ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣವನ್ನು ಆಧರಿಸಿರುವ ‘ಉದಯ್‌ಪುರ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ಈ ತಡೆಯಾಜ್ಞೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿದೆ. ತ್ವರಿತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಗೆ ಸೂಚನೆ ನೀಡಿದೆ
ದೆಹಲಿ ಹೈಕೋರ್ಟ್‌ನ ತಡೆ ಆದೇಶವನ್ನು ಪ್ರಶ್ನಿಸಿ ಚಿತ್ರತಂಡವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ಜಾಯ್ ಮಾಲಾ ಬಾಗ್ಚಿ ಅವರಿದ್ದ ಪೀಠವು, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲು ನಿರಾಕರಿಸಿದೆ. ಸಿನಿಮಾದ ಪರಿಶೀಲನೆಯನ್ನು ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಒದಗಿಸಿದೆ.
ಅಲ್ಲದೆ, ಸಿನಿಮಾದ ತುಣುಕುಗಳ ಬಗ್ಗೆ ಹೈಕೋರ್ಟ್ ಯಾವುದೇ ಅಭಿಪ್ರಾಯ, ಆಕ್ಷೇಪ ವ್ಯಕ್ತಪಡಿಸಿಲ್ಲ ಎಂಬುದನ್ನು ಚಿತ್ರತಂಡವು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತು. ಇದನ್ನು, ಗಮನಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದಿಂದ ಪರಿಹಾರ ಪಡೆದುಕೊಳ್ಳುವಂತೆ ಸೂಚಿಸಿದೆ.
ಅಲ್ಲದೆ, ಉದಯ್‌ಪುರ್ ಫೈಲ್ ಸಿನಿಮಾ ಕುರಿತು ಬಂದಿರುವ ಆಕ್ಷೇಪಗಳನ್ನು ವಿಶ್ಲೇಷಿಸಲು ಕೇಂದ್ರ ಸರ್ಕಾರವು ರಚಿಸಿರುವ ಸಮಿತಿಯು ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
‘ಉದಯ್‌ಪುರ್ ಫೈಲ್ಸ್’ ಸಿನಿಮಾ ಜುಲೈ 11ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾದ ಕುರಿತು ಆಕ್ಷೇಪಗಳು ವ್ಯಕ್ತವಾಗಿದ ಕಾರಣ, ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.
ಈ ಲೇಖನ ಓದಿದ್ದೀರಾ?: ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ
ಅಂದಹಾಗೆ, ಕನ್ಹಯ್ಯ ಲಾಲ್ ತೇಲಿ ಅವರು ಉದಯಪುರದ ಭೂತ್ ಮಹಲ್ ಮಾಲ್ದಾಸ್ ಬೀದಿಯಲ್ಲಿ ತಮ್ಮದೇ ಟೈಲರ್ ಅಂಗಡಿ ಹೊಂದಿದ್ದರು. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಮುಹಮ್ಮದ್ ಪೈಗಂಬರ್ ಕುರಿತು ಮಾಡಿದ್ದ ಟೀಕೆಯನ್ನು ತೇಲಿ ಬೆಂಬಲಿಸಿದ್ದು, ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕಾಗಿ, 2022ರ ಜೂನ್ 28ರಂದು ತೇಲಿ ಅವರ ಶಿರಚ್ಛೇದ ಮಾಡಿ ಇಬ್ಬರು ದಾಳಿಕೋರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಪ್ರಕರಣವನ್ನು ಆಧರಿಸಿ ‘ಉದಯ್‌ಪುರ್ ಫೈಲ್ಸ್’ ಸಿನಿಮಾ ಮಾಡಲಾಗಿದೆ ಎಂದು ಹೇಳಲಾಗಿದೆ.




