2017ರ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂಚು ಆರೋಪದಲ್ಲಿ ಇತ್ತೀಚೆಗೆ ಮಲಯಾಳಂ ನಟ ದಿಲೀಪ್ ಖುಲಾಸೆಗೊಂಡಿದ್ದಾರೆ. ಡಿಸೆಂಬರ್ 8ರಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಮುಖ್ಯ ಆರೋಪಿ ‘ಪಲ್ಸರ್ ಸುನಿ’ ಸೇರಿದಂತೆ ಆರು ಮಂದಿ ಅಪರಾಧಿಗಳು ಎಂದು ಹೇಳಿರುವ ಕೋರ್ಟ್, ಪ್ರಾಸಿಕ್ಯೂಷನ್ ದಿಲೀಪ್ ವಿರುದ್ಧದ ಕ್ರಿಮಿನಲ್ ಸಂಚು ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದಿದೆ.
ಇದೀಗ ದಿಲೀಪ್ ಖುಲಾಸೆಯನ್ನು ಪ್ರಶ್ನಿಸಿ ಕೇರಳ ಸರ್ಕಾರವು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಎಲ್ಲ ಬೆಳವಣಿಗೆ ನಡುವೆ ಈ ಪ್ರಕರಣದ ಸಂತ್ರಸ್ತೆ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಇದೇ ಮೊದಲ ಬಾರಿಗೆ ದಿಲೀಪ್ ವಿಚ್ಚೇದಿತ ಪತ್ನಿ ಮಂಜು ವಾರಿಯರ್ ಕೂಡಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ನಟಿ ಅತ್ಯಾಚಾರ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ ಎಂದು ಕೋರ್ಟ್ ತೀರ್ಪು
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಸಂತ್ರಸ್ತೆ, ಉಳಿದ ಆರು ಮಂದಿ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ದಿಲೀಪ್ ಅವರನ್ನು ಮಾತ್ರ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೀವ್ರವಾಗಿ ಟೀಕಿಸಿದ್ದಾರೆ. “ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ಈಗ ನೋವಿನ ವಾಸ್ತವಕ್ಕೆ ಮರಳಿದ್ದೇನೆ. ಈ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ. ನನ್ನ ಮೂಲಭೂತ ಹಕ್ಕುಗಳನ್ನು ರಕ್ಷಿಸಲಾಗಿಲ್ಲ” ಎಂದು ಹೇಳಿದ್ದಾರೆ.
“8 ವರ್ಷಗಳು, 9 ತಿಂಗಳುಗಳು ಮತ್ತು 23 ದಿನಗಳ ನಂತರ, ಬಹಳ ದೀರ್ಘ ಮತ್ತು ನೋವಿನ ಪ್ರಯಾಣದ ಕೊನೆಯಲ್ಲಿ ನಾನು ಅಂತಿಮವಾಗಿ ಒಂದು ಸಣ್ಣ ಬೆಳಕಿನ ಕಿರಣವನ್ನು ನೋಡಿದೆ. ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನನ್ನ ನೋವನ್ನು ಸುಳ್ಳು ಮತ್ತು ಈ ಪ್ರಕರಣವನ್ನು ಕಲ್ಪಿತ ಕಥೆ ಎಂದು ಕರೆದವರಿಗೆ ಈ ಕ್ಷಣವನ್ನು ಸಮರ್ಪಿಸುತ್ತೇನೆ. ನೀವು ಇಂದು ಶಾಂತಿಯಿಂದ ಇದ್ದೀರಿ ಎಂದು ಭಾವಿಸುತ್ತೇನೆ” ಎಂದು ಕುಟುಕಿದ್ದಾರೆ.
ಇನ್ನು ತಪ್ಪು ಮಾಹಿತಿ ಹರಡದಂತೆ ವಿನಂತಿಸಿದ ಸಂತ್ರಸ್ತೆ, “ಈ ತೀರ್ಪು ಅನೇಕ ಜನರನ್ನು ಅಚ್ಚರಿಗೊಳಿಸಬಹುದು, ಆದರೆ ಇದು ನನಗೆ ಆಶ್ಚರ್ಯವನ್ನುಂಟು ಮಾಡಲಿಲ್ಲ. 2020ರ ಆರಂಭದಲ್ಲಿ, ಏನೋ ಸರಿಯಿಲ್ಲ ಎಂದು ನನಗೆ ಅನಿಸಲು ಪ್ರಾರಂಭಿಸಿತು. ಪ್ರಕರಣವನ್ನು ನಿರ್ವಹಿಸುವ ವಿಧಾನದಲ್ಲಿ, ವಿಶೇಷವಾಗಿ ಒಬ್ಬ ನಿರ್ದಿಷ್ಟ ಆರೋಪಿಗೆ ಬಂದಾಗ, ಪ್ರಾಸಿಕ್ಯೂಷನ್ ಸಹ ಬದಲಾವಣೆಗಳನ್ನು ಗಮನಿಸಿದೆ” ಎಂದು ಆರೋಪಿಸಿದ್ದಾರೆ.
ಇನ್ನು ತಮ್ಮ ಕಾನೂನು ಹೋರಾಟಗಳನ್ನು ನೆನಪಿಸಿಕೊಂಡ ಅವರು, “ವರ್ಷಗಳಲ್ಲಿ, ನಾನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನ್ನು ಹಲವು ಬಾರಿ ಸಂಪರ್ಕಿಸಿದೆ. ನಾನು ಈ ನ್ಯಾಯಾಲಯವನ್ನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಪ್ರಕರಣವನ್ನು ಅದೇ ನ್ಯಾಯಾಧೀಶರಿಂದ ದೂರ ಸರಿಸಲು ಮಾಡಿದ ಪ್ರತಿಯೊಂದು ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದುತ್ವವಾದಿಗಳ ಕೃತ್ಯಕ್ಕೆ ಮುಸ್ಲಿಮರ ಹೆಸರು!
ಇನ್ನು ಪ್ರಧಾನ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಎನ್ ಎಸ್ ಜೊತೆ ತನಗೆ ಸಂಪರ್ಕವಿದೆ ಎಂಬ ವರದಿಗಳನ್ನು ನಟಿ ನಿರಾಕರಿಸಿದ್ದಾರೆ. “ಆರೋಪಿ ನಂ. 1 ನನ್ನ ವೈಯಕ್ತಿಕ ಚಾಲಕ ಎಂದು ಇನ್ನೂ ಹೇಳುತ್ತಿರುವವರಿಗೆ, ಇದು ಸಂಪೂರ್ಣವಾಗಿ ಸುಳ್ಳು ಎಂದು ಹೇಳಲು ಬಯಸುತ್ತೇನೆ! ಅವನು ನನ್ನ ಚಾಲಕನಲ್ಲ, ನನ್ನ ಉದ್ಯೋಗಿಯಲ್ಲ, ಮತ್ತು ನನಗೆ ತಿಳಿದಿರುವ ವ್ಯಕ್ತಿಯಲ್ಲ. ಅವನು 2016ರಲ್ಲಿ ನಾನು ಕೆಲಸ ಮಾಡಿದ ಚಲನಚಿತ್ರ ಒಂದರ ಪ್ರಯಾಣಕ್ಕಾಗಿ ಚಾಲಕನಾಗಿ ನಿಯೋಜಿಸಲ್ಪಟ್ಟಿದ್ದ ಓರ್ವ ವ್ಯಕ್ತಿ. ವಿಪರ್ಯಾಸವೆಂದರೆ, ಆ ಸಮಯದಲ್ಲಿ ನಾನು ಅವನನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ಭೇಟಿಯಾಗಿದ್ದೆ. ಈ ಅಪರಾಧ ಸಂಭವಿಸಿದ ದಿನದವರೆಗೆ ಮತ್ತೆಂದೂ ಭೇಟಿಯಾಗಲಿಲ್ಲ!” ಎಂದು ಸ್ಪಷ್ಟಪಡಿಸಿದ್ದಾರೆ.
“ಕೊನೆಯಲ್ಲಿ, ಈ ತೀರ್ಪು ಮಾನವ ತೀರ್ಪು ನಿರ್ಧಾರಗಳನ್ನು ಎಷ್ಟು ಬಲವಾಗಿ ರೂಪಿಸುತ್ತದೆ ಎಂದು ನನಗೆ ಅರಿವಾಯಿತು. ಪ್ರತಿಯೊಂದು ನ್ಯಾಯಾಲಯವೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ನನಗೆ ತಿಳಿದಿದೆ! ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾದ ಸಾಕ್ಷ್ಯವಾದ ಮೆಮೊರಿ ಕಾರ್ಡ್ ಅನ್ನು ನ್ಯಾಯಾಲಯದ ಕಸ್ಟಡಿಯಲ್ಲಿದ್ದಾಗ ಮೂರು ಬಾರಿ ಅಕ್ರಮವಾಗಿ ಬಳಸಲಾಗಿದೆ. ನ್ಯಾಯಾಲಯದ ವಾತಾವರಣವು ಪ್ರಾಸಿಕ್ಯೂಷನ್‌ಗೆ ಪ್ರತಿಕೂಲವಾಗಿದೆ ಎಂದು ಸ್ಪಷ್ಟವಾಗಿ ಹೇಳಿ ಇಬ್ಬರು ಸಾರ್ವಜನಿಕ ಅಭಿಯೋಜಕರು ಈ ಪ್ರಕರಣಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನ್ಯಾಯಾಲಯದಿಂದ ನ್ಯಾಯವನ್ನು ನಿರೀಕ್ಷಿಸಬೇಡಿ ಎಂದು ಇಬ್ಬರೂ ವೈಯಕ್ತಿಕವಾಗಿ ನನಗೆ ಹೇಳಿದ್ದಾರೆ. ಏಕೆಂದರೆ ಇದು ಪಕ್ಷಪಾತಿಯಾಗಿದೆ ಎಂದು ಅವರು ಭಾವಿಸಿದ್ದರು” ಎಂದು ತಿಳಿಸಿದರು.
“ಮೆಮೊರಿ ಕಾರ್ಡ್ ಅನ್ನು ತಿರುಚಿರುವ ಬಗ್ಗೆ ಸರಿಯಾದ ತನಿಖೆಗೆ ನಾನು ಪದೇ ಪದೇ ವಿನಂತಿಸಿದೆ. ಆದಾಗ್ಯೂ, ನಾನು ಮತ್ತೆ ಮತ್ತೆ ಕೇಳುವವರೆಗೂ ತನಿಖಾ ವರದಿಯನ್ನು ನನಗೆ ನೀಡಲಾಗಿಲ್ಲ. ನ್ಯಾಯಯುತ ವಿಚಾರಣೆಗಾಗಿ ನಾನು ಹೋರಾಡುತ್ತಿರುವಾಗ, ಆರೋಪಿಯು ಇದೇ ನ್ಯಾಯಾಧೀಶರು ಪ್ರಕರಣವನ್ನು ವಿಚಾರಣೆ ನಡೆಸುವುದನ್ನು ಮುಂದುವರಿಸಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಇದು ನನ್ನ ಮನಸ್ಸಿನಲ್ಲಿ ಇನ್ನಷ್ಟು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿತು. ನಾನು ಭಾರತದ ಗೌರವಾನ್ವಿತ ರಾಷ್ಟ್ರಪತಿ ಮತ್ತು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಪತ್ರಗಳನ್ನು ಬರೆದು ನನ್ನ ಕಳವಳಗಳನ್ನು ವ್ಯಕ್ತಪಡಿಸಿ ಮತ್ತು ಮಧ್ಯಪ್ರವೇಶವನ್ನು ಕೋರಿದೆ!” ಎಂಬುದನ್ನೂ ಉಲ್ಲೇಖಿಸಿದ್ದಾರೆ.
“ಸಾರ್ವಜನಿಕರು ಮತ್ತು ಮಾಧ್ಯಮಗಳು ಹಾಜರಿದ್ದು ಏನು ನಡೆಯುತ್ತಿದೆ ಎಂಬುದನ್ನು ಸ್ವತಃ ನೋಡಲು ಸಾಧ್ಯವಾಗುವಂತೆ, ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ನಾನು ನ್ಯಾಯಾಲಯವನ್ನು ವಿನಂತಿಸಿದೆ. ಈ ವಿನಂತಿಯನ್ನೂ ನಿರಾಕರಿಸಲಾಯಿತು” ಎಂದಿದ್ದಾರೆ. ಈ ದೀರ್ಘ ಪ್ರಯಾಣದ ಉದ್ದಕ್ಕೂ ತನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ ಸಂತ್ರಸ್ತೆ, “ನಿಂದನೀಯ ಕಾಮೆಂಟ್‌ಗಳು ಮತ್ತು ಹಣ ಪಡೆದು ನನ್ನ ಮೇಲೆ ದಾಳಿ ನಡೆಸಿದವರು ಸ್ವತಂತ್ರರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಸೇರಿ ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮೌನ ಮುರಿದ ಮಂಜು ವಾರಿಯರ್
ದಿಲೀಪ್‌ನಿಂದ ವಿಚ್ಚೇದನ ಪಡೆದಿರುವ ಮಂಜು ವಾರಿಯರ್ ನಟಿ ಮೇಲಿನ ದೌರ್ಜನ್ಯ ಪ್ರಕರಣದ ತೀರ್ಪಿನ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನ್ಯಾಯ ಇನ್ನೂ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ತೀರ್ಪಿನ ಒಂದು ವಾರದ ಬಳಿಕ ಮಂಜು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
“ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಆದರೆ ಈ ಪ್ರಕರಣದಲ್ಲಿ, ಸಂತ್ರಸ್ತರಿಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ಅಪರಾಧವನ್ನು ನೇರವಾಗಿ ಮಾಡಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಅಪರಾಧವನ್ನು ಯೋಜಿಸಿದ ಮತ್ತು ಕಾರ್ಯರೂಪಕ್ಕೆ ತಂದವರನ್ನು ಇನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಇನ್ನೂ ಮುಕ್ತವಾಗಿದ್ದಾರೆ, ಇದು ಭಯಾನಕವಾಗಿದೆ” ಎಂದು ಹೇಳಿದ್ದಾರೆ.
“ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ನ್ಯಾಯವು ಪೂರ್ಣಗೊಳ್ಳುತ್ತದೆ. ಇದು ಕೇವಲ ಓರ್ವ ಸಂತ್ರಸ್ತೆಯ ವಿಷಯವಲ್ಲ. ಪ್ರತಿಯೊಬ್ಬ ಮಹಿಳೆ ಮತ್ತು ಪ್ರತಿಯೊಬ್ಬ ಮನುಷ್ಯನು ಭಯವಿಲ್ಲದೆ ಬದುಕಲು ಅರ್ಹರು. ನಾನು ಅವಳೊಂದಿಗೆ(ಸಂತ್ರಸ್ತೆಯೊಂದಿಗೆ) ಆಗ, ಈಗ, ಮುಂದೆ ಯಾವಾಗಲೂ ಇರುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಉಳಿದ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ದಿಲೀಪ್ ಅವರನ್ನು ಮಾತ್ರ ಖುಲಾಸೆಗೊಳಿಸಿರುವ ತೀವ್ರ ಟೀಕೆಗೆ ಕಾರಣವಾಗಿದೆ. ಮಲಯಾಳಂ ಚಿತ್ರರಂಗದ ಅನೇಕ ಸಾಕ್ಷಿಗಳು ಆರಂಭದಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆಗಳನ್ನು ನ್ಯಾಯಾಲಯದ ವಿಚಾರಣೆ ವೇಳೆ ಬದಲಾಯಿಸಿದ್ದರು. ನ್ಯಾಯಾಂಗ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಸಂತ್ರಸ್ತರ ಪರ ಹೋರಾಟಗಾರರಲ್ಲಿ ತೀವ್ರ ವಿರೋಧ ಮತ್ತು ಅಸಮಾಧಾನ ವ್ಯಕ್ತವಾಗಿದೆ.
ಈ ತೀರ್ಪು ಸಮಾಜದ ಸಾಮಾನ್ಯ ಭಾವನೆಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೇರಳ ಸರ್ಕಾರವು ಕೂಡ ಸಂತ್ರಸ್ತೆಯ ಪರ ನಿಂತು, ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಪ್ರಕರಣವು ಓರ್ವ ಪ್ರಭಾವಿತ ವ್ಯಕ್ತಿಯ ಪ್ರಭಾವಕ್ಕೆ ಕೋರ್ಟ್ ಕೂಡಾ ಒಳಗಾಗುತ್ತದೆಯೇ ಎಂಬ ಪ್ರಶ್ನೆಯನ್ನು ಹಲವರಲ್ಲಿ ಹುಟ್ಟಿಸಿದೆ.





