ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ 2,929.05 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಎಂಟು ಗಂಟೆಗಳ ಕಾಲ ಅನಿಲ್ ಅಂಬಾನಿಯ ವಿಚಾರಣೆ ನಡೆಸಿದ್ದಾರೆ. ಹಾಗೆಯೇ ಮತ್ತೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೂರಿನ ನಂತರ 2025ರ ಆಗಸ್ಟ್ 21ರಂದು ಪ್ರಕರಣವನ್ನು ದಾಖಲಿಸಲಾಗಿದೆ. 2013 ಮತ್ತು 2017ರ ನಡುವೆ ದೊಡ್ಡ ಪ್ರಮಾಣದ ಹಣ ವರ್ಗಾವಣೆ ಮತ್ತು ಸಾಲದ ನಿಧಿ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು
ಒಟ್ಟು 17 ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 19,694.33 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ಈ ಪೈಕಿ ಎಸ್‌ಬಿಐಗೆ 2,929.05 ಕೋಟಿ ರೂಪಾಯಿಗಳ ನಷ್ಟವನ್ನುಂಟಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿದಂತೆ ಹಲವು ಬ್ಯಾಂಕುಗಳು ಇದೇ ರೀತಿ ದೂರು ದಾಖಲಿಸಿದೆ.
ಈ ವರ್ಷದ ಆರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ದೂರುಗಳ ಆಧಾರದ ಮೇಲೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಾಗೆಯೆ 2025ರ ಆಗಸ್ಟ್‌ನಲ್ಲಿ ಮುಂಬೈನಲ್ಲಿರುವ ಕಂಪನಿಯ ಕಚೇರಿಗಳು ಮತ್ತು ಅನಿಲ್ ಅಂಬಾನಿ ನಿವಾಸದಲ್ಲಿ ಶೋಧ ನಡೆಸಲಾಗಿದೆ. ತನಿಖಾಧಿಕಾರಿಗಳು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನಿಲ್ ಅಂಬಾನಿಯ ವಿಚಾರಣೆ ನಡೆಯುತ್ತಿದೆ.





