ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲೆ-ಕಮಲ್ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿಯಂದು ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಬ್ಬರಿಗೂ ಪ್ರಾರ್ಥನೆ ಸಲ್ಲಿಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು, ಬಸಂತ ಪಂಚಮಿಯಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಿಂದೂಗಳಿಗೆ ಪೂಜೆ ಸಲ್ಲಿಸಲು ಹಾಗೂ ಅದೇ ದಿನ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಿದೆ. ನಮಾಜ್‌ಗೆ ಬರುವವರ ಪಟ್ಟಿಯನ್ನು ಮುಂಚಿತವಾಗಿ ಜಿಲ್ಲಾ ಆಡಳಿತಕ್ಕೆ ನೀಡುವಂತೆ ಮುಸ್ಲಿಂ ಸಮುದಾಯಕ್ಕೆ ಕೋರ್ಟ್ ಸೂಚಿಸಿದೆ.
ಭಾರತೀಯ ಪುರಾತತ್ವ ಇಲಾಖೆಯ (ASI) ಸಂರಕ್ಷಿತ ಸ್ಮಾರಕವಾಗಿರುವ ಇದನ್ನು ಹಿಂದೂಗಳು ವಾಗ್ದೇವಿ (ಸರಸ್ವತಿ) ದೇವಾಲಯವೆಂದು ಪರಿಗಣಿಸಿದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ಏನಿದು ವಿವಾದ?
ಭೋಜ್‌ಶಾಲೆ ಸಂಕೀರ್ಣವು ಶತಮಾನಗಳ ಹಿಂದಿನ ಸರಸ್ವತಿ ದೇವಾಲಯವಾಗಿತ್ತು, ನಂತರ ಅದನ್ನು ಕೆಡವಿ ಅಲಾವುದ್ದೀನ್ ಖಿಲ್ಜಿ ಆಳ್ವಿಕೆಯಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಹಿಂದೂಪರ ಸಂಘಟನೆಗಳ ವಾದ. ಇದಕ್ಕೆ ಪೂರಕವಾಗಿ ಎಎಸ್‌ಐ ವರದಿಗಳು ಅಲ್ಲಿನ ಶಿಲಾಶಾಸನ ಮತ್ತು ಕೆತ್ತನೆಗಳನ್ನು ಉಲ್ಲೇಖಿಸಿವೆ. ಆದರೆ, ಕಳೆದ 700 ವರ್ಷಗಳಿಂದ ಇಲ್ಲಿ ನಮಾಜ್ ನಡೆಯುತ್ತಿದ್ದು, ಇದೊಂದು ಮಸೀದಿಯೇ ಹೊರತು ದೇವಾಲಯವಲ್ಲ ಎಂದು ಮುಸ್ಲಿಂ ಮುಖಂಡರು ಪ್ರತಿಪಾದಿಸುತ್ತಾರೆ.
ಪ್ರಸ್ತುತ ಕಾನೂನು ಸುವ್ಯವಸ್ಥೆಗಾಗಿ ಧಾರ್ ಜಿಲ್ಲೆಯಲ್ಲಿ 8,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಎಸ್‌ಐ ಸಿದ್ಧಪಡಿಸಿದ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಹೈಕೋರ್ಟ್ ಮೂಲಕ ಎರಡೂ ಸಮುದಾಯಗಳಿಗೆ ಹಂಚಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.





