2023ರಲ್ಲಿ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಹಾವಿನ ವಿಷ ಪ್ರಕರಣದಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಮತ್ತು ನಂತರದ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ದೂರು ಅಧಿಕೃತ ವ್ಯಕ್ತಿಯಿಂದ ದಾಖಲಾಗಿಲ್ಲವಾದ್ದರಿಂದ ಪ್ರಕರಣವನ್ನು ಕಾನೂನುಬದ್ಧವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ಹೇಳಿದೆ. ಹಾಗೆಯೇ ಯಾದವ್ ವಿರುದ್ಧದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅಪರಾಧಗಳು ಈ ಹಿಂದೆ ಗುರುಗ್ರಾಮದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಆಧರಿಸಿವೆ. ಆ ಪ್ರಕರಣದ ಅಂತಿಮ ವರದಿ ಈಗಾಗಲೇ ಸಲ್ಲಿಕೆಯಾಗಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಹಾವಿನ ವಿಷ ಪ್ರಕರಣ | ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಇನ್ನು ವಶಪಡಿಸಿಕೊಂಡ ದ್ರವ ಪದಾರ್ಥವು ಅಂದರೆ ಹಾವಿನ ವಿಷ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ – NDPS ಅಡಿಯಲ್ಲಿ ಬರುವ ನಿಷೇಧಿತ ಮಾದಕ ವಸ್ತುವಲ್ಲ. ಆದ್ದರಿಂದ ಈ ಕಾಯ್ದೆ ಅನ್ವಯವಾಗಲ್ಲ ಎಂದೂ ಕೋರ್ಟ್ ಹೇಳಿದೆ
2023ರ ನವೆಂಬರ್ 22ರಂದು ಯಾದವ್ ವಿರುದ್ದ ಪ್ರಕರಣ ದಾಖಲಾಗಿದೆ. 2024ರ ಮಾರ್ಚ್ 17ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಆರೋಪದ ಮೇಲೆ ಯಾದವ್ ಬಂಧನ ಮಾಡಲಾಗಿತ್ತು.
ಈ ಅಲಹಾಬಾದ್ ಹೈಕೋರ್ಟ್ ಯಾದವ್ ವಿರುದ್ಧದ ಆರೋಪವನ್ನು ರದ್ದುಗೊಳಿಸಲು ನಿರಾಕರಿಸಿ ಇದು ಗಂಭೀರ ಅಪರಾಧ ಎಂದು ಪರಿಗಣಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಾದವ್ ಎಲ್ವಿಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಆಗಸ್ಟ್ 6ರಂದು ಸುಪ್ರೀಂ ಯಾದವ್ ವಿರುದ್ಧದ ವಿಚಾರಣೆಗೆ ತಡೆ ನೀಡಿತ್ತು. ಇದೀಗ ಕಾನೂನು ಚೌಕಟ್ಟಿನಲ್ಲಿ ಈ ಪ್ರಕರಣ ಬರದು ಎಂದು ಎಫ್‌ಐಆರ್ ರದ್ದುಗೊಳಿಸಿದೆ.





