ಇಂಟರ್‌ವ್ಯೂವ್‌ಗಾಗಿ ಮನೆಯಿಂದ ತೆರಳಿದ್ದ ಯುವತಿ ಎರಡು ದಿನಗಳಾದರೂ ಮರಳಿ ಬಂದಿರಲಿಲ್ಲ. ಆಕೆ ನಾಪತ್ತೆಯಾಗಿದ್ದರು. ಇದೀಗ, ಆಕೆ ಮೃತದೇಹ ಭಾಗಶಃ ಸುಟ್ಟುಹೋದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾಗಿದೆ. ಆಕೆಯನ್ನು ಕೊಲೆಗೈದು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಘಟನೆಯು ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶ್ರೀನಿವಾಸಪುರಂ ನಿವಾಸಿಯಾಗಿರುವ ಯುವತಿ, ಗುರುವಾರ ಕೆಲಸದ ಇಂಟರ್‌ವ್ಯೂವ್‌ಗಾಗಿ ತೆರಳಿದ್ದರು. ಬಳಿಕ, ಆಕೆ ನಾಪತ್ತೆಯಾಗಿದ್ದರು. ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದಾಗ, ಆಕೆಯ ಮೃತದೇಹವು ಸಣಮಂಗಲಂ ಅರಣ್ಯ ಪ್ರದೇಶದಲ್ಲಿ ದೊರೆತಿದೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮೃತದೇಹವು ತಮ್ಮ ಮಗಳದ್ದೇ ಎಂದು ಪೋಷಕರು ಗುರುತಿಸಿದ್ದಾರೆ. ಶವವನ್ನು ತಿರುಚ್ಚಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೂರ್ತಿ ಮಹಾಶಯರೇ, ದುರ್ಬಲ ಜಾತಿಗಳಿಗೆ ಮೀಸಲಾತಿಯಲ್ಲಿ ಮಾತ್ರ ಮೆರಿಟ್ ನೆನಪಾಗುವುದೇ?
ಮಹಿಳೆಯನ್ನು ಕೊಲೆ ಮಾಡಿ, ಸುಟ್ಟು ಹಾಕಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಕೆಯ ಕೊಲೆಗೆ ಕಾರಣಗಳನ್ನು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿ ಆಗ್ದಾಳಿ ನಡೆಸಿದೆ. “ಡಿಎಂಕೆ ಆಡಳಿತದಲ್ಲಿ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿನೋಜ್ ಪಿ ಸೆಲ್ವಂ ಟೀಕಿಸಿದ್ದಾರೆ.




