ಮಹಿಳಾ ಉದ್ಯೋಗಿಗಳು ಮುಟ್ಟಾಗಿದ್ದಾರೆ ಎಂಬುದಕ್ಕೆ ಪುರಾವೆ ಕೇಳಿದ ಹರಿಯಾಣ ವಿಶ್ವವಿದ್ಯಾನಿಲಯಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಹರಿಯಾಣದ ಮಹಾರಾಶಿ ದಯಾನಂದ ವಿಶ್ವವಿದ್ಯಾಲಯದವು ಮಹಿಳಾ ಪೌರ ಕಾರ್ಮಿಕರು ಮುಟ್ಟಾದಾಗ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದಿದ್ದರೆ ಪುರಾವೆಯಾಗಿ ತಮ್ಮ ಖಾಸಗಿ ಅಂಗಗಳ ಚಿತ್ರಗಳನ್ನು ನೀಡಲು ತಿಳಿಸಿದೆ ಎಂದು ಆರೋಪಿಸಲಾಗಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಕೇಂದ್ರ ಸರ್ಕಾರಕ್ಕೂ ನೋಟಿಸ್ ನೀಡಿದೆ. ಹಾಗೆಯೇ “ಇದು ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ಮುಟ್ಟಿನ ರಜೆಯನ್ನು ನೀಡುತ್ತಿದ್ದಾರೆ. ನನಗೆ ಹರಿಯಾಣ ವಿಶ್ವವಿದ್ಯಾನಿಲಯದ ಘಟನೆ ನೋಡಿದಾಗ ಕರ್ನಾಟಕದಲ್ಲಿಯೂ ರಜೆ ನೀಡಲು ಪುರಾವೆ ಕೇಳುತ್ತಾರೆಯೇ ಎಂಬ ಯೋಚನೆ ಬಂದಿತ್ತು” ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನ್ಯಾ. ಹೇಮಾ ಸಮಿತಿ ವರದಿ ಬಹಿರಂಗಪಡಿಸಿದ್ದು ಮಲಯಾಳಂ ಚಿತ್ರರಂಗದ ಹುಳುಕನ್ನಷ್ಟೇ ಅಲ್ಲ…
“ಇದು ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯರು ಮುಟ್ಟಿನ ರಜೆ ಪಡೆದಾಗ ಅವರ ಅನುಪಸ್ಥಿತಿಯಿಂದಾಗಿ ಕೆಲವು ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ಬೇರೆಯವರನ್ನು ನಿಯೋಜಿಸಬಹುದಿತ್ತು. ಈ ಅರ್ಜಿಯಿಂದಾಗಿ ಮುಟ್ಟಿನ ರಜೆ ವಿಚಾರದಲ್ಲಿ ಏನಾದರೂ ಉತ್ತಮ ಬೆಳವಣಿಗೆ ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದೂ ನ್ಯಾಯಾಮೂರ್ತಿಗಳು ಅಭಿಪ್ರಾಯಿಸಿದ್ದಾರೆ.
ಇನ್ನು ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್, “ಇದು ಒಂದು ಗಂಭೀರ ಕ್ರಿಮಿನಲ್ ಪ್ರಕರಣ ಮತ್ತು ಇದು ಗಮನ ಹರಿಸಬೇಕಾದ ವಿಷಯವಾಗಿದೆ” ಎಂದು ಹೇಳಿದರು.
ಇನ್ನು ಈ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೇಂದ್ರ ಮತ್ತು ಹರಿಯಾಣಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಮಹಿಳೆಯರು ಮತ್ತು ಹುಡುಗಿಯರ ಘನತೆ, ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಬಾರ್ ಅಸೋಸಿಯೇಷನ್ ಮಾರ್ಗಸೂಚಿಗಳನ್ನು ಕೋರಿದೆ. ಅರ್ಜಿಯ ಮುಂದಿನ ವಿಚಾರಣೆ ಡಿಸೆಂಬರ್ 15ರಂದು ನಡೆಯಲಿದೆ.
ಏನಿದು ಮುಟ್ಟಿನ ಪುರಾವೆ ಕೇಳಿದ ಪ್ರಕರಣ?
ಮಹಿಳಾ ಪೌರ ಕಾರ್ಮಿಕರು ಮುಟ್ಟಾಗಿದ್ದಾಗ ಕೆಲಸ ಮಾಡುವುದು ನಿಧಾನವಾಗಿದ್ದಕ್ಕೆ ಮುಟ್ಟಾಗಿದೆ ಎಂಬುದನ್ನು ಖಾಸಗಿ ಭಾಗಗಳ ಚಿತ್ರಗಳನ್ನು ತೋರಿಸುವ ಮೂಲಕ ಸಾಬೀತುಪಡಿಸುವಂತೆ ಹೇಳಿದ್ದಕ್ಕೆ ಹರಿಯಾಣದ ಮಹಾರಾಶಿ ದಯಾನಂದ ವಿಶ್ವವಿದ್ಯಾಲಯದ ಮೂವರ ಮೇಲೆ ಅಕ್ಟೋಬರ್ 31ರಂದು ಲೈಂಗಿಕ ಕಿರುಕುಳದ ಆರೋಪದಲ್ಲಿ ದೂರು ದಾಖಲಿಸಲಾಗಿದೆ.
“ನಾವು ಮುಟ್ಟಾದ ಕಾರಣದಿಂದಾಗಿ ಅಸ್ವಸ್ಥರಾಗಿದ್ದೆವು. ವೇಗವಾಗಿ ಕೆಲಸ ಮಾಡುವಷ್ಟು ಶಕ್ತಿ ಇರಲಿಲ್ಲ. ಈ ಬಗ್ಗೆ ನಾವು ಮಾಹಿತಿ ನೀಡಿದೆವು. ಆದರೆ ನಾವು ಮುಟ್ಟಾಗಿದ್ದಾಗಿ ಸಾಬೀತುಪಡಿಸಲು ನಮ್ಮ ಖಾಸಗಿ ಭಾಗಗಳ ಫೋಟೋಗಳನ್ನು ಕ್ಲಿಕ್ ಮಾಡುವಂತೆ ಅವರು ಒತ್ತಾಯಿಸಿದರು. ನಾವು ನಿರಾಕರಿಸಿದಾಗ ನಮ್ಮನ್ನು ನಿಂದಿಸಲಾಗಿದೆ ಮತ್ತು ವಜಾಗೊಳಿಸುವ ಬೆದರಿಕೆ ಹಾಕಲಾಗಿದೆ” ಮೂವರು ಮಹಿಳಾ ಪೌರ ಕಾರ್ಮಿಕರು ದೂರಿದ್ದಾರೆ.
ಈ ಘಟನೆಯ ಬಳಿಕ ಹರಿಯಾಣ ಕೌಶಲ್ ರೋಜ್‌ಗಾರ್ ನಿಗಮ್ ಲಿಮಿಟೆಡ್ ಮೂಲಕ ಗುತ್ತಿಗೆಯ ಮೇಲೆ ನೇಮಕಗೊಂಡಿದ್ದ ಇಬ್ಬರು ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ. ಹಾಗೆಯೇ ಘಟನೆಯ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.





