ಲೋಕಸಭಾ ಚುನಾವಣೆಗೆ ಇಂದು ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಏರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿದ್ದು, ಮತ್ತೊಮ್ಮೆ ಸೊನ್ನೆ ಸುತ್ತಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ. ಡಿಎಂಕೆಯ ಗಣಪತಿ ರಾಜ್‌ಕುಮಾರ್ ವಿರುದ್ಧ ಸೋಲು ಅನುಭವಿಸಿದ್ದಾರೆ. ದಕ್ಷಿಣ ಚೆನ್ನೈನಲ್ಲಿ ಬಿಜೆಪಿಯ ತಮಿಳಿಸೈ ಸೌಂದರರಾಜನ್ ಅವರು ಡಿಎಂಕೆಯ ತಮಿಜಾಚಿ ತಂಗಪಾಂಡಿಯನ್ ಅವರಿಗಿಂತ ಹಿಂದುಳಿದಿದ್ದಾರೆ.
ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ 39 ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ತಮಿಳುನಾಡಿನಲ್ಲಿ ಸೊನ್ನೆ ಸುತ್ತಿದೆ.
ಹಾಲಿ ಡಿಎಂಕೆ ಸಂಸದೆ ಕನಿಮೊಳಿ ತೂತುಕುಡಿಯಲ್ಲಿ ಎಐಎಡಿಎಂಕೆಯ ಆರ್ ಶಿವಸಾಮಿ ವೇಲುಮಣಿ ಅವರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮತ್ತು ತೆಲಂಗಾಣ ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜ್ ಅವರು ಚೆನ್ನೈ ದಕ್ಷಿಣದಿಂದ ಸ್ಪರ್ಧಿಸಿದ್ದಾರೆ. ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರು ನೀಲಗಿರಿಯಲ್ಲಿ ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವರೂ ಆಗಿರುವ ಬಿಜೆಪಿಯ ಎಲ್ ಮುರುಗನ್ ವಿರುದ್ಧ ಸ್ಪರ್ಧಿಸಿದ್ದಾರೆ.
1,14,277 ಮತಗಳೊಂದಿಗೆ, ಇಂಡಿಯಾ ಒಕ್ಕೂಟದ ಮಿತ್ರಪಕ್ಷವಾದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಮ್‌ಡಿಎಮ್‌ಕೆ) ನ ದುರೈ ವೈಕೋ ತಿರುಚಿರಾಪಳ್ಳಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಎಐಎಡಿಎಂಕೆಯ ಕರುಪ್ಪಯ್ಯ ನಂತರದ ಸ್ಥಾನದಲ್ಲಿದ್ದಾರೆ. ಪಿ 54,574 ಮತಗಳೊಂದಿಗೆ ತೀರಾ ಹಿಂದುಳಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ | ಟಿಡಿಪಿ ಸರ್ಕಾರ ರಚಿಸುವುದು ಬಹುತೇಕ ಖಚಿತ
ಡಿಎಂಕೆ ಅಭ್ಯರ್ಥಿಗಳಾದ ಕಲಾನಿಧಿ ವೀರಸ್ವಾಮಿ, ತಮಿಳಚಿ ತಂಗಪಾಂಡಿಯನ್ ಮತ್ತು ದಯಾನಿಧಿ ಮಾರನ್ ಅವರು ಚೆನ್ನೈನ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪ್ರಸ್ತುತ ಕರೂರ್ ಲೋಕಸಭಾ ಕ್ಷೇತ್ರದಿಂದ ಎಐಎಡಿಎಂಕೆಯ ತಂಗವೇಲ್ ಎಲ್ ಹಿನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ನ ಎಸ್ ಜೋತಿಮಣಿ ಮುನ್ನಡೆ ಸಾಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಅಲ್ಲದೆ, ರಾಮೇಶ್ವರಂ ಕ್ಷೇತ್ರದಲ್ಲಿ ಮೋದಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಇದ್ದವು. ಹೀಗಾಗಿ, ತಮಿಳುನಾಡಿನಲ್ಲಿ ಈ ಬಾರಿ ಖಾತೆ ತೆರೆಯುತ್ತದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿದ್ದವು. ಆದರೆ, ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದ್ದು, ಮತ್ತೆ ಸೊನ್ನೆ ಸುತ್ತಿದೆ.





