ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆ ತಮ್ಮನ್ನು ತಳುಕುಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾನಹಾನಿಕಾರಕ ಪೋಸ್ಟ್‌ಗಳ ವಿರುದ್ಧ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ವ್ಯಕ್ತಿಗಳು ಹಾಗೂ ಆನ್‌ಲೈನ್ ವೇದಿಕೆಗಳ ವಿರುದ್ಧ ತಡೆಯಾಜ್ಞೆ ಮತ್ತು ಪರಿಹಾರ ಕೋರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕಾರಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಎಪ್‌ಸ್ಟೀನ್ ಜೊತೆ ತಮಗೆ ಸಂಬಂಧವಿದೆ ಎಂಬಂತೆ ಸುಳ್ಳು ನಿರೂಪಣೆ ಸೃಷ್ಟಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ರೀತಿಯ ಆಧಾರರಹಿತ ಕಂಟೆಂಟ್‌ಗಳಿಂದಾಗಿ ಸಮಾಜದಲ್ಲಿ ಯಮ್ಮ ಘನತೆ ಮತ್ತು ವೈಯಕ್ತಿಕ ವರ್ಚಸ್ಸಿಗೆ ತೀವ್ರ ಧಕ್ಕೆಯಾಗಿದೆ ಎಂದು ಅವರು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ತಾವು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿಯಾಗಿರುವ ಕಾರಣಕ್ಕಾಗಿಯೇ, ಉದ್ದೇಶಪೂರ್ವಕವಾಗಿ ತಮ್ಮನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದೆ. ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಭಾರತೀಯ ವಿದೇಶಾಂಗ ಸೇವೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿದ್ದರು ಎಂಬುದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಭವಿಷ್ಯದಲ್ಲಿ ಈ ವ್ಯಕ್ತಿಗಳು ಮತ್ತು ವೇದಿಕೆಗಳು ಇಂತಹ ಯಾವುದೇ ಮಾನಹಾನಿಕಾರಕ ವಿಷಯಗಳನ್ನು ಪ್ರಕಟಿಸದಂತೆ ಅಥವಾ ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಬೇಕು. ಅಲ್ಲದೆ ಪ್ರಸ್ತುತ ಆನ್‌ಲೈನ್ ವೇದಿಕೆಗಳಲ್ಲಿರುವ ಎಲ್ಲ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಈ ಮಾನನಷ್ಟದಿಂದ ತಮಗಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.





