ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಶಿಕ್ಷಕಿಯನ್ನು ಶಾಲೆಯಿಂದ ಹೊರಹಾಕಿದ ಮತ್ತು ಗುಜರಾತ್ ಶಾಲೆಯೊಂದರಲ್ಲಿ ಒಂದು ವರ್ಷದೊಳಗೆ ಶಿಕ್ಷಕಿಗೆ ಕೆಲಸ ನಿರಾಕರಿಸಿದ ಎರಡು ಶಾಲೆಗಳ ಕ್ರಮಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಖಂಡಿಸಿದೆ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ, ಸಮಾನ ಅವಕಾಶ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿದೆ.
2022ರ ಡಿಸೆಂಬರ್‌ನಲ್ಲಿ ಲಿಂಗ ಆಧಾರಿತ ತಾರತಮ್ಯ ಮಾಡಿ ಯುಪಿಯ ಲಖಿಂಪುರ ಖೇರಿ ಶಾಲೆಯು ತಮ್ಮನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಲಿಂಗತ್ವ ಅಲ್ಪಸಂಖ್ಯಾತರಾದ ಜೇನ್ ಕೌಶಿಕ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅವರಿಗೆ 2023ರ ಜುಲೈನಲ್ಲಿ ಗುಜರಾತ್‌ನ ಶಾಲೆಯೊಂದರಲ್ಲಿ ಲಿಂಗದ ಆಧಾರದಲ್ಲಿ ಉದ್ಯೋಗ ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಕೋರ್ಟ್‌ಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯ: ಸುಪ್ರೀಂ ಕೋರ್ಟ್ ಆದೇಶ
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, “ಈ ತೀರ್ಪು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೆಯೇ ತಾರತಮ್ಯದ ವಿರುದ್ಧ ಮಾರ್ಗಸೂಚಿಗಳನ್ನು ನೀಡುತ್ತದೆ” ಎಂದು ಹೇಳಿದೆ.
ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ಆಶಾ ಮೆನನ್ ನೇತೃತ್ವದ ಸಮಿತಿಯು, ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರು ಸೇರಿದಂತೆ ಸದಸ್ಯರನ್ನು ಒಳಗೊಂಡಿದ್ದು, ಈ ವಿಷಯವನ್ನು ಅಧ್ಯಯನ ಮಾಡಿ ಸಮಾನ ಅವಕಾಶ ನೀತಿಯನ್ನು ಪ್ರಸ್ತಾಪಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾನ ಉದ್ಯೋಗಾವಕಾಶ, ಸಮಗ್ರ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವಂತೆ ಸಮಿತಿಯನ್ನು ಕೋರ್ಟ್ ಒತ್ತಾಯಿಸಿದೆ.





