2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಇತರರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ(ಅಕ್ಟೋಬರ್ 27) ಸುಪ್ರೀಂ ಕೋರ್ಟ್ ನಡೆಸಲಿದೆ. ಇಬ್ಬರೂ ಅತ್ತ ಸರಿಯಾಗಿ ವಿಚಾರಣೆಯೂ ಇಲ್ಲದೆ, ಜಾಮೀನೂ ದೊರೆಯದೆ, ಆರೋಪ ಸಾಬೀತೂ ಆಗದೆ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ.
ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಮತ್ತು ಮೀರನ್ ಹೈದರ್ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠವು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?
2022ರ ಆರಂಭದಲ್ಲಿ ಬಂಧಿತರಾಗಿರುವ ಈ ನಾಯಕರುಗಳು ಹಲವು ಬಾರಿ ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿ ಬಾರಿಯೂ ಅರ್ಜಿ ತಿರಸ್ಕೃತಗೊಂಡಿದೆ.
ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ ಖಾಲಿದ್ ಮತ್ತು ಇಮಾಮ್ ಅವರಲ್ಲದೆ, ಫಾತಿಮಾ, ಹೈದರ್, ಮೊಹಮ್ಮದ್ ಸಲೀಮ್ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಅಬ್ದುಲ್ ಖಾಲಿದ್ ಸೈಫಿ ಮತ್ತು ಶಾದಾಬ್ ಅಹ್ಮದ್ ಜಾಮೀನು ತಿರಸ್ಕರಿಸಿದೆ. ಹಾಗೆಯೇ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 2ರಂದು ಬೇರೆ ಹೈಕೋರ್ಟ್ ಪೀಠ ತಿರಸ್ಕರಿಸಿದೆ. ಈ ಆದೇಶವನ್ನು ಪ್ರಶ್ನಿಸಿ ನಾಯಕರುಗಳು ಸೆಪ್ಟೆಂಬರ್ 22ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು 53 ಜನರು ಸಾವನ್ನಪ್ಪಿದ್ದಾರೆ. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆ ಗಲಭೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದಲ್ಲಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್ ಸೇರಿದಂತೆ 18 ಮಂದಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದರು. ಧಾರ್ಮಿಕ ಭಾವನೆ ಕದಡಿದ್ದಾರೆ ಎಂಬ ಆರೋಪ ಹೊರಿಸಿ, ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿ ಪ್ರಕರಣವನ್ನೂ ದಾಖಲಿಸಿದರು. ಆದರೆ ಈವರೆಗೂ ಬಿಡುಗಡೆ ಮಾಡಲಾಗಿಲ್ಲ. ಜತೆಗೆ ಸಂಪೂರ್ಣ ಚಾರ್ಜ್‌ಶೀಟ್ ಕೂಡಾ ಸಲ್ಲಿಸಿಲ್ಲ.





