ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರವೇಶ ಸಂದರ್ಶನಗಳು ಕೇವಲ ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಹೊರಹಾಕುವ ಒಂದು ತಂತ್ರವಾಗಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಲಖನೌದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.
“ನಾನು ದೆಹಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸಂದರ್ಶನಗಳು ಕೇವಲ ವಿದ್ಯಾರ್ಥಿಗಳನ್ನು ಹೊರಹಾಕುವ ಒಂದು ವಿಧಾನವಾಗಿದೆ. ಅವರು ನಿಮ್ಮ ಜಾತಿ ಯಾವುದು ಎಂದು ಕೇಳುತ್ತಾರೆ, ಅನಂತರ ನೀವು ಸಂದರ್ಶನದಲ್ಲಿ ವಿಫಲರಾಗುತ್ತೀರಿ” ಎಂದು ಅವರು ಟೀಕಿಸಿದ್ದಾರೆ.
ಇದರ ಜೊತೆಗೆ ಆರ್‌ಎಸ್‌ಎಸ್ ಸಾಂಸ್ಥಿಕ ರಚನೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವಿಲ್ಲ ಎಂದೂ ಅವರು ದೂರಿದ್ದಾರೆ. “ಆರ್‌ಎಸ್‌ಎಸ್ ಸಂಘಟನೆಗಳು ಹಾಗೂ ಕೇಂದ್ರದಲ್ಲಿರುವ ಅವರ ಪ್ರಚಾರಕರ ಪಟ್ಟಿಯನ್ನು ಒಮ್ಮೆ ತೆಗೆದುನೋಡಿ. ಅಲ್ಲಿ ನಿಮಗೆ ಒಬ್ಬ ಒಬಿಸಿ, ಒಬ್ಬ ದಲಿತ ಅಥವಾ ಒಬ್ಬ ಆದಿವಾಸಿ ಸಿಗುವುದಿಲ್ಲ. ಇದು ಸಂಪೂರ್ಣವಾಗಿ ಸಂವಿಧಾನಕ್ಕೆ ವಿರುದ್ಧವಾಗಿದೆ” ಎಂದು ರಾಹುಲ್ ಹೇಳಿದ್ದರು.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
ಆರೋಪ ತಳ್ಳಿಹಾಕಿದ ದೆಹಲಿ ವಿವಿ
ರಾಹುಲ್ ಗಾಂಧಿ ಅವರ ಈ ಆರೋಪಗಳಿಗೆ ಎಕ್ಸ್ ವೇದಿಕೆಯಲ್ಲಿ ದೆಹಲಿ ವಿವಿ ಸ್ಪಷ್ಟನೆ ನೀಡಿದೆ. ವಿಪಕ್ಷ ನಾಯಕರು ಇಂತಹ ಹೇಳಿಕೆಗಳನ್ನು ನೀಡುವ ಮುನ್ನ ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.
“ದೆಹಲಿ ವಿಶ್ವವಿದ್ಯಾಲಯವು ಪ್ರಧಾನವಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (CUET – ಕ್ಯುಯೆಟ್) ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತದೆ. ಬಹುಪಾಲು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರಮಾಣಿತ ಪ್ರವೇಶ ಪ್ರಕ್ರಿಯೆಯಲ್ಲಿ ಸಂದರ್ಶನಗಳನ್ನು ಕಡ್ಡಾಯಗೊಳಿಸಿಲ್ಲ. ಒಂದು ವೇಳೆ ವಿಪಕ್ಷ ನಾಯಕರು ಬೋಧಕ ಹುದ್ದೆಗಳ ನೇಮಕಾತಿಯ (ಉದಾಹರಣೆಗೆ ಅಧ್ಯಾಪಕರ ಹುದ್ದೆಗಳು) ಬಗ್ಗೆ ಪ್ರಸ್ತಾಪಿಸಿದ್ದರೆ, ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯವು ಎಲ್ಲಾ ವರ್ಗಗಳ ಅಡಿಯಲ್ಲಿ ಸಾವಿರಾರು ಶಿಕ್ಷಕರನ್ನು ನೇಮಿಸಿಕೊಂಡಿದೆ” ಎಂದು ವಿವಿ ವಿವರಿಸಿದೆ.





