ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸಂಸ್ಕೃತವನ್ನು “ಸತ್ತ ಭಾಷೆ” ಎಂದು ಕರೆದಿದ್ದಾರೆ.
ಚೆನ್ನೈಯಲ್ಲಿ ಇಂದು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ತಮಿಳು ಭಾಷೆಯ ಅಭಿವೃದ್ಧಿಗೆ ಕೇವಲ 150 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಆದರೆ “ಸತ್ತ ಭಾಷೆ”ಯಾದ ಸಂಸ್ಕೃತಕ್ಕೆ 2,400 ಕೋಟಿ ರೂ. ನೀಡಲಾಗುತ್ತಿದೆ ಎಂದರು.
ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ಇಂದಿಗೂ ದೇಶಾದ್ಯಂತ ಪ್ರಾರ್ಥನೆಗಳು ಮತ್ತು ಆಚರಣೆಗಳಲ್ಲಿ ಬಳಸುತ್ತಿರುವ ಭಾಷೆಯನ್ನು ಸತ್ತಿದೆ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಒಂದು ಭಾಷೆಯನ್ನು ಮೆಚ್ಚಿಸುವುದಕ್ಕಾಗಿ ಮತ್ತೊಂದನ್ನು ಕೆಡಿಸುವ ಈ ಮನೋಭಾವ ತಪ್ಪು. ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನಾಯಕರು ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು
ದೇಶದಾದ್ಯಂತ ಪ್ರಾರ್ಥನೆಗಳು, ವಿಧಿವಿಧಾನಗಳಲ್ಲಿ ಇಂದಿಗೂ ಬಳಕೆಯಲ್ಲಿರುವ ಸಂಸ್ಕೃತದ ಬಗ್ಗೆ ಇಂತಹ ಟಿಪ್ಪಣಿಗಳು ಮಾಡುವುದು ಸರಿಯಲ್ಲ. ಒಂದನ್ನು ಮೆಚ್ಚಲು ಮತ್ತೊಂದನ್ನು ಟೀಕಿಸುವ ಮನೋಭಾವ ತಪ್ಪು ಎಂದು ಬಿಜೆಪಿ ನಾಯಕಿ ಹೇಳಿದರು.
ತಮಿಳು ಭಾಷೆಯಲ್ಲಿಯೇ ಸಂಸ್ಕೃತ ಮೂಲದ ಪದಗಳು ಸಾಕಷ್ಟಿವೆ. ತಮಿಳು ವಿಶಾಲ ಹೃದಯದ ಭಾಷೆಯಾಗಿದ್ದು, ಸಂಸ್ಕೃತವೂ ಸೇರಿ ಅನೇಕ ಭಾಷೆಗಳ ಪದಗಳು ಮತ್ತು ವಿಚಾರಗಳನ್ನು ಅದು ಅಳವಡಿಸಿಕೊಂಡಿದೆ. ಇದು ತಮಿಳಿನ ಬಲವನ್ನು ತೋರುತ್ತದೆ ವಿನಾ ದೌರ್ಬಲ್ಯವನ್ನಲ್ಲ ಎಂದು ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.





