ಗುರುದ್ವಾರಕ್ಕೆ ಪ್ರವೇಶಿಸಲು ನಿರಾಕರಿಸಿದ್ದಕ್ಕಾಗಿ ವಜಾಗೊಂಡಿದ್ದ ಕ್ರಿಶ್ಚಿಯನ್ ಸೇನಾ ಅಧಿಕಾರಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದೆ. ಸೇನೆಯು ಜಾತ್ಯತೀತ ಸಂಸ್ಥೆಯಾಗಿದೆ ಮತ್ತು ಅದರ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯವು, ‘ತನ್ನ ಸಹ (ಸಿಖ್) ಸೈನಿಕರ ನಂಬಿಕೆಯನ್ನು ಗೌರವಿಸಲು ವಿಫಲವಾದ ಕಾರಣ ಅವರನ್ನು ವಜಾಗೊಳಿಸಿರುವ ಸಶಸ್ತ್ರ ಪಡೆಗಳ ನಿರ್ಧಾರವು ಸರಿಯಾಗಿದೆ’ ಎಂದಿದೆ. ಅಧಿಕಾರಿಯ ವಜಾಗೊಳಿಸುವಿಕೆಯನ್ನು ಎತ್ತಿಹಿಡಿದಿದೆ.
ಈ ಹಿಂದೆ, 3ನೇ ಕ್ಯಾವಲ್ರಿ ರೆಜಿಮೆಂಟ್‌ನಲ್ಲಿ ಲೆಫ್ಟಿನೆಂಟ್ ಆಗಿದ್ದ ಕಮಲೇಶನ್ ಅವರು ಗುರುದ್ವಾರ ಪ್ರವೇಶಿಸಲು ನಿರಾಕರಿಸಿದ್ದರು. ಅದಕ್ಕಾಗಿ, ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು. ‘ಗುರುದ್ವಾರ ಪ್ರವೇಶಿಸಲು ಒತ್ತಾಯಿಸುವುದು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ’ ಎಂದು ವಾದಿಸಿದ್ದ ಸೇನಾ ಅಧಿಕಾರಿ, ತಮ್ಮ ವಜಾವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೊಸ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠವು, ವಜಾ ಆದೇಶವನ್ನು ಎತ್ತಿ ಹಿಡಿದಿದೆ. “ಅವರು (ಸೇನಾ ಅಧಿಕಾರಿ) ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ? ಇದು ಸೇನಾ ಅಧಿಕಾರಿಯೊಬ್ಬರ ಅಸಭ್ಯತೆ ಮತ್ತು ಅಶಿಸ್ತಿನಿಂದ ಕೂಡಿದೆ. ಅವರನ್ನು ವಜಾಗೊಳಿಸಿರುವುದು ಸರಿಯಾಗಿದೆ. ಈ ರೀತಿಯ ಜಾತಿವಾದಿ ಮನಸ್ಥಿತಿ ಇರುವ ವ್ಯಕ್ತಿಗಳು ಮಿಲಿಟರಿಯಲ್ಲಿರಲು ಅರ್ಹರೇ? ಅವರ ನಡವಳಿಕೆಯು ಕಾನೂನುಬದ್ಧ ಆದೇಶದ ಉಲ್ಲಂಘನೆಗೆ ಸಮನಾಗಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು
“ಅವರು ಅತ್ಯುತ್ತಮ ಅಧಿಕಾರಿಯೇ ಆಗಿರಬಹುದು. ಆದರೆ, ಅವರು ಭಾರತೀಯ ಸೈನ್ಯದಲ್ಲಿರಲು ಸೂಕ್ತವಲ್ಲ. ಈ ಸಮಯದಲ್ಲಿ ನಮ್ಮ ಪಡೆಗಳು ಹೊಂದಿರುವ ಜವಾಬ್ದಾರಿಗಳ ಪ್ರಮಾಣ… ಇದು ನಾವು ನಿರ್ವಹಿಸಲು ಬಯಸುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಕಮಲೇಶನ್ ಅವರು ಪೂಜೆ ನಡೆಸುವಾಗ ದೇವಾಲಯದ ಗರ್ಭಗುಡಿ ಪ್ರವೇಶಿಸುವಂತೆ ಅವರ ಉನ್ನತ ಅಧಿಕಾರಿ ನೀಡಿದ್ದ ಆದೇಶವನ್ನು ನಿರಾಕರಿಸಿದ್ದರು. ಇದು ಅವರ ಏಕದೇವತಾವಾದಿ ಕ್ರಿಶ್ಚಿಯನ್ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದರು.




