ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ಎಂದು ಹೇಳಿಕೊಂಡು ದೇಶದಲ್ಲಿ ನಡೆದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್ ಮಾಹಿತಿಗಳನ್ನು ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸೆಪ್ಟೆಂಬರ್ 1ರಿಂದ 16ರ ನಡುವೆ ಅಂಬಾಲಾದ ಹಿರಿಯ ನಾಗರಿಕ ದಂಪತಿಗಳು ಡಿಜಿಟಲ್ ಬಂಧನಕ್ಕೆ ಒಳಗಾಗಿ ತಮ್ಮ ಜೀವಮಾನದ ಉಳಿತಾಯವೆಲ್ಲವನ್ನೂ ಕಳೆದುಕೊಂಡಿದ್ದಾರೆ.ಈ ಸಂಬಂಧ ದಂಪತಿ ಸೆಪ್ಟೆಂಬರ್ 16ರಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಇದನ್ನು ಓದಿದ್ದೀರಾ? ಡಿಜಿಟಲ್ ಅರೆಸ್ಟ್ ಪ್ರಕರಣಗಳ ಹೆಚ್ಚಳ: ಸಿಬಿಐ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ಈ ಹಿಂದೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯಮಾಲಾ ಬಾಗ್ಚಿ ಅವರ ದ್ವಿಸದಸ್ಯ ಪೀಠವು ಕೇಂದ್ರ ಮತ್ತು ಸಿಬಿಐಗೆ ನೋಟಿಸ್ ನೀಡಿದೆ. ಸುಪ್ರೀಂ ಕೋರ್ಟ್ ಹರಿಯಾಣ ಸರ್ಕಾರ ಹಾಗೂ ಅಂಬಾಲಾದ ಸೈಬರ್ ಅಪರಾಧ ಘಟಕಕ್ಕೂ ನೋಟಿಸ್ ನೀಡಿದೆ. ಇದೀಗ ಅದೇ ಪೀಠ ಸೋಮವಾರ ವಿಚಾರಣೆ ಮುಂದುವರಿಸಿದ್ದು ಎಫ್‌ಐಆರ್ ಮಾಹಿತಿಗಳನ್ನು ನೀಡುವಂತೆ ಸೂಚಿಸಿದೆ.
“ದೇಶದ ವಿವಿಧ ಭಾಗಗಳಲ್ಲಿ ಒಂದಕ್ಕಿಂತ ಅಧಿಕ ಇಂತಹ ಪ್ರಕರಣಗಳು ನಡೆದಿವೆ. ಇದು ದೇಶದಾದ್ಯಂತ ಮತ್ತು ದೇಶದ ಎಲ್ಲೆ ಮೀರಿ ನಡೆದಿರುವ/ ನಡೆಯುತ್ತಿರುವ ಅಪರಾಧ ಪ್ರಕರಣವಾದ ಕಾರಣ ದೇಶದಾದ್ಯಂತ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸುವಂತೆ ನಾವು ಸಿಬಿಐಗೆ ಸೂಚನೆ ನೀಡಿದ್ದೇವೆ” ಎಂದು ಹೇಳಿದ್ದಾರೆ.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ, “ಈ ಹಗರಣಗಳ ರುವಾರಿಗಳು ದೇಶದ ಹೊರಭಾಗದಲ್ಲಿದ್ದಾರೆ. ಮೈಯನ್ಮಾರ್, ಥೈಲ್ಯಾಂಡ್ ಸೇರಿದಂತೆ ಏಷ್ಯಾದ ಹಲವು ಭಾಗಗಳಲ್ಲಿ ಈ ತಂಡವಿದೆ” ಎಂದರು.
ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾಲ್ ಸೆಂಟರ್ ಕಚೇರಿ ತೆರೆದು ಅದರಲ್ಲೇ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಅಮೆರಿಕ, ಕೆನಡಾದ ಪ್ರಜೆಗಳನ್ನು ವಂಚಿಸುತ್ತಿದ್ದ ವಿವಿಧ ರಾಜ್ಯಗಳ 16 ಮಂದಿಯನ್ನು ಎಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಬಂಧಿಸಿದ್ದಾರೆ. ‘ಸಿಬಿಟ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಲ್ಲಿ ಕಂಪನಿಯನ್ನು ನಡೆಸಲಾಗುತ್ತಿತ್ತು.





