ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಯಾವುದೇ ರೀತಿಯ ಅಡೆತಡೆಗಳನ್ನು ಉಂಟುಮಾಡದಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದೇ ವೇಳೆ, ಪರಿಷ್ಕರಣಾ ಪ್ರಕ್ರಿಯೆಯಲ್ಲಿನ ದತ್ತಾಂಶಗಳ ಪರಿಶೀಲನೆ ಮತ್ತು ಅಂತಿಮಗೊಳಿಸುವಿಕೆಗೆ ನಿಗದಿಪಡಿಸಲಾಗಿದ್ದ ಗಡುವನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯ್ಮಾಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು , “ನಾವು ಅಡೆತಡೆಗಳನ್ನು ನಿವಾರಿಸುತ್ತೇವೆ, ಆದರೆ ಪ್ರಕ್ರಿಯೆ ಪೂರ್ಣಗೊಳ್ಳಲು ಅಡ್ಡಿಪಡಿಸುವುದಿಲ್ಲ. ಈ ವಿಷಯದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಪರಿಷ್ಕರಣೆ ಕಾರ್ಯವು ನಿಗದಿತ ರೀತಿಯಲ್ಲೇ ಮುಂದುವರಿಯಬೇಕು ಎಂದು ತಾಕೀತು ಮಾಡಿತು.
ವಾಟ್ಸಾಪ್ ಮೂಲಕ ಚುನಾವಣಾ ಆಯೋಗ ನೀಡುತ್ತಿರುವ ಸೂಚನೆಗಳನ್ನು ತಡೆಯಬೇಕು ಮತ್ತು ಎಲ್ಲ ನಿರ್ದೇಶನಗಳನ್ನು ಅಧಿಕೃತವಾಗಿ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಕೋರಿತ್ತು. ಅಲ್ಲದೆ, ಹೊರಗಿನಿಂದ ಕರೆತರಲಾದ ‘ಮೈಕ್ರೋ ಅಬ್ಸರ್ವರ್’ಗಳನ್ನು (ಸೂಕ್ಷ್ಮ ವೀಕ್ಷಕರು) ತೆಗೆದುಹಾಕಿ, ಅವರ ಬದಲಿಗೆ ರಾಜ್ಯದ 8,505 ‘ಗ್ರೂಪ್ ಬಿ’ ಅಧಿಕಾರಿಗಳನ್ನು ನೇಮಿಸಿಕೊಳ್ಳುವಂತೆ ಪ್ರಸ್ತಾಪಿಸಿತ್ತು. ಹೊರಗಿನ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಕೃತಿ ಮತ್ತು ಪರಿಸ್ಥಿತಿಯ ಅರಿವಿರುವುದಿಲ್ಲ ಎಂದು ರಾಜ್ಯದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಎಸ್. ನಾಯ್ಡು, ಮತದಾರರ ನೋಂದಣಿ ಅಧಿಕಾರಿಗಳ ನೇಮಕಾತಿ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಇವರು ಅರೆ-ನ್ಯಾಯಾಂಗ (Quasi-judicial)ಕಾರ್ಯಗಳನ್ನು ನಿರ್ವಹಿಸಬೇಕಿರುವುದರಿಂದ ಅವರಿಗೆ ತೀರ್ಪು ನೀಡುವ ಅನುಭವದ ಅಗತ್ಯವಿದೆ. ಆದರೆ, ರಾಜ್ಯ ಸರ್ಕಾರವು ವೇತನ ಶ್ರೇಣಿಯ ಆಧಾರದ ಮೇಲೆ ಎಂಜಿನಿಯರ್‌ಗಳಂತಹ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿದೆ. ಆಯೋಗ ಕೋರಿದ 300 ಅಧಿಕಾರಿಗಳ ಪೈಕಿ ಕೇವಲ 64 ಮಂದಿಗೆ ಮಾತ್ರ ಸೂಕ್ತ ಅನುಭವವಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ|ಮೋದಿ ರಾಜಿ ರಾಜಕಾರಣದಿಂದ ಭಾರತದ ಸ್ವಾಭಿಮಾನ- ಸಾರ್ವಭೌಮತೆಗೆ ಧಕ್ಕೆ
ಹಿರಿಯ ವಕೀಲ ಶ್ಯಾಮ್ ದಿವಾನ್ ವಾದಿಸಿ, ಕರಡು ಪಟ್ಟಿಯಲ್ಲಿರುವ 7.08 ಕೋಟಿ ಮತದಾರರ ಪೈಕಿ 1.36 ಕೋಟಿ ಮತದಾರರನ್ನು “ತಾರ್ಕಿಕ ವ್ಯತ್ಯಾಸ” (Logical Discrepancy) ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ‘ದತ್ತ’ (Dutta/Datta) ಮತ್ತು ‘ರಾಯ್’ (Roy/Ray) ನಂತಹ ಹೆಸರಿನ ಕಾಗುಣಿತದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಫೆಬ್ರವರಿ 14 ರಂದು ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಈ ಹಂತದಲ್ಲಿ ಮೈಕ್ರೋ ಅಬ್ಸರ್ವರ್‌ಗಳ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರುಗಳನ್ನು ಅಳಿಸಿಹಾಕುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾದಗಳನ್ನು ಆಲಿಸಿದ ಸಿಜೆಐ, ಮೈಕ್ರೋ ಅಬ್ಸರ್ವರ್‌ಗಳು ಕೇವಲ ಸಹಾಯಕ್ಕೆ ಮಾತ್ರ ಇರುತ್ತಾರೆ, ಅಂತಿಮ ನಿರ್ಧಾರ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು. “ಪರಿಶೀಲನೆಯ ನಂತರ ಎಷ್ಟು ನೋಟಿಸ್‌ಗಳನ್ನು ಕೈಬಿಡಲಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಪರಿಶೀಲನೆಯಲ್ಲಿ ಶೇ 80 ರಷ್ಟು ಪ್ರಕರಣಗಳು ಬಗೆಹರಿದರೆ, ನಿಮ್ಮ ವಾದವು ತಪ್ಪಾಗುತ್ತದೆ,” ಎಂದು ನ್ಯಾಯಮೂರ್ತಿಗಳು ಅರ್ಜಿದಾರರಿಗೆ ತಿಳಿಸಿದರು.
ಅಧಿಕಾರಿಗಳ ನಿಯೋಜನೆಯಲ್ಲಿ ಸರಿಯಾದ ವಿವರ ಮತ್ತು ನಾಮಕರಣ (Nomenclature) ಅಗತ್ಯವಿದೆ ಎಂದು ಸೂಚಿಸಿದ ಕೋರ್ಟ್, ಬಿಹಾರ ಪ್ರಕರಣದಲ್ಲೂ ಇದೇ ರೀತಿಯ ನಿರ್ದೇಶನ ನೀಡಲಾಗಿತ್ತು ಎಂದು ಸ್ಮರಿಸಿತು. ಅಂತಿಮವಾಗಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಲು ಒಂದು ವಾರದ ಹೆಚ್ಚುವರಿ ಸಮಯ ನೀಡಲಾಯಿತು.





