ಮೃಗಾಲಯದಲ್ಲೂ ಬೀದಿ ನಾಯಿಗಳ ಹಾವಳಿ ಇದ್ದು, ನಾಯಿಗಳ ಕಡಿತದಿಂದ 10 ಜಿಂಕೆಗಳು ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.
ತ್ರಿಶೂರ್‌ನಲ್ಲಿ ಕಳೆದ ತಿಂಗಳು ಹೊಸದಾಗಿ ‘ಪುತ್ತೂರು ಪ್ರಾಣಿ ಸಂಗ್ರಹಾಲಯ ಉದ್ಯಾನವನ’ವನ್ನು ತೆರೆಯಲಾಗಿದೆ. ಆದರೆ, ಈ ಮೃಗಾಲಯದಲ್ಲಿ ಭದ್ರತಾ ಲೋಪಗಳು ಕಂಡುಬಂದಿದ್ದು, ಮೃಗಾಲಯದಲ್ಲಿ ಬೀದಿ ನಾಯಿಗಳ ದಾಳಿಗೆ 10 ಜಿಂಕೆಗಳು ಬಲಿಯಾಗಿವೆ ಎಂದು ವರದಿಯಾಗಿದೆ. ಘಟನೆಯು ಮೃಗಾಲಯದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವನ್ಯಜೀವಿ ತಜ್ಞ ಡಾ. ಅರುಣ್ ಜಕಾರಿಯಾ ನೇತೃತ್ವದ ತಂಡವು ಮೃಗಾಯಲಕ್ಕೆ ತೆರಳಿದ್ದು, ಪರಿಶೀಲನೆ ಮತ್ತು ತನಿಖೆ ಆರಂಭಿಸಿದೆ. ಮೃತ ಜಿಂಕೆಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಮೃಗಾಲಯದ ನಿರ್ದೇಶಕ ನಾಗರಾಜ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಕ್ಟೋಬರ್ 28 ರಂದು ಮೃಗಾಲಯವನ್ನು ಉದ್ಘಾಟಿಸಿದರು. ಸಧ್ಯಕ್ಕೆ 80 ಪ್ರಭೇದದ 534 ಪ್ರಾಣಿಗಳನ್ನು ಒಳಗೊಂಡಿದೆ. 336 ಎಕರೆ ಪ್ರದೇಶದಲ್ಲಿರುವ ಮೃಗಾಲಯವು ಏಷ್ಯಾದ ಎರಡನೇ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ಎಂಬ ಖ್ಯಾತಿಯನ್ನೂ ಪಡೆದಿದೆ.
ಪುತ್ತೂರು ಪ್ರಾಣಿ ಸಂಗ್ರಹಾಲಯವು ಪ್ರವಾಸಿಗರಿಗೆ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡಿಲ್ಲ. ಮುಂಗಡವಾಗಿ ಟಿಕೆಟ್ ನೋಂದಣಿ ಮಾಡಿಕೊಂಡವರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶ ನೀಡಲಾಗುತ್ತಿದೆ.




