ರ‍್ಯಾಗಿಂಗ್ ಹೆಸರಿನಲ್ಲಿ 10ನೇ ವಿದ್ಯಾರ್ಥಿಯ ಮೇಲೆ 12ನೇ ತರಗತಿ ವಿದ್ಯಾರ್ಥಿಗಳು ಕೋಲು ಮತ್ತು ಬ್ಯಾಟ್‌ಗಳಿಂದ ಭೀಕರವಾಗಿ ಹಲ್ಲೆಗೈದಿರುವ ಘಟನೆ ತೆಲಂಗಾಣದ ರಾಜಪೇಟದಲ್ಲಿರುವ ಸಮಾಜ ಕಲ್ಯಾಣ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ನಡೆದಿದೆ. ಸುಮಾರು 20 ಹಿರಿಯ (12ನೇ ತರಗತಿ) ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಘಟನೆಯನ್ನು ಶಾಲಾ ಆಡಳಿತ ಮಂಡಳಿ ಮರೆಮಾಚಿತ್ತು. ಆದಾಗ್ಯೂ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಬೆಳಕಿಗೆ ಬಂದಿದೆ.
ಚಾಡಾ ಗ್ರಾಮದ ಸಂತ್ರಸ್ತ ವಿದ್ಯಾರ್ಥಿಯು ರಾಜಪೇಟ ವಸತಿ ಶಾಲೆಯಲ್ಲಿ 5ನೇ ತರಗತಿಯಿಂದಲೂ ವ್ಯಾಸಂಗ ಮಾಡುತ್ತಿದ್ದರು. ಶಾಲೆಯ ವೈಸ್-ಕ್ಯಾಪ್ಟನ್ ಕೂಡ ಆಗಿದ್ದರು. ಆತ ವೈಸ್-ಕ್ಯಾಪ್ಟನ್ ಆಗಿದ್ದ ಕಾರಣಕ್ಕಾಗಿಯೇ, ಆತನನ್ನು ಗುರಿಯಾಗಿಸಿಕೊಂಡು ಹಿರಿಯ ವಿದ್ಯಾರ್ಥಿಗಳು ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಸುಮಾರು 20 ವಿದ್ಯಾರ್ಥಿಗಳ ಗುಂಪೊಂದು ಬ್ಯಾಟ್‌ಗಳು ಮತ್ತು ಕೋಲುಗಳೊಂದಿಗೆ ಸಂತ್ರಸ್ತ ವಿದ್ಯಾರ್ಥಿಯ ಕೋಣೆಗೆ ನುಗ್ಗಿದ್ದಾರೆ. ಆತನನ್ನು ಅವಾಚ್ಯವಾಗಿ ನಿಂದಿಸಿ, ಹೊಡೆಯಲು ಆರಂಭಿಸಿದ್ದಾರೆ. ಹಲ್ಲೆಯ ದೃಶ್ಯವನ್ನು ಸ್ನೇಹಿತರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದಾಗ, ಹಲ್ಲೆಕೋರರು ಕೊಠಡಿಯ ದೀಪಗಳನ್ನು ಆಫ್ ಮಾಡಿ, ದಾಳಿಯನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತನನ್ನು ರಕ್ಷಿಸಲು ಪ್ರಯತ್ನಿಸಿದ ಇತರ ಐದು ವಿದ್ಯಾರ್ಥಿಗಳ ಮೇಲೂ ಆರೋಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಸಂತ್ರಸ್ತ ವಿದ್ಯಾರ್ಥಿಯ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ನೋಡಿ, ಆತಂಕಗೊಂಡು ಶಾಲೆಗೆ ಧಾವಿಸಿದ್ದಾರೆ. ದಾಳಿಯನ್ನು ತಡೆಯುವಲ್ಲಿ ವಿಫಲವಾದ ಮತ್ತು ಘಟನೆಯನ್ನು ಮುಚ್ಚಿಟ್ಟಿದ್ದ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೈದಿರುವ ಎಲ್ಲ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಸ್ಥರು ಶಾಲೆಯ ಎದುರು ಧರಣಿ ನಡೆಸಿದ್ದಾರೆ.
“ಕಳೆದ ಎರಡು ದಿನಗಳಿಂದ ಶಾಲೆಯಲ್ಲಿ ವಿಶೇಷ ಸಭೆಗಳು ಮತ್ತು ಸಮಾಲೋಚನೆ ನಡೆದಿದೆ. ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ” ಎಂದು ಶಾಲೆಯ ಪ್ರಾಂಶುಪಾಲ ಸುಧಾಕರ್ ತಿಳಿಸಿದ್ದಾರೆ.




