ತಮಿಳುನಾಡಿನ ಹಾಲಿ ಡಿಎಂಕೆ ಸರ್ಕಾರ ರಾಜ್ಯವನ್ನು ಮಾದಕ ದ್ರವ್ಯಗಳ ತಾಣವನ್ನಾಗಿ ಮಾಡಿದೆ ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಟೀಕಿಸಿದ್ದಾರೆ.
ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸುತ್ತಿದೆಯೇ ಅಥವಾ ಸಮಾಜವಿರೋಧಿ ಶಕ್ತಿಗಳಿಗೆ ಉತ್ತೇಜಿಸುತ್ತಿದೆಯೇ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದವರು ಆಕ್ರೋಶ ಹೊರ ಹಾಕಿದ್ದಾರೆ.
2021ರಲ್ಲಿ ಸ್ಟಾಲಿನ್ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಗಾಂಜಾ, ಅಕ್ರಮ ಮದ್ಯ ಮಾರಾಟ ಹಾಗೂ ಡ್ರಗ್ ಮಾಫಿಯಾ ಏರಿಕೆಯಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಮಾಧ್ಯಮ ವರದಿಗಳಿಂದ ಸಾಬೀತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕುಸಿತ:
ಕಳೆದ ಐದು ವರ್ಷಗಳ ಡಿಎಂಕೆ ಆಡಳಿತಾವಧಿಯಲ್ಲಿ ಸುಮಾರು 30 ಲಾಕಪ್ ಸಾವುಗಳು ನಡೆದಿವೆ.
ಕಳೆದ ಎರಡು ತಿಂಗಳಲ್ಲೇ ನಾಲ್ವರು ದಲಿತ ಯುವಕರು ಪೊಲೀಸ್ ವಶದಲ್ಲಿ ಸಾವನ್ನಪ್ಪಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ಹಿಂದೆಂದೂ ಕಾಣದ ರೀತಿಯಲ್ಲಿ ಹೆಚ್ಚಿವೆ ಎಂದು ಅವರು ಆರೋಪ ಹೊರಿಸಿದ್ದಾರೆ.
ಜನವಿರೋಧಿ ಆಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸಬೇಕಾದ ಸಮಯ ಬಂದಿದೆ. ಮುಂಬರುವ ದಿನಗಳಲ್ಲಿ ಈ ಅಸಮರ್ಥ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಶಾಂತಿ ಮತ್ತು ಸುರಕ್ಷತೆಯನ್ನು ಮರುಸ್ಥಾಪಿಸಲು ಜನರು ಕೈಜೋಡಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.





