ಕಳೆದ ವರ್ಷ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ 241 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಫ್ಲೈಟ್ 171ರ ದುರಂತದ ಕುರಿತು, ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಶೀಘ್ರ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಕೇಂದ್ರ ಸರ್ಕಾರ ಹಾಗೂ ವಿಮಾನ ಅಪಘಾತ ತನಿಖಾ ದಳ (AAIB) ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿದರು. “ಪೈಲಟ್‌ಗಳ ಪ್ರಕಾರ ಬೋಯಿಂಗ್ 787-8 ವಿಮಾನಗಳು ಎಲೆಕ್ಟ್ರಾನಿಕ್ ದೋಷ ಹೊಂದಿದ್ದು, ಅಸುರಕ್ಷಿತವಾಗಿವೆ. ಹೀಗಾಗಿ ಸತ್ಯಾಸತ್ಯತೆ ತಿಳಿಯಲು ‘ತನಿಖಾ ಸಮಿತಿ’ ನಡೆಸಲೇಬೇಕು,” ಎಂದು ಅವರು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?
ಅಪಘಾತದಲ್ಲಿ ಮೃತಪಟ್ಟ ಪೈಲಟ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರ್ ರಾಜ್ (91) ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂಧನ ಖಾಲಿ ಆಗಿದ್ದರಿಂದ ಅಪಘಾತ ಸಂಭವಿಸಿದೆ ಮತ್ತು ಇದರಲ್ಲಿ ಪೈಲಟ್ ದೋಷವಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಅವರು ವಾದಿಸಿದ್ದಾರೆ. ಕಪ್ಪು ಪೆಟ್ಟಿಗೆಯ ಮಾಹಿತಿಯ ನೆಪದಲ್ಲಿ ತಮ್ಮ ಮಗನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ತನಿಖೆಯು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ನಿಯಮಗಳಿಗೆ ಅನುಗುಣವಾಗಿಯೇ ನಡೆಯುತ್ತಿದೆ. ವಿದೇಶಿ ಪ್ರಜೆಗಳು ಮೃತಪಟ್ಟಿರುವ ಈ ಘಟನೆಯಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯ” ಎಂದು ಸಮರ್ಥಿಸಿಕೊಂಡರು.





