ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಲು ಯತ್ನಿಸಿದಾಗ ಡಿಎಂಕೆ ಪಕ್ಷದಿಂದ ಬೆದರಿಕೆ ಬಂದಿತ್ತು ಎಂದು ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಆರೋಪ ಮಾಡಿದ್ದಾರೆ, ಇದು ಈಗ ತಮಿಳುನಾಡಿನ ರಾಜಕೀಯದಲ್ಲಿ ಬಹಳ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ವಿವಾದವೆದ್ದ ಹಿನ್ನೆಲೆಯಲ್ಲಿ ಮೈಕ್ರೋಬ್ಲಾಗಿಂಗ್ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಜನಿಕಾಂತ್, ಈ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ಹೇಳುವ ಮೂಲಕ ಆರೋಪವನ್ನು ರಜನಿಕಾಂತ್ ತಳ್ಳಿ ಹಾಕಿದ್ದಾರೆ.
ಅರ್ಜುನ ಅವರು ನನ್ನ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ. ಸಮಯವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ರಜನಿಕಾಂತ್ ಅವರು 2017 ಡಿಸೆಂಬರ್‌ನಲ್ಲಿ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ 2020ರ ಡಿಸೆಂಬರ್‌ನಲ್ಲಿ ರಾಜಕೀಯದಿಂದ ಹಿಂದೆ ಸರಿದರು ಎಂದು ವರದಿಯಾಗಿತ್ತು.
ನಟ ‘ದಳಪತಿ’ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪ್ರಚಾರ ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಟಿವಿಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿತ್ತು. ಆದರೆ ಟಿವಿಕೆ ಈ ಆಫರ್ ಅನ್ನು ನಿರಾಕರಿಸಿದೆ ಎಂದು ಹೇಳಲಾಗಿದೆ.
ತಮಿಳುನಾಡಿನ 234 ಸ್ಥಾನಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.





