ಯಾವುದೇ ಮಸೀದಿ ಅಥವಾ ಧಾರ್ಮಿಕ ರಚನೆಗಳಿಗೆ ಮೊಘಲ್ ಚಕ್ರವರ್ತಿ ಬಾಬರ್ ಅಥವಾ ಬಾಬರಿ ಮಸೀದಿಯ ಹೆಸರಿಡುವುದನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ. ಬಳಿಕ, ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ‘ಬಾಬರಿ ಮಸೀದಿ’ ಮಾದರಿಯ ಮಸೀದಿ ನಿರ್ಮಿಸುವುದಾಗಿ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು 2025ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಅವರ ಘೋಷಣೆಯನ್ನು ಆಧಾರವಾಗಿಟ್ಟುಕೊಂಡು ಯಾವುದೇ ಧಾರ್ಮಿಕ ಕಟ್ಟಡಗಳಿಗೆ ಬಾಬರ್ ಅಥವಾ ಬಾಬರಿ ಮಸೀದಿ ಎಂಬ ಹೆಸರು ಇಡದಂತೆ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು.
ಬಾಬರ್‌ನನ್ನು ‘ಆಕ್ರಮಣಕಾರಿ’ ಎಂದಿದ್ದ ಅರ್ಜಿದಾರರು, “ಭಾರತದಾದ್ಯಂತ ಯಾವುದೇ ಮಸೀದಿ ಅಥವಾ ಧಾರ್ಮಿಕ ರಚನೆಯನ್ನು ನಿರ್ಮಾಣ ಮಾಡುವುದು, ಸ್ಥಾಪಿಸುವುದು ಅಥವಾ ಹೆಸರಿಸುವುದನ್ನು ತಡೆಯಬೇಕು ಮತ್ತು ನಿಷೇಧ ಹೇರಬೇಕು. ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಹಾಗೂ ಇತರರಿಗೆ ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದ್ದರು.




