ಟೈಮ್ಸ್ ಆಫ್ ಇಂಡಿಯಾದ ಓದುಗರಿಗೆ ಪತ್ರಿಕೆಯ ಎಲ್ಲಾ ಪುರವಣಿಗಳು ಹಾಗೂ ಭಾನುವಾರದ ನಿಯತಕಾಲಿಕೆಗಳು ಸಂಪೂರ್ಣವಾಗಿ ಸಿಗುವಂತಾಗಬೇಕು ಎಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
“ನ್ಯಾಯಾಲಯವು ಟೈಮ್ಸ್ ಆಫ್ ಇಂಡಿಯಾ ವಿರುದ್ಧ ರಿಟ್ ಅರ್ಜಿ ಸ್ವೀಕರಿಸಲು, ಅದೊಂದು ರಾಜ್ಯವೇ” ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ವಿಕ್ರಂ ನಾಥ್ ಹಾಗೂ ಸಂದೀಪ್ ಮೆಹ್ತಾ ಒಳಗೊಂಡ ಪೀಠವು, “ಅರ್ಜಿದಾರರು ಇದನ್ನು ತಮ್ಮ ಸ್ಥಳೀಯ ಪತ್ರಿಕೆ ವಿತರಕರ ಬಳಿ ಮಾತನಾಡಿ, ಬಗೆಹರಿಸಿಕೊಳ್ಳಬೇಕು” ಎಂದು ಸಲಹೆ ನೀಡಿದೆ.
ಪತ್ರಿಕೆಗಳನ್ನು ಸರಿಯಾಗಿ ಪೂರೈಸದಿರುವುದು ಪತ್ರಿಕೆಯ ಎಲ್ಲಾ ಪುಟಗಳು ಲಭ್ಯವಾಗದಿರುವುದರ ಕುರಿತು ಕಾಳಜಿ ಹೊಂದಿದ ಅರ್ಜಿದಾರರು ಓದುಗರನ್ನು ಈ ರೀತಿ ವಂಚಿಸುವುದನ್ನು ತಡೆಯಲು ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದರು. ಜೊತೆಗೆ ಪ್ರಾಣಿ ಆಶ್ರಯತಾಣಗಳಿಗೆ ಇತರೆ ಸಮಾಜಮುಖಿ ಕಾರ್ಯಗಳಿಗೆ ರೂ.10 ಕೋಟಿ ದೇಣಿಗೆ ನೀಡುವಂತೆ ನಿರ್ದೇಶಿಸುವುದು ಅರ್ಜಿದಾರರ ಇನ್ನೊಂದು ಕೋರಿಕೆಯಾಗಿತ್ತು. ಅರ್ಜಿದಾರರಾದ ರಾಥೋಡ್ ಇಂದು ನಿಯತಕಾಲಿಕೆಗಳು ಹಾಗೂ ಪುರವಣಿಗಳನ್ನು ಪೂರೈಕೆ ಮಾಡುವಲ್ಲಿ ಪತ್ರಿಕೆಯು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿದ್ದು, ಈ ದೂರು ಸಾರ್ವಜನಿಕ ಅಥವಾ ಗ್ರಾಹಕರ ಖಾಸಗಿ ದೂರಾಗಿದೆ. ಸಾಂವಿಧಾನಿಕವಾಗಿ ಪರಿಹರಿಸುವ ಬದಲು ಸ್ಥಳೀಯವಾಗಿ ಪರಿಹರಿಸಿಕೊಳ್ಳುವಂತೆ ಪೀಠ ಸೂಚಿಸಿದೆ.
ಇದಕ್ಕೆ ಪ್ರತಿಯಾಗಿ ಅರ್ಜಿದಾರರು, “ಸಾರ್ವಜನಿಕರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಇದು ಹಲವು ಓದುಗರ ಆರೋಪವಾಗಿದ್ದು ಈ ಕುರಿತು ಪತ್ರಿಕೆಗೆ ಪತ್ರ ಬರೆದಿದ್ದೇನೆ” ಎಂದು ಪೀಠಕ್ಕೆ ತಿಳಿಸಿದರು.
“ನೀವು ಈ ಕುರಿತು ಒಂದು ಸಾಮಾಜಿಕ ಅಭಿಯಾನವನ್ನು ಆರಂಭಿಸಿ. ಆಗ ಪತ್ರಿಕೆಯವರೇ ನಿಮ್ಮ ಮನೆಗೆ ಓಡಿ ಬರುತ್ತಾರೆ. ಆದರೆ, ಪ್ರಸ್ತುತ ಪತ್ರಿಕೆಗಳೇ ಸಾಕಷ್ಟು ಸಂಕಷ್ಟ ಅನುಭವಿಸುತ್ತಿವೆ” ಎಂದು ಪೀಠ ಉತ್ತರಿಸಿದೆ.





