ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಚೆನ್ನಾಗಿಲ್ಲ. ಆದ ಕಾರಣದಿಂದಾಗಿ ಅವರ ಬಂಧನದ ಬಗ್ಗೆ ಮರುಪರಿಶೀಲಿಸಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಶಿಕ್ಷಣತಜ್ಞ ವಾಂಗ್‌ಚುಕ್ ಅವರನ್ನು ಸೆಪ್ಟೆಂಬರ್‌ನಲ್ಲಿ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ನಾಲ್ವರ ಸಾವಿಗೆ ಕಾರಣವಾದ ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ನಿರಂತರವಾಗಿ ಹೋರಾಡುತ್ತಾ ಬಂದವರು ಸೋನಮ್. ಸದ್ಯ 100ಕ್ಕೂ ಅಧಿಕ ದಿನಗಳಿಂದ ಜೋಧಪುರ ಜೈಲಿನಲ್ಲಿದ್ದು, ಅವರ ಆರೋಗ್ಯ ನಿರಂತರವಾಗಿ ಹದಗೆಡುತ್ತಿದೆ.
ವಾಂಗ್‌ಚುಕ್ ಅವರ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಲೆ ಅವರ ಪೀಠವು, “ನ್ಯಾಯಾಲಯದ ಅಧಿಕಾರಿಯಾಗಿ ಈ ಬಗ್ಗೆ ಒಮ್ಮೆ ಯೋಚಿಸಿ. ಬಂಧನ ಆದೇಶವು ಸುಮಾರು ಐದು ತಿಂಗಳು ಹಳೆಯದು. ಬಂಧಿತನ ಆರೋಗ್ಯ ಸ್ಥಿತಿಯನ್ನು ನೋಡಿದರೆ, ಖಂಡಿತವಾಗಿಯೂ ಉತ್ತಮವಾಗಿಲ್ಲ. ಆದ್ದರಿಂದಾಗಿ ಬಂಧನ ಆದೇಶವನ್ನು ಮತ್ತೆ ಪರಿಶೀಲಿಸಬೇಕಾಗುತ್ತದೆ” ಎಂದು ಹೇಳಿದೆ.
ಇನ್ನು ಈಗಾಗಲೇ ವಾಂಗ್‌ಚುಕ್ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ವೇಳೆಯೇ ವೈದ್ಯಕೀಯ ವರದಿ ಪರಿಶೀಲಿಸಿದೆ. ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರನ್ನು ಉದ್ದೇಶಿಸಿ ಮಾತನಾಡಿದ ಪೀಠ, “ಸರ್ಕಾರವು ಪುನರ್ವಿಮರ್ಶಿಸಲು, ಮರುಪರಿಶೀಲಿಸಲು ಸಾಧ್ಯತೆ ಇದೆಯೇ” ಎಂದು ಪ್ರಶ್ನಿಸಿದೆ.





