ಕೇರಳದಲ್ಲಿ 2017ರಲ್ಲಿ ನಡೆದ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ನಟಿ ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ. “ನನ್ನನ್ನು ನೆಮ್ಮದಿಯಿಂದ ಬದುಕಲು ಬಿಡಿ, ಘನತೆಯಿಂದ ಬದುಕಲು ಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಪ್ರಕರಣದ ಎರಡನೇ ಆರೋಪಿ ಮತ್ತು ಇತ್ತೀಚೆಗೆ ಶಿಕ್ಷೆಗೆ ಗುರಿಯಾದ ಮಾರ್ಟಿನ್ ಆಥನಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಸಂತ್ರಸ್ತ ನಟಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ನಟಿಯ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದು ಈ ಸಂಬಂಧ ಪೊಲೀಸರು ಹೊಸದಾಗಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣದಲ್ಲಿ ದಿಲೀಪ್ ಖುಲಾಸೆ: ಸಂತ್ರಸ್ತೆ, ಮಾಜಿ ಪತ್ನಿ ಮಂಜು ವಾರಿಯರ್ ಹೇಳಿದ್ದೇನು?
ಈ ವಿಡಿಯೋ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ನಟಿ, “ತಮಗಾದ ಹಿಂಸಾಚಾರದ ವಿರುದ್ಧ ಪೊಲೀಸರನ್ನು ಸಂಪರ್ಕಿಸುವುದು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಹೋರಾಡಿದ್ದು ನಾನು ಮಾಡಿದ ಏಕೈಕ ತಪ್ಪು. ನಾನು ಬಲಿಪಶುವೂ ಅಲ್ಲ, ಸಂತ್ರಸ್ತೆಯೂ ಅಲ್ಲ. ಮತ್ತು ಕಾನೂನು ಕ್ರಮ ಕೈಗೊಳ್ಳುವುದು” ಎಂದು ನೊಂದು ಪೋಸ್ಟ್ ಮಾಡಿದ್ದಾರೆ.
“ನಾನು ಮೌನವಾಗಿದ್ದರೆ ಅಪರಾಧದ ಬಗ್ಗೆ ದೂರು ನೀಡದ ಆರೋಪ ಹೊರಿಸಲಾಗುತ್ತಿತ್ತು. ಆದರೆ ನಾನು ಸುಮ್ಮನಿರಬೇಕಿತ್ತು. ಏನಾಯಿತೋ ಅದು ನನ್ನ ವಿಧಿ ಎಂದು ಒಪ್ಪಿಕೊಂಡು ನನ್ನ ಜೀವನವನ್ನು ಕೊನೆಗೊಳಿಸಬೇಕಿತ್ತು” ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಮಾರ್ಟಿನ್ ವಿಡಿಯೋವನ್ನು ಖಂಡಿಸಿದ ಸಂತ್ರಸ್ತ ನಟಿ, “ಇನ್ನೂ ಹೆಚ್ಚಿನ ಹಾನಿಕಾರಕ ಮತ್ತು ಸುಳ್ಳು ಆರೋಪಗಳನ್ನು ಸುಲಭವಾಗಿ ಹೊರಿಸಬಹುದಿತ್ತು. ನನ್ನ ನಗ್ನ ವೀಡಿಯೊವನ್ನು ನಾನೇ ಚಿತ್ರೀಕರಿಸಿದ್ದೇನೆ ಎಂದೂ ನೀವು ಹೇಳಬಹುದಿತ್ತು” ಎಂದೂ ಹೇಳಿದ್ದಾರೆ.
2017ರ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂಚು ಆರೋಪದಲ್ಲಿ ಇತ್ತೀಚೆಗೆ ಮಲಯಾಳಂ ನಟ ದಿಲೀಪ್ ಖುಲಾಸೆಗೊಂಡಿದ್ದಾರೆ. ಡಿಸೆಂಬರ್ 8ರಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಮುಖ್ಯ ಆರೋಪಿ ‘ಪಲ್ಸರ್ ಸುನಿ’ ಸೇರಿದಂತೆ ಆರು ಮಂದಿ ಅಪರಾಧಿಗಳು ಎಂದು ಹೇಳಿರುವ ಕೋರ್ಟ್, ಪ್ರಾಸಿಕ್ಯೂಷನ್ ದಿಲೀಪ್ ವಿರುದ್ಧದ ಕ್ರಿಮಿನಲ್ ಸಂಚು ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದಿದೆ.
ಇದಾದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಸಂತ್ರಸ್ತ ನಟಿ, ಉಳಿದ ಆರು ಮಂದಿ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ದಿಲೀಪ್ ಅವರನ್ನು ಮಾತ್ರ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೀವ್ರವಾಗಿ ಟೀಕಿಸಿದ್ದರು. “ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ಈಗ ನೋವಿನ ವಾಸ್ತವಕ್ಕೆ ಮರಳಿದ್ದೇನೆ. ಈ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ. ನನ್ನ ಮೂಲಭೂತ ಹಕ್ಕುಗಳನ್ನು ರಕ್ಷಿಸಲಾಗಿಲ್ಲ” ಎಂದು ಹೇಳಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





