ಕೆಲವೇ ವಾರಗಳಲ್ಲಿ ನಡೆಯಲಿರುವ ತಮಿಳುನಾಡು ವಧಾನಸಭಾ ಚುನಾವಣೆಗೆ ಎಐಎಡಿಎಂಕೆ ತನ್ನ ಮೊದಲ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದೆ. ತಮಿಳುನಾಡಿನ ನಗರಗಳಲ್ಲಿ ಮಹಿಳೆಯರ ಜೊತೆಗೆ ಪುರುಷರಿಗೂ ಉಚಿತ ಬಸ್ ಪ್ರಯಾಣ ಒದಗಿಸುವುದಾಗಿ ಭರವಸೆ ನೀಡಿದೆ.
ಶನಿವಾರ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.”ಪಕ್ಷವು ಸರ್ಕಾರ ರಚಿಸಿದರೆ, ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ 2,000 ರೂ. ಜಮೆ ಮಾಡುವ ‘ಕುಲವಿಳಕ್ಕು ಯೋಜನೆ’ಯನ್ನು ಜಾರಿಗೆ ತರುವುತ್ತೇವೆ” ಎಂದು ಘೋಷಿಸಿದ್ದಾರೆ.
“ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗೆ, ‘ಅಮ್ಮ ಇಲ್ಲಮ್’ ಯೋಜನೆಯಡಿಯಲ್ಲಿ ಸರ್ಕಾರವು ಭೂಮಿಯನ್ನು ಖರೀದಿಸಿ, ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿಕೊಡಲಿದೆ. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗಾಗಿ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಕಟ್ಟಿ, ಉಚಿತವಾಗಿ ಮನೆಗಳನ್ನು ವಿತರಿಸಲಿದೆ” ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಎಐಎಡಿಎಂಕೆ, ಅಧಿಕಾರಕ್ಕೆ ಬಂದರೆ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 150 ದಿನಗಳ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಅಮ್ಮ ದ್ವಿಚಕ್ರ ವಾಹನ ಯೋಜನೆಯಡಿಯಲ್ಲಿ 5 ಲಕ್ಷ ಮಹಿಳಾ ಫಲಾನುಭವಿಗಳಿಗೆ ಪ್ರತಿಯೊಬ್ಬರಿಗೆ 25,000 ರೂ. ಸರ್ಕಾರಿ ಸಬ್ಸಿಡಿಯೊಂದಿಗೆ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ, ಆರ್ಥಿಕ ಸಮಾನತೆಯನ್ನು ಸೃಷ್ಟಿಸುವ ಉದ್ದೇಶದಿಂದ ಎಐಎಡಿಎಂಕೆ ಗೃಹಿಣಿಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಇದಲ್ಲದೆ, ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿಯೂ ಹೇಳಿತ್ತು. ಆದಾಗ್ಯೂ, ಆ ಚುನಾವಣೆಯಲ್ಲಿ ಸೋಲುಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮತ್ತೆ ಅಧಿಕಾರಕ್ಕೇರುವ ಗುರಿ ಹೊಂದಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆಗಿನ ಮೈತ್ರಿ ತೊರೆದಿದ್ದ ಎಐಎಡಿಎಂಕೆ, ಈಗ ಮತ್ತೆ ಬಿಜೆಪಿ ಜೊತೆ ಸಖ್ಯ ಬೆಳೆಸಿದೆ.
ಇನ್ನು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತು 2024ರ ಸಂಸತ್ ಚುನಾವಣೆಯಲ್ಲಿ ತನ್ನ ಉತ್ತಮ ಪ್ರದರ್ಶನದ ನಂತರ ವಿಶ್ವಾಸದಿಂದ ಚುನಾವಣಾ ಸ್ಪರ್ಧೆಗೆ ಪ್ರವೇಶಿಸುತ್ತಿದೆ.




