2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಕೋರ್ಟ್‌ನ ಈ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಆರ್. ಹೆಗ್ಡೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಿಲ್ಲ. ಪ್ರಕರಣದ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಇದನ್ನು ಓದಿದ್ದೀರಾ? ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಣೆ
ಉಮರ್ ಮತ್ತು ಇಮಾಮ್‌ಗೆ ಜಾಮೀನು ನೀಡದ ಸುಪ್ರೀಂ, “ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯೇ ಹೆಚ್ಚು ಮುಖ್ಯವಾದುದು. ಇತರ ಆರೋಪಿಗಳಿಗೆ ಹೋಲಿಸಿದರೆ ಇವರಿಬ್ಬರ ಪಾತ್ರ ಭಿನ್ನವಾದುದ್ದು” ಎಂದು ಹೇಳಿದೆ.
ಸುಪ್ರೀಂನ ಈ ಆದೇಶದ ಬಗ್ಗೆ ತಕರಾರು ವ್ಯಕ್ತಪಡಿಸಿರುವ ವಕೀಲ ಸಂಜಯ್ ಆರ್. ಹೆಗ್ಡೆ, “ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ “ಅಂತಿಮ ಹಂತದ ನ್ಯಾಯಾಲಯದಲ್ಲಿನ ಭಿನ್ನಾಭಿಪ್ರಾಯವು ಕಾನೂನಿನ ಆಳವಾದ ಚೇತನಕ್ಕೆ ಮತ್ತು ಭವಿಷ್ಯದ ಬುದ್ಧಿವಂತಿಕೆಗೆ ಮಾಡುವ ಮನವಿಯಾಗಿದೆ. ಆ ಭವಿಷ್ಯದ ದಿನದಂದು ಕಾನೂನಿನ ತಪ್ಪುಗಳನ್ನು ತಿದ್ದುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಾಧೀಶರು ನಂಬುತ್ತಾರೆ; ಯಾವ ತಪ್ಪುಗಳಿಗೆ ನ್ಯಾಯಾಲಯವು ಬಲಿಯಾಗಿದೆ ಎಂದು ಭಿನ್ನಾಭಿಪ್ರಾಯ ಹೊಂದಿರುವ ನ್ಯಾಯಾಧೀಶರು ಭಾವಿಸುತ್ತಾರೋ, ಅವುಗಳನ್ನು ಸರಿಪಡಿಸುವ ಆಶಯವದು” ಎಂಬ ಅಮೆರಿಕದ ಪ್ರಮುಖ ರಾಜಕೀಯ ಮುತ್ಸದ್ದಿ ಮತ್ತು ನ್ಯಾಯಶಾಸ್ತ್ರಜ್ಞ, ನ್ಯಾಯಮೂರ್ತಿ ಚಾರ್ಲ್ಸ್ ಇವಾನ್ಸ್ ಹ್ಯೂಸ್ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ.
ಚಾರ್ಲ್ಸ್ ಇವಾನ್ಸ್ ಹ್ಯೂಸ್ ಅವರು ನ್ಯಾಯಾಲಯದ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತವಾಗುವ ಬಗ್ಗೆ ಹೇಳಿಕೆ ನೀಡುತ್ತಾ, “ಇಂದಿನ ಬಹುಮತದ ತೀರ್ಪು ತಪ್ಪಾಗಿರಬಹುದು ಮತ್ತು ಭವಿಷ್ಯದ ಪೀಳಿಗೆಯು ಅದನ್ನು ಸರಿಪಡಿಸಬಹುದು” ಎಂಬ ಆಶಯದೊಂದಿಗೆ “ಭವಿಷ್ಯದ ಬುದ್ಧಿವಂತಿಕೆಗೆ ಮಾಡುವ ಮನವಿ” (ಭವಿಷ್ಯದ ಬುದ್ಧಿವಂತರು ಸರಿಪಡಿಸಲು ಮನವಿ) ಎಂಬ ವಾಕ್ಯ ಬಳಸಿದ್ದರು. ಇದೀಗ ಈ ಹೇಳಿಕೆ ಉಲ್ಲೇಖಿಸುವ ಮೂಲಕ ಇಂದಿನ ತಪ್ಪಾದ ತೀರ್ಪನ್ನು ಮುಂದಿನ ಪೀಳಿಗೆ ಸರಿಪಡಿಸಬಹುದು ಎಂಬ ಭರವಸೆಯನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಆರ್. ಹೆಗ್ಡೆ ವ್ಯಕ್ತಪಡಿಸಿದ್ದಾರೆ.





