ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್ ಅವರ ‘ನಿಮ್ಮ ಬಯಕೆ, ಕನಸನ್ನು ನಮಗೆ ತಿಳಿಸಿ, ನಿಮ್ಮ ಕನಸು ಮತ್ತು ಬಯಕೆಯನ್ನು ನಮ್ಮ ಸರ್ಕಾರದಲ್ಲಿ ನಾವು ಈಡೇರಿಸುತ್ತೇವೆ ಎಂದು ನೀಡಿದ್ದ ಹೇಳಿಕೆಯನ್ನು ಟೀಕಿಸುವ ಭರದಲ್ಲಿ, ಚಿತ್ರನಟಿ ನಯನತಾರಾ ಅವರ ಹೆಸರನ್ನು ಉಲ್ಲೇಖಿಸಿ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಅವರು ನೀಡಿರುವ ಹೇಳಿಕೆ ಈಗ ತಮಿಳುನಾಡಿನ ರಾಜಕೀಯ ವಲಯದಲ್ಲಿ ವಿವಾದದ ಸ್ವರೂಪ ತಾಳಿದೆ.
ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎಐಎಡಿಎಂಕೆ ವಿಲ್ಲುಪುರಂನಲ್ಲಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಷಣ್ಮುಗಂ ಅವರು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರ ಮೇಲೆ ಉಲ್ಲೇಖಿಸಿರುವ ಹೇಳಿಕೆಯನ್ನು ಪ್ರಸ್ತಾಪಿಸಿ, “ನನಗೆ ನಯನತಾರಾ ಬೇಕು. ನೀವು ನನ್ನ ಬಯಕೆಯನ್ನು ಈಡೇರಿಸುತ್ತೀರಾ? ನಯನತಾರಾ ಅವರನ್ನು ಮದುವೆಯಾಗುವ ಯಾರೊಬ್ಬರ ಕನಸನ್ನಾದರೂ ಮುಖ್ಯಮಂತ್ರಿ ಸ್ಟ್ಯಾಲಿನ್ ಈಡೇರಿಸುತ್ತಾರಾ’ ಎಂದು ಪ್ರಶ್ನಿಸಿದ್ದರು. ಇದು ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಟಾಲಿನ್ ತಮ್ಮ ಅಧಿಕಾರದ ಅವಧಿಯ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಕೂಡ ಅವರು ವಾಗ್ದಾಳಿ ಮಾಡಿದ್ದಾರೆ.
ಇನ್ನು, ನಯನತಾರಾ ಬಗ್ಗೆ ನೀಡಿದ್ದ ಈ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ, ಮಾಜಿ ಕಾನೂನು ಸಚಿವರೂ ಆಗಿರುವ ಷಣ್ಮುಗಂ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆಗಳನ್ನು ‘ತಪ್ಪಾಗಿ’ ಬಿಂಬಿಸಲಾಗಿದೆ. ನಾನು ದುರುದ್ದೇಶದಿಂದ ನಟಿ ನಯನತಾರಾ ಅವರ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.





