ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ ತೊಟ್ಟಿರುವ NDA ಮೈತ್ರಿಕೂಟ ಕೊನೆಗೂ ಸೀಟು ಹಂಚಿಕೆಯ ಮಾತುಕತೆಯನ್ನು ಅಂತಿಮಗೊಳಿಸಿದೆ. ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಎಐಎಡಿಎಂಕೆ 178 ಕ್ಷೇತ್ರಗಳಲ್ಲಿ, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಉಳಿದಂತೆ ಮೈತ್ರಿಕೂಟದ ಇತರ ಪಕ್ಷಗಳಾದ ಪಿಎಂಕೆ ಹಾಗೂ ಎಎಂಎಂಕೆಗೆ ಕ್ರಮವಾಗಿ 18 ಮತ್ತು 11 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.
ಇನ್ನು, ಈ ಸಂಬಂಧಿಸಿದಂತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ, NDA ಮೈತ್ರಿಕೂಟದೊಳಗೆ ಸೀಟು ಹಂಚಿಕೆಯ ಮಾತುಕತೆ ಯಾವುದೇ ಗೊಂದಲಗಳಿಲ್ಲದೆ ನಡೆದಿದೆ. ಮೈತ್ರಿಪಕ್ಷಗಳಿಗೆ ಕ್ಷೇತ್ರಗಳನ್ನು ಅಧಿಕೃತವಾಗಿ ಹಂಚಿಕೆ ಮಾಡಲಾಗಿದೆ ಎಂದು ದೃಢಪಡಿಸಿದರು. ಉಳಿದ ಮೈತ್ರಿಪಕ್ಷಗಳೊಂದಿಗಿನ ಮಾತುಕತೆ ಮುಂದುವರಿದಿದ್ದು, ಶೀಘ್ರದಲ್ಲೇ ಅವುಗಳ ಸೀಟು ಹಂಚಿಕೆಯ ಕುರಿತು ಪ್ರಕಟಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?
ತಮಿಳುನಾಡು ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪಳನಿಸ್ವಾಮಿ, ಎನ್‌ಡಿಎ ಮೈತ್ರಿಕೂಟ ರಾಜ್ಯದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಎಐಎಡಿಎಂಕೆ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಎಐಎಡಿಎಂಕೆ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಅಮಿತ್ ಅವರ ಭೇಟಿಯ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿಪಕ್ಷಗಳು ಭೇಟಿಯಾಗುವುದು ಸಹಜ ಸಂಗತಿ. ರಾಹುಲ್ ಗಾಂಧಿಯನ್ನು ಭೇಟಿಯಾಗಲು ಕನಿಮೋಳಿಯೇಕೆ ದೆಹಲಿಗೆ ಹೋಗಿದ್ದರು ಎಂದು ಮರುಪ್ರಶ್ನಿಸಿದ್ದಾರೆ.
ಈ ನಡುವೆ ಬಿಜೆಪಿಗೆ 27 ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ಪಳನಿಸ್ವಾಮಿ ದೆಹಲಿಗೆ ಹೋಗಿ ನರೇಂದ್ರ ಮೋದಿ ಮತ್ತು ಅಮಿತ್ ಅವರಿಗಾಗಿ ಬಾಗಿಲು ಕಾಯಬೇಕಿತ್ತೇ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ.





