ತಮಿಳು ಸಾಹಿತಿ, ಗೀತಾರಚನೆಕಾರ ವೈರಮುತ್ತು ಅವರಿಗೆ ‘ಜ್ಞಾನಪೀಠ ಪ್ರಶಸ್ತಿ’ ನೀಡುವುದಾಗಿ ಘೋಷಿಸಲಾಗಿದೆ. ಸುಮಾರು 24 ವರ್ಷಗಳ ಬಳಿಕ, ತಮಿಳು ಸಾಹಿತ್ಯಕ್ಕೆ ಭಾರತದ ಅತ್ಯುನ್ನತ ಸಾಹಿತ್ಯ ಗೌರವ ದೊರೆತಿದೆ. ಆದರೆ, ವೈರಮುತ್ತು ಅವರಿಗೆ ಈ ಪ್ರಶಸ್ತಿ ಕೊಡಮಾಡುತ್ತಿರುವುದಕ್ಕೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಾದ್ಯಂತ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗಿದೆ.
2018ರಲ್ಲಿ ದೇಶಾದ್ಯಂತ, ಅದರಲ್ಲೂ ಸಿನಿಮಾರಂಗದಲ್ಲಿ ಹೆಚ್ಚು ಸದ್ದು ಮಾಡಿದ್ದ #MeToo ಚಳವಳಿಯ ಸಂದರ್ಭದಲ್ಲಿ ವೈರಮುತ್ತು ವಿರುದ್ಧವೂ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿದ್ದವು. ಅನುಚಿತ ಸ್ಪರ್ಶ, ಲೈಂಗಿಕ ಸಹಕಾರಕ್ಕೆ ಒತ್ತಾಯ, ವೃತ್ತಿಪರ ಅವಕಾಶಗಳ ಆಮಿಷವೊಡ್ಡಿ ಕಿರುಕುಳಕ್ಕೆ ಯತ್ನದಂತಹ ಗಂಭೀರ ಆರೋಪಗಳು ವೈರಮುತ್ತು ವಿರುದ್ಧ ಬಹಿರಂಗಗೊಂಡಿದ್ದವು.
ವೈರಮುತ್ತು ವಿರುದ್ಧ ಸುಮಾರು 17ರಿಂದ 20 ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು ಮತ್ತು ಅನಾಮಧೆಯವಾಗಿ ದೂರು ನೀಡಿದ್ದರು. ಅಲ್ಲದೆ, ಗಾಯಕಿ ಚಿನ್ಮಯಿ ಶ್ರೀಪಾದ ಅವರು ನೇರವಾಗಿಯೇ ಆರೊಪ ಮಾಡಿದ್ದರು. ‘ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಮಯದಲ್ಲಿ, ವೈರಮುತ್ತು ತಮಗೆ ಕಿರುಕುಳ ನೀಡಲು ಯತ್ನಿಸಿದ್ದರು’ ಎಂದು ದೂರಿದ್ದರು.
ಚಿನ್ಮಯಿ ಅವರು ತಮ್ಮ ಹೆಸರು ಬಹಿರಂಗಪಡಿಸಿಯೇ ನೇರವಾಗಿ ಆರೋಪ ಮಾಡಿದ ಬಳಿಕ, ಗಾಯಕಿ ಭುವನಾ ಶೇಷನ್, ಸಿಂಧುಜಾ ರಾಜಾರಾಂ, ಎ.ಆರ್ ರೈಹಾನಾ, ಪತ್ರಕರ್ತೆ ಸಂಧ್ಯಾ ಮೆನನ್ ಸೇರಿ ಹಲವರು ತಾವು ವೈರಮುತ್ತುಯಿಂದ ಅನುಭವಿಸಿ ಕಿರುಕುಳದ ಕುರಿತು ಹೇಳಿಕೊಂಡಿದ್ದರು.
ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊತ್ತಿರುವ ವೈರಮುತ್ತು ಅವರಿಗೆ ‘ಜ್ಞಾನಪೀಠ’ ಪ್ರಶಸ್ತಿ ನೀಡಿರುವುದನ್ನು ಚಿನ್ಮಯಿ ಶ್ರೀಪಾದ ಅವರು ಟೀಕಿಸಿದ್ದಾರೆ. ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಅವರು, ”2018ರಲ್ಲಿ ವಿವಿಧ ವಯಸ್ಸಿನ ಹಲವು ಮಹಿಳೆಯರು ಈತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಂತಹ ವ್ಯಕ್ತಿಗೆ ಇಂದು ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್, ನಟ ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಹಲವಾರು ಹಿರಿಯ ನಟರು ವೈರಮುತ್ತಗೆ ಅಭಿನಂದನೆ ಸಲ್ಲಿಸಿರುವುದನ್ನು ಖಂಡಿಸಿರುವ ಚಿನ್ಮಯಿ, “ಪುರುಷರು ಯಾವಾಗಲೂ ತಮ್ಮ ಸಹೋದರರು, ಮಾವಂದಿರು, ತಂದೆಯರು ಹಾಗೂ ಮಾರ್ಗದರ್ಶಕರ ಪರ ನಿಲ್ಲುತ್ತಾರೆ. ಮಹಿಳೆಯರು ಕಿರುಕುಳ ಎದುರಿಸಿದರೂ ಅದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಪುರುಷರು ಮಹಿಳೆಯರ ಪರ ನಿಲ್ಲುವುದಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಹಲವಾರು ನೆಟ್ಟಿಗರು ಕೂಡ ವೈರಮುತ್ತಗೆ ಪ್ರಶಸ್ತಿ ನೀಡಿರುವುದನ್ನು ಟೀಕಿಸಿದ್ದಾರೆ. “ವೈರಮುತ್ತು ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು/ರಜನಿಕಾಂತ ಅವರಂತಹ ದೊಡ್ಡ ದೊಡ್ಡ ನಟರ ಬೆಂಬಲದಿಂದ ಈ ತನಕ ಅಬ್ಬರಿಸುತ್ತಲೇ ಇದ್ದಾನೆ. ಈತ ಅಪ್ಪಟ ಪಿತೃಪ್ರಧಾನ ವ್ಯವಸ್ಥೆಯ ನೀಚ ಗಂಡಸು” ಎಂದು ಅರುಣ್ ಜೋಳದಕೂಡ್ಲಿಗಿ ಕಿಡಿಕಾರಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
ಕೋಲಾರ ಸಿದ್ದಬಸವಯ್ಯ ಎಂಬವರು, “ಈತ ಚಿನ್ಮಯಿ ಎಂಬ ಚಿತ್ರರಂಗದ ಹೆಣ್ಣುಮಗಳಿಗೆ ಕೊಟ್ಟ ಈಗಲೂ ಪರೋಕ್ಷವಾಗಿ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ.ಆತನ ಸಾಹಿತ್ಯದ ಬಗ್ಗೆ ನನ್ನ ಜ್ಞಾನ ಪರಿಮಿತವಾದದ್ದು. ಸಾಮಾನ್ಯವಾಗಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಗಟ್ಟಿ ಬರಹಗಾರರನ್ನೆ ಆಯ್ಕೆ ಮಾಡಿರುತ್ತಾರೆಂದು ಕೊಳ್ಳೋಣ. ಅಭಿನಂದಿಸೋಣ. ವ್ಯಕ್ತಿಯೋರ್ವನು ಯಾವುದೇ ಕ್ಷೇತ್ರದಲ್ಲಿ ಪ್ರಸಿದ್ಧನಾದಾಗ ಇಡೀ ಸಮಾಜ ಆತನೆಡೆಗೆ ಆಕೆಯೆಡೆಗೆ ಹೆಚ್ಚಿನ ಗೌರವ ಹೆಮ್ಮೆಯಿಂದ ನೋಡುತ್ತದೆ. ತಮ್ಮ ಮಾಡೆಲ್ ಆಗಿ ಅಂಗೀಕರಿಸುತ್ತದೆ. ಅಂತಹ ವ್ಯಕ್ತಿಗಳು ತಮ್ಮ ನಡೆನುಡಿಗಳಲ್ಲಿ ಮೇಲ್ಮಟ್ಟದಲ್ಲಿರಬೇಕೆಂದು ಜನ ಭಾವಿಸಿದರೆ ಖಂಡಿತವಾಗಿಯೂ ಅದು ಅಸಹಜವಲ್ಲ.ವೈರಮುತ್ತು ಅಥವಾ ಮತ್ತೊಬ್ಬರು ಎಲ್ಲರಿಗೂ ಇದು ಅನ್ವಯವಾಗಬೇಕಾದ ಅಂಶ” ಎಂದಿದ್ದಾರೆ.
ವೈರಮುತ್ತು ಅವರಿಗೆ 2021ರಲ್ಲಿ ಕೇರಳದ ONV ಕುರುಪ್ ಸಾಹಿತ್ಯ ಪ್ರಶಸ್ತಿ ನೀಡಲಾಗಿತ್ತು. ಆದರೆ, #MeToo ಆರೋಪಗಳಿಂದಾಗಿ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದರು. ಈಗ ಜ್ಞಾನಪೀಠ ಪ್ರಶಸ್ತಿ ಘೋಷಣೆಯು ‘ಮೀಟೂ’ ಆರೋಪಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಸದ್ಯ, ಕೆಲವೇ ವಾರಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಇಂತಹ ಸಮಯದಲ್ಲಿ ‘ಜ್ಞಾನಪೀಠ ಟ್ರಸ್ಟ್’ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ಬಿಜೆಪಿಯ ಚುನಾವಣಾ ತಂತ್ರದ ಭಾಗವೆಂದೂ ಹೇಳಲಾಗುತ್ತಿದೆ.




