ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಡಿಎಂಕೆ ಮತ್ತು ಸಿಪಿಎಂ ಪಕ್ಷಗಳ ನಡುವೆ ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಭಿನ್ನಮತಗಳಿದ್ದವು. ನಾವು ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡದಿದ್ದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುವುದಾಗಿ ಸಿಪಿಎಂ ರಾಜ್ಯ ಘಟಕ ಡಿಎಂಕೆಗೆ ಎಚ್ಚರಿಕೆ ನೀಡಿತ್ತು. ಹಲವು ಸುತ್ತಿನ ಮಾತುಕತೆಯ ಬಳಿಕ ಡಿಎಂಕೆ ನೀಡಿರುವ 5 ಕ್ಷೇತ್ರಗಳಿಗೆ ಒಪ್ಪಿಗೆ ನೀಡಿದೆ.
ಸರಿಸುಮಾರು ಕಳೆದೊಂದು ತಿಂಗಳಿಂದ ಡಿಎಂಕೆ ಮತ್ತು ಸಿಪಿಎಂ ಪಕ್ಷಗಳ ನಡುವೆ ಸೀಟು ಹಂಚಿಕೆಯ ಮಾತುಕತೆಗಳು ನಡೆಯುತ್ತಿತ್ತು. ಗೊಂದಲಗಳು ಏರ್ಪಟ್ಟ ಬಳಿಕ ಸ್ವತಃ ಸಿಎಂ ಎಂ.ಕೆ ಸ್ಟ್ಯಾಲಿನ್ ಸಿಪಿಎಂ ರಾಜ್ಯ ಘಟಕದ ಮುಖಂಡರೊಂದಿಗೆ ಮಾತುಕತೆ ನಡೆಸಿ, 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ.ಷಣ್ಮುಗಂ ತಿಳಿಸಿದ್ದಾರೆ.
‘ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಈ ಬಾರಿ ಚುನಾವಣೆಗಾಗಿ ಹೊಸ ಪಕ್ಷಗಳ ಸೇರ್ಪಡೆಯಿಂದ ಪ್ರಸ್ತುತ ಮೈತ್ರಿಕೂಟ ಬಲಗೊಂಡಿದೆ. ಆದ್ದರಿಂದ 6ಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ನೀಡಿ ಎಂದು ಒತ್ತಾಯಿಸದಿರಲು ನಿರ್ಧರಿಸಿದ್ದೇವೆ. ʼ2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಸ್ಪರ್ಧಿಸಿದ್ದ ಕನಿಷ್ಠ 6 ಕ್ಷೇತ್ರಗಳನ್ನು ಈ ಬಾರಿಯೂ ಉಳಿಸಿಕೊಳ್ಳಲು ಪಕ್ಷದ ಕಾರ್ಯಕಾರಿ ಸಮಿತಿ ಸೂಚಿಸಿದೆ’ ಎಂದು ಷಣ್ಮುಗಂ ತಿಳಿಸಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಎಡ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
ಇದನ್ನೂ ಓದಿ : ಸರ್ವರನ್ನೂ ತಬ್ಬುವವಳು ತಾಯಿ ಗಂಗೆ; ಇಫ್ತಾರ್ ಊಟದಿಂದ ಆಕೆಯ ಉದಾರ ಮಡಿಲು ಮಲಿನವಾಗದು





