2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದ ಗಡಿಯಿಂದಾಚೆ ನಿಲ್ಲಿಸುವಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಯಶಸ್ವಿಯಾಯಿತು. ಆದರೆ, ಇದೇ ಉತ್ಸಾಹದೊಂದಿಗೆ ಕಳೆದ ಎರಡು ವರ್ಷಗಳಲ್ಲಿ ವಿಪಕ್ಷಗಳು ಎದುರಿಸಿದ ಮಹಾರಾಷ್ಟ್ರ, ಹರಿಯಾಣ, ದೆಹಲಿ ಹಾಗೂ ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಸರಣಿ ಹಿನ್ನಡೆಗಳನ್ನು ಅನುಭವಿಸಿವೆ. ಮತ್ತೆ ದುರ್ಬಲೆತೆ ಇಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಮತ್ತು ಯಶಸ್ಸು ಗಳಿಸುವುದು ವಿಪಕ್ಷಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.
ಮುಂದಿನ ಕೆಲವು ವಾರಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಬಂಗಾಳ, ಕೇರಳ ಹಾಗೂ ತಮಿಳುನಾಡಿನಲ್ಲಿ ವಿಪಕ್ಷಗಳೇ ಅಧಿಕಾರದಲ್ಲಿವೆ. ಪುದುಚೇರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಆಡಳಿತವಿದೆ. ಈ ಎಲ್ಲ ರಾಜ್ಯಗಳ ಫಲಿತಾಂಶಗಳು ಭವಿಷ್ಯದ ರಾಜಕಾರಣದಲ್ಲಿ ರಾಷ್ಟ್ರಮಟ್ಟದಲ್ಲಿ ಗಣನೀಯ ಪ್ರಭಾವ ಬೀರಲಿವೆ. ಆದ್ದರಿಂದ, ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಲು ಶತಪ್ರಯತ್ನ ಮಾಡುತ್ತಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿ ಎಲ್‌ಡಿಎಫ್‌ನಿಂದ ಕೇರಳವನ್ನೂ, ಬಿಜೆಪಿ (ಎನ್‌ಡಿಎ)ಯಿಂದ ಪುದುಚೇರಿಯನ್ನೂ ಕಸಿದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಬಂಗಾಳದಲ್ಲಿ ಕಳೆದುಕೊಂಡಿರುವ ನೆಲೆಯನ್ನು ಮರಳಿ ಪಡೆಯುವ ಯತ್ನವೂ ಕಾಂಗ್ರೆಸ್‌ನಲ್ಲಿದೆ. ತಮಿಳುನಾಡಿನಲ್ಲಿ ಆಡಳಿತರೂಢ ಮೈತ್ರಿಕೂಟದಲ್ಲಿ ಪ್ರಮುಖ ಪಾಲುದಾರನಾಗಿರುವ ಕೈ ಪಕ್ಷ, ಅಸ್ಸಾಂನಲ್ಲಿ ಪ್ರಬಲ ವಿಪಕ್ಷವಾಗಿ ಉಳಿದಿದೆ. ಅಸ್ಸಾಂ ಗೆಲುವಿಗಾಗಿಯೂ ತಂತ್ರ ರೂಪಿಸುತ್ತಿದೆ.
ಪ್ರಸ್ತುತ ಚುನಾವಣೆಯಲ್ಲಿ ಬಂಗಾಳ ಮತ್ತು ತಮಿಳುನಾಡು ವಿಭಿನ್ನವಾಗಿ ಕಾಣುತ್ತಿವೆ. ಒಂದು ವೇಳೆ, ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಕಳೆದುಕೊಂಡರೆ, ಅದು ವಿಪಕ್ಷಗಳಿಗೆ ದೊಡ್ಡ ಪೆಟ್ಟು ನೀಡಲಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯಲ್ಲಿ ದುರ್ಬಲಗೊಂಡರೆ, ಬಿಜೆಪಿ ವಿರೋಧಿ ರಾಷ್ಟ್ರೀಯ ರಂಗವನ್ನು ಕುಂದಿಸುತ್ತದೆ.
ಕಾಂಗ್ರೆಸ್ ಪಾಲಿಗೆ ಕೇರಳ ಮತ್ತು ಅಸ್ಸಾಂ ಅಸ್ತಿತ್ವದ ಹೋರಾಟಗಳಾಗಿವೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ನಡುವೆ ನೇರ ಹಣಾಹಣಿ ಇದ್ದು, ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿ, ಬಿಜೆಪಿ ಪ್ರಸ್ತುತ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಂಘಟನಾತ್ಮಕವಾಗಿ ಎದುರಿಸಲು ಕಾಂಗ್ರೆಸ್ ಪ್ರಬಲ ಶಕ್ತಿ ಹೊಂದಿದೆ. ಪುದುಚೇರಿಯಲ್ಲಿಯೂ ಕಾಂಗ್ರೆಸ್ ತನ್ನ ಗಟ್ಟಿ ಬೇರು ಹೊಂದಿದ್ದು, ಅಧಿಕಾರಕ್ಕೆ ಮರಳುವ ಸಾಧ್ಯತೆಗಳಿವೆ.
ಈ ಮೂರರ ಪೈಕಿ, ಕೇರಳ ಅಥವಾ ಅಸ್ಸಾಂನಲ್ಲಿ ಸೋತರೆ, ಅದು ಕಾಂಗ್ರೆಸ್ ಪಾಲಿಗೆ ಮಾರಕವೇ ಆಗಲಿದೆ. ಕನಿಷ್ಠ ಒಂದು ರಾಜ್ಯದಲ್ಲಿ ಗೆದ್ದರೆ ಅದರ ವಿಶ್ವಾಸಾರ್ಹತೆ ಮರಳಲಿದೆ. ಮುಂದಿನ ಚುನಾವಣೆಗಳು ಕಾಂಗ್ರೆಸ್‌ಗೆ ಮಾರಕವಾಗಲಿವೆಯೇ ಅಥವಾ ವಿಶ್ವಾಸಾರ್ಹತೆ ಹೆಚ್ಚಿಸಲಿವೆಯೇ ಎಂಬುದು ಫಲಿತಾಂಶದಲ್ಲಿಯೇ ಗೊತ್ತಾಗಲಿದೆ. ಸದ್ಯ, ಕಾಂಗ್ರೆಸ್ ಅಸ್ಥಿರತೆಯನ್ನು ಎದುರಿಸುತ್ತಿದ್ದರೂ, ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಜಟಾಪಟಿ ನಡೆಸುತ್ತಿದೆ. ಮೈತ್ರಿ ಮುರಿದುಕೊಳ್ಳುವ ಬೆದರಿಕೆಯನ್ನೂ ಹಾಕುತ್ತಿದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಡಿಎಂಕೆ ವಿರುದ್ಧ ತೀವ್ರ ಅಸಮಾಧಾನವಿದೆ. ತಮಗೆ ತಳಮಟ್ಟದಲ್ಲಿ ಅಧಿಕಾರದ ಸರಿಯಾದ ಪಾಲು ಸಿಗುತ್ತಿಲ್ಲವೆಂದು ಅವರು ಆರೋಪಿಸುತ್ತಿದ್ದಾರೆ. ಹೆಚ್ಚು ಸೀಟುಗಳು ಮತ್ತು ಅಧಿಕಾರದಲ್ಲಿ ಹೆಚ್ಚಿನ ಪಾಲು ಬೇಕೆಂದು ರಾಜ್ಯದ ಕಾಂಗ್ರೆಸ್ ಮುಖಂಡರು ಪಟ್ಟುಹಿಡಿದಿದ್ದಾರೆ. ಅದಕ್ಕೆ ತಮ್ಮದೇ ವಾದವನ್ನೂ ಮುಂದಿಟ್ಟಿದ್ದಾರೆ. “2006ರಲ್ಲಿ ಡಿಎಂಕೆಗೆ ಬಹುಮತವಿಲ್ಲದಿದ್ದಾಗ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಿ, ಡಿಎಂಕೆಗೆ ನೆರವಾಯಿತು. ಆದರೆ, ಸರ್ಕಾರದಲ್ಲಿ ಯಾವುದೇ ಪಾಲು ಕೇಳದೆ, ಅಧಿಕಾರದಿಂದ ದೂರವಿತ್ತು. 2021ರಲ್ಲಿ ಒಟ್ಟು 234 ಸ್ಥಾನಗಳ ಪೈಕಿ ಡಿಎಂಕೆಗೆ ಹೆಚ್ಚಿನ ಸ್ತಾನಗಳನ್ನು ಬಿಟ್ಟು, ಕಾಂಗ್ರೆಸ್ ಕೇವಲ 25 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸಿತ್ತು. ಅಂದರೆ ಮಿತ್ರಪಕ್ಷಗಳಿಗೆ ಅವಕಾಶ ನೀಡಲು 2016ರಲ್ಲಿದ್ದ 41 ಸೀಟುಗಳಲ್ಲಿ 16 ಸೀಟುಗಳನ್ನು ತ್ಯಾಗ ಮಾಡಿತ್ತು” ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಡಿಎಂಕೆಗಾಗಿ ಕಾಂಗ್ರೆಸ್ ಒಂದು ಹೆಜ್ಜೆ ಹಿಂದೆ ಸರಿದಿತ್ತು ಎಂದು ವಾದಿಸಿದ್ದಾರೆ. ಇದೇ ಕಾರಣಗಳನ್ನು ನೀಡಿ ಪ್ರಸ್ತುತ ಚುನಾವಣೆಯಲ್ಲಿ ಹೆಚ್ಚಿನ ಪಾಲಿಗಾಗಿ ಡಿಎಂಕೆ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಲವರು, ಡಿಎಂಕೆ ಸಖ್ಯ ತೊರೆದು, ನಟ ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆಯೂ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದಾರೆ.
ಹೆಚ್ಚು ಅವಕಾಶಗಳ ಬೇಡಿಕೆಯೊಂದಿಗೆ ಪ್ರಬಲವಾಗಿ ನಿಂತಿರುವ ಕಾಂಗ್ರೆಸ್, ವಾಸ್ತವವಾಗಿ ತಮಿಳುನಾಡಿನಲ್ಲಿ ತನ್ನ ಸ್ವತಂತ್ರ ಶಕ್ತಿಯನ್ನು ಗಣನೀಯವಾಗಿ ಕಳೆದುಕೊಂಡಿದೆ. 2001ರಲ್ಲಿ ನಿಧನರಾದ ಜಿ.ಕೆ. ಮೂಪನಾರ್ ಅವರೇ ತಮಿಳುನಾಡಿನ ಕೊನೆಯ ಜನಪ್ರಿಯ ಕಾಂಗ್ರೆಸ್ ನಾಯಕ. 2004ರಿಂದ ಸಂಸತ್ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಕೂಡ ತಮ್ಮ ಗೆಲುವಿಗಾಗಿ ಡಿಎಂಕೆಯನ್ನು ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆಯನ್ನು ಎದುರಿಸಿ ಸ್ವಂತ ಬಲದ ಮೇಲೆ ಗೆಲ್ಲುವ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನಿಲ್ಲ. 23 ವರ್ಷಗಳಿಂದ ಭದ್ರವಾಗಿದ್ದ ಈ ಮೈತ್ರಿ 2014ರ 2ಜಿ ಹಗರಣದ ನಂತರ ತಾತ್ಕಾಲಿಕವಾಗಿ ಮುರಿದುಬಿದ್ದಿತ್ತು; ಪರಿಣಾಮ, ಎರಡೂ ಪಕ್ಷಗಳು ರಾಜ್ಯದ ಎಲ್ಲ 39 ಲೋಕಸಭಾ ಸ್ಥಾನಗಳಲ್ಲಿ ಸೋಲುಂಡಿದ್ದವು.
ಈ ಲೇಖನ ಓದಿದ್ದೀರಾ?: ಮೋದಿಯವರನ್ನು ‘ವಿಶ್ವಗುರು’ ಮಾಡಲು ಹೊರಟು ಸೋತ ಪಪ್ಪುಗಳು!
ತದನಂತರ 2016ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮತ್ತೆ ಒಂದಾದವು. ಆದರೆ ಜಯಲಲಿತಾ ಅವರು ಸ್ವಲ್ಪ ಹೆಚ್ಚಿನ ಮತಗಳೊಂದಿಗೆ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ಸೃಷ್ಟಿಸಿದರು. 1989ರ ನಂತರ ಆಡಳಿತಾರೂಢ ಪಕ್ಷವೊಂದು ಮರುಚುನಾಯಿತಗೊಂಡಿದ್ದು ಅದೇ ಮೊದಲು.
ಜಯಲಲಿತಾ ಮತ್ತು ಕರುಣಾನಿಧಿ ಅವರ ಮರಣದ ನಂತರ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಡಿಎಂಕೆ-ಕಾಂಗ್ರೆಸ್ ಮೈತ್ರಿಯು 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಮರಳಿತು. ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಬಂದ ಡಿಎಂಕೆ, ಕಾಂಗ್ರೆಸ್ ಕಾರ್ಯಕರ್ತರು ಅಥವಾ ಶಾಸಕರೊಂದಿಗೆ ಹೆಚ್ಚಿನ ಅಧಿಕಾರ ಹಂಚಿಕೊಳ್ಳಲು ಹಿಂದೇಟು ಹಾಕಿತು.
ಆದಾಗ್ಯೂ, 2024ರ ಲೋಕಸಭಾ ಚುನಾವಣೆಗೂ ಮುನ್ನ ಸ್ಟಾಲಿನ್ ಬಹಿರಂಗವಾಗಿ ರಾಹುಲ್ ಗಾಂಧಿಯವರನ್ನು ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಇದು ಅವರ ನಿಷ್ಠೆಯ ಸಂಕೇತವಾಗಿತ್ತು. ಸಂಸತ್ತಿನಲ್ಲಿ ಎರಡೂ ಪಕ್ಷಗಳ ಸಂಸದರು ಬಿಜೆಪಿಯ ವಿರುದ್ಧ ಒಗ್ಗಟ್ಟಾಗಿ ನಿಂತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ಗೆ ಡಿಎಂಕೆ ನೀಡಿರುವ ರಾಷ್ಟ್ರೀಯ ಬೆಂಬಲವಿದು.
ಈಗ ನಟ ವಿಜಯ್ ಮತ್ತು ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಉದಯವು ರಾಜಕೀಯ ಸಮೀಕರಣವನ್ನು ಬದಲಿಸಿದೆ. ಕಾಂಗ್ರೆಸ್‌ನ ಒಂದು ವರ್ಗವು ಇದರಲ್ಲಿ ಅವಕಾಶವನ್ನು ಹುಡುಕುತ್ತಿದೆ. ಡಿಎಂಕೆಯಿಂದ ಹೊರಬಂದು ಟಿವಿಕೆ ಜೊತೆ ಸೇರಿ, ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಬಹುದು. ಬಳಿಕ, ಹೊಸ ತಂತ್ರ ರೂಪಿಸಬಹುದು ಎಂಬುದು ಅವರ ಆಲೋಚನೆ. ಆದರೆ, ಇದು ಸುಲಭವಲ್ಲ.
ಕಾಂಗ್ರೆಸ್ ಮೈತ್ರಿಯಿಂದ ಹೊರಬಂದರೆ ಡಿಎಂಕೆ ಮೈತ್ರಿಕೂಟ ದುರ್ಬಲಗೊಳ್ಳಬಹುದು. ಆದರೆ, ಅದರಿಂದ ಕಾಂಗ್ರೆಸ್ ಬಲಗೊಳ್ಳುವುದಿಲ್ಲ. ಬದಲಾಗಿ, ರಾಜಕೀಯವಾಗಿ ಇನ್ನೂ ಪರೀಕ್ಷೆಗೆ ಒಳಪಡದ ವಿಜಯ್ ಅವರ ಜನಪ್ರಿಯತೆಯನ್ನು ಕಾಂಗ್ರೆಸ್ ಅವಲಂಬಿಸಬೇಕಾಗುತ್ತದೆ.
ಈ ಲೇಖನ ಓದಿದ್ದೀರಾ?: ವಿವಾದಿತ ‘ಗ್ರೇಟ್ ನಿಕೋಬಾರ್ ಯೋಜನೆ’ಗೆ NGT ಸಮ್ಮತಿ; ಪರಿಸರಕ್ಕೆ ಗಂಡಾಂತರ!
ತಮಿಳುನಾಡಿನಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಮತದಾರರ ಪಾಲು ಸುಮಾರು 13%ರಷ್ಟಿದ್ದು, ಇದು ಡಿಎಂಕೆ-ಕಾಂಗ್ರೆಸ್‌ನ ಪ್ರಮುಖ ಮತಬ್ಯಾಂಕ್ ಕೂಡ. ಇದೀಗ, ಈ ಮೈತ್ರಿಯ ಮತ್ತೊಂದು ಮತಬ್ಯಾಂಕ್ ಆಗಿರುವ ಯುವಜನರು ಮತ್ತು ದಲಿತ ಮತಗಳಿಗೆ ಲಗ್ಗೆ ಹಾಕಲು ವಿಜಯ್ ಪ್ರಯತ್ನಿಸುತ್ತಿದ್ದಾರೆ. ವಿಜಯ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದು ವಿಜಯ್‌ಗೆ ಸುಲಭವಾಗಬಹುದು. ಇದು ಡಿಎಂಕೆಗೆ ತಲೆನೋವಾಗಲಿದೆ. ಆದರೆ, ಡಿಎಂಕೆಯ ಪ್ರಬಲ ತಳಮಟ್ಟದ ಸಂಘಟನೆಯ ಮುಂದೆ ವಿಜಯ್ ಇನ್ನೂ ಪರೀಕ್ಷಿಸಲ್ಪಡದ ಶಕ್ತಿಯಾಗಿದ್ದಾರೆ.
ರಾಜ್ಯದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಕಾಂಗ್ರೆಸ್ ಮೈತ್ರಿ ತೊರೆಯುವುದು 1967ರಲ್ಲಿ ತಮಿಳುನಾಡಿನಲ್ಲಿ ಸ್ವತಂತ್ರ ಸರ್ಕಾರದ ಅಧಿಕಾರ ಕಳೆದುಕೊಂಡ ರಾಷ್ಟ್ರೀಯ ಪಕ್ಷವು ಅಷ್ಟು ಸುಲಭವಾಗಿ ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಬಹುದು. ಆದರೆ, ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಿದರೆ, ಬಿಜೆಪಿ ವಿರುದ್ಧದ ರಾಷ್ಟ್ರಮಟ್ಟದ ಸಂಘಟಿತ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಸಂಸತ್ತಿನಲ್ಲಿ ಬಿಜೆಪಿಯನ್ನು ಎದುರಿಸುವ ಕಾಂಗ್ರೆಸ್‌ನ ಬಲಕ್ಕೆ ತೊಡಕಾಗಲಿದೆ.
ಇದೇ ವೇಳೆ, ಹೆಚ್ಚು ಅವಕಾಶಗಳು ತಮಗೆ ಬೇಕು ಎನ್ನುವ ಡಿಎಂಕೆ ಕೂಡ ಮೈತ್ರಿಯ ಪರಿಸ್ಪರ ಗೌರವದ ಅಗತ್ಯವನ್ನು ಅರಿಯಬೇಕು. ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುವುದು ಮತ್ತು ಅಧಿಕಾರದಲ್ಲಿ ಪಾಲು ನೀಡದಿರುವುದು ಅಸ್ಥಿರತೆಗೆ ಕಾರಣವಾಗುತ್ತದೆ. ನಾಯಕರು ಒಂದಾಗಿದ್ದರೂ ಕಾರ್ಯಕರ್ತರಲ್ಲಿ ಒಡಕು ಮೂಡುವುದು ಮತದಾನದ ಮೇಲೆ ತೀವ್ರ ಪರಿಣಾಮ ಬೀರಬಹುದು. ಇಂತಹ ವಿಚಾರದಲ್ಲಿ ಮೈಮರೆಯುವುದು ಅಪಾಯಕಾರಿ.
ಅಂತೆಯೇ, ಕಾಂಗ್ರೆಸ್ ಕೂಡ ತನ್ನ ಮರುಹುಟ್ಟಿಗಾಗಿ ಮಹತ್ವಾಕಾಂಕ್ಷೆಗಾಗಿ ಬೇಕಿರುವ ಸಮಯವೆಷ್ಟು ಎಂಬುದನ್ನು ಗಮನಿಸಬೇಕು. ನಿರ್ಣಾಯಕ ಚುನಾವಣಾ ಸಮಯದಲ್ಲಿ ಸಂಯಮದಿಂದ ವರ್ತಿಸಬೇಕು. ಮೈತ್ರಿ ಮುರಿದುಕೊಂಡು ಅನಿರೀಕ್ಷಿತ ರಾಷ್ಟ್ರೀಯ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು.
ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಕಾಂಗ್ರೆಸ್ ಒಗ್ಗಟ್ಟನ್ನು ಪ್ರದರ್ಶಿಸಿದರೆ, ಗೆಲುವು ಸಾಧ್ಯವಿದೆ. ಅಂತೆಯೇ, ಅಸ್ಸಾಂನಲ್ಲಿ ಪ್ರಬಲ ಸಂಘಟಿತ ಹೋರಾಟ ನೀಡದರೆ, ಕಾಂಗ್ರೆಸ್‌ಗೆ ಅವಕಾಶದ ಬಾಗಿಲು ತೆರೆಯಲಿದೆ. ಇನ್ನು, ಪಶ್ಚಿಮ ಬಂಗಾಳವು ವಿರೋಧ ಪಕ್ಷಗಳ ಒಕ್ಕೂಟದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ಬಿಜೆಪಿಯ ಪ್ರಬಲ ಚುನಾವಣಾ ತಂತ್ರ ಮತ್ತು ಯಂತ್ರವನ್ನು ಎದುರಿಸಲು ಕಾಂಗ್ರೆಸ್ ಮೊದಲು ಸ್ಥಿರತೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ‘ಇಂಡಿಯಾ’ ಒಕ್ಕೂಟದ ಭವಿಷ್ಯ ಈಗ ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಹೇಗೆ ವ್ಯವಹರಿಸುತ್ತದೆ? ಅಸ್ಸಾಂ ಹಾಗೂ ಕೇರಳದಲ್ಲಿ ಹೇಗೆ ಸಂಘಟಿತವಾಗುತ್ತದೆ? ಎಂಬುದರ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳ ನಾಯಕತ್ವವನ್ನು ಕಾಂಗ್ರೆಸ್ ನಿರ್ವಹಿಸುವುದು ನಿರ್ಧಾರವಾಗಲಿದೆ.




