ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರು 2025ರಲ್ಲಿ ದೇಶದಲ್ಲೇ ಅತ್ಯುತ್ತಮ ನಗರ ಎನಿಸಿಕೊಂಡಿದೆ. ಈ ಮೂಲಕ ಮಹಿಳಾ ಸ್ನೇಹಿ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಮಹಾನಗರ ಎಂಬ ಹೆಗ್ಗಳಿಕೆ ಪಡೆದಿದೆ. ಚೆನ್ನೈ ಮೂಲದ ‘ಅವತಾರ್’ ಸಂಸ್ಥೆ ಬಿಡುಗಡೆ ಮಾಡಿದ ಅಧ್ಯಯನ ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಸಂಸ್ಥೆಯು ಸಾಮಾಜಿಕ ಮೂಲಸೌಕರ್ಯ ಮತ್ತು ಕೈಗಾರಿಕಾ ಸೇರ್ಪಡೆಯ ವಿಚಾರದಲ್ಲಿ ಮಹಿಳೆಯರಿಗೆ ಎಷ್ಟು ಪರಿಣಾಮಕಾರಿಯಾಗಿ ಬೆಂಬಲ ನೀಡಲಾಗುತ್ತಿದೆ ಎಂಬ ನೆಲೆಗಟ್ಟಿನಲ್ಲಿ 125 ನಗರಗಳನ್ನು ಮೌಲ್ಯಮಾಪನ ಮಾಡಿದೆ. ಈ ಮಾನದಂಡದಲ್ಲಿ ವಿಶ್ಲೇಷಿಸಿದಾಗ ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನು ಓದಿದ್ದೀರಾ? ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು 53.29 City Inclusion Score (CIS) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ (49.86) ಮತ್ತು ಪುಣೆ (46.27) ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಹೈದರಾಬಾದ್ (46.04) ಮತ್ತು ಮುಂಬೈ (44.49) ಮೊದಲ ಐದು ಸ್ಥಾನಗಳಲ್ಲಿದೆ. ಇನ್ನು ಪಟ್ಟಿಯಲ್ಲಿ ದಕ್ಷಿಣ ಮತ್ತು ಪಶ್ಚಿಮ ಮಹಾನಗರಗಳೇ ಪ್ರಾಬಲ್ಯವನ್ನು ಪಡೆದುಕೊಂಡಿದೆ. ಟಾಪ್ 10 ನಗರಗಳಲ್ಲಿ ಬೆಂಗಳೂರು, ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ, ಕೋಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಮತ್ತು ಕೊಯಮತ್ತೂರು ಸೇರಿವೆ.
ಸುರಕ್ಷತೆ, ಆರೋಗ್ಯ, ಶಿಕ್ಷಣ, ಚಲನಶೀಲತೆ ಮತ್ತು ವಾಸಯೋಗ್ಯತೆಯಂತಹ ಅಂಶಗಳನ್ನು ಅಳೆಯುವ ಸಾಮಾಜಿಕ ಸೇರ್ಪಡೆ ಅಂಕ (SIS) ಮತ್ತು ಔಪಚಾರಿಕ ಉದ್ಯೋಗಾವಕಾಶಗಳು, ಕಾರ್ಪೊರೇಟ್ ಸೇರ್ಪಡೆ, ಕೌಶಲ್ಯ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಪತ್ತೆಹಚ್ಚುವ ಕೈಗಾರಿಕಾ ಸೇರ್ಪಡೆ ಅಂಕ (IIS) ಆಧಾರದಲ್ಲಿ ಈ ಸೂಚ್ಯಂಕವನ್ನು ನಿಗದಿಪಡಿಸಲಾಗಿದೆ. ಎರಡೂ ಮಾನದಂಡಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಗರಗಳು ಮಹಿಳೆಯರ ದೀರ್ಘಕಾಲೀನ ವೃತ್ತಿಜೀವನದ ಬೆಳವಣಿಗೆಗೆ ಸಹಾಯಕ ಎಂದು ಅಧ್ಯಯನವು ಹೇಳಿದೆ.
ಇನ್ನು ಸುರಕ್ಷತೆ, ಸಾರ್ವಜನಿಕ ಸೇವೆಗಳು ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆಯಂತಹ ಕ್ಷೇತ್ರದಲ್ಲಿ ಚೆನ್ನೈ ಮಹಿಳೆಯರಿಗೆ ಉತ್ತಮ ನಗರವಾಗಿದೆ. ಬೆಂಗಳೂರು ಕೈಗಾರಿಕಾ ಸೇರ್ಪಡೆಯಲ್ಲಿ ಮುಂದಿದೆ. ಬೆಂಗಳೂರು ಪ್ರಬುದ್ಧ ಕಾರ್ಪೊರೇಟ್ ಪರಿಸರ ವ್ಯವಸ್ಥೆ, ವೈವಿಧ್ಯತೆ ಹೊಂದಿದೆ ಎಂದು ವರದಿ ಹೇಳುತ್ತದೆ.
ದಕ್ಷಿಣ ಭಾರತವು ಎಲ್ಲಾ ಸೂಚ್ಯಂಕಗಳಲ್ಲಿ ಅತ್ಯಧಿಕ ಸರಾಸರಿಗಳನ್ನು ದಾಖಲಿಸಿದ್ದು, ನಂತರ ನಂತರ ಪಶ್ಚಿಮ ಭಾರತದ ನಗರಗಳಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಮಧ್ಯ ಮತ್ತು ಪೂರ್ವ ಪ್ರದೇಶಗಳು ಮಹಿಳೆಯರನ್ನು ಕೈಗಾರಿಕೆಗೆ ಸೇರಿಸುವ ವಿಚಾರದಲ್ಲಿ ಹಿಂದುಳಿದಿವೆ. ಸಾಮಾಜಿಕ ಮೂಲಸೌಕರ್ಯದಲ್ಲಿ ಕೆಲವು ಸುಧಾರಣೆಳಿದ್ದರೂ ಮಹಿಳೆಯರಿಗೆ ಸೀಮಿತ ಉದ್ಯೋಗವಕಾಶಗಳಿವೆ.





