ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ನಟಿಸಿ ಅಣಕಿಸಿದ ಕಾರಣಕ್ಕೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಪಿಚೋರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ ನೀಡಿದ ದೂರಿನ ಆಧಾರದಲ್ಲಿ ಸಾಕೇತ್ ಪುರೋಹಿತ್ ಎಂಬ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕ ಪ್ರಧಾನಿ ಮೋದಿ ಅವರನ್ನು ಅಣಕಿಸುವ 58 ಸೆಕೆಂಡುಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿದ್ದೀರಾ? ಗದಗ | ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳ ಏರಿಕೆ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ವಿರೋಧ
ಈ ವಿಡಿಯೋ ನೋಡಿದ ಬಿಜೆಪಿ ಶಾಸಕರು ಶಿವಪುರಿ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಡಿಇಒ ತನಿಖೆ ನಡೆಸಿ, ನಂತರ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ಶಿವಪುರಿ ಡಿಇಒ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಶಿಕ್ಷಕ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಹಾಗೆಯೇ ಈ ವಿಡಿಯೋ ಮಾಡಿರುವುದು ಸಂಪೂರ್ಣ ಅಶಿಸ್ತು ಮತ್ತು ನಾಗರಿಕ ಸೇವಾ ನಿಯಮಗಳು 1966ರ ಉಲ್ಲಂಘನೆ ಎಂದು ಪರಿಗಣಿಸಿ, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದೂ ಆದೇಶ ಪ್ರತಿಯಲ್ಲಿ ಬರೆಯಲಾಗಿದೆ.
ಇನ್ನು ತಮ್ಮ ವಿರುದ್ಧದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಕ ಸಾಕೇತ್ ಪುರೋಹಿತ್, ಈ ಕ್ರಮ ಏಕಪಕ್ಷೀಯ ಎಂದು ಖಂಡಿಸಿದ್ದಾರೆ. “ನಮಗೆ ಯಾವುದೇ ನೋಟಿಸ್ ನೀಡದೆ ಅಥವಾ ವಿವರಣೆ ನೀಡಲು ಅವಕಾಶ ನೀಡದೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾ-ಸಂಘರ್ಷದಿಂದಾಗಿ ಸರಬರಾಜು ಸಮಸ್ಯೆ ಉಂಟಾಗಿ ಸದ್ಯ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 60 ರೂ.ಗಳಷ್ಟು ಹೆಚ್ಚಿಸಲಾಗಿದೆ. ಜತೆಗೆ ಎಲ್‌ಪಿಜಿ ಸಿಲಿಂಡರ್ ಕೊರತೆಯೂ ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹಲವು ಮಂದಿ ಗಟಾರದಿಂದ ಗ್ಯಾಸ್ ಉತ್ಪಾದಿಸುವ ಪ್ರಧಾನಿ ಮೋದಿ ಅವರ ಉಪಾಯದ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ, ಲೇವಡಿ ಮಾಡುತ್ತಿದ್ದಾರೆ. ಅದರಂತೆಯೇ ಶಿಕ್ಷಕ ಕೂಡಾ ವಿಡಿಯೋ ಮಾಡಿದ್ದಾರೆ. ಆದರೆ ವಿಡಿಯೋ ಮಾಡಿದ್ದಕ್ಕೆ ಶಿಕ್ಷಕನನ್ನು ಅಮಾನತು ಮಾಡಿರುವುದು ಸದ್ಯ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರಿ ಶಿಕ್ಷಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಟೀಕೆಗಳು ಕೇಳಿಬರುತ್ತಿವೆ.





