | 55 |
| North Eastern Railway | 25 |
| Konkan Railway | 3 |




