ಈಗಾಗಲೇ ದೇವರ ದರ್ಶನ, ಪೂಜೆ ಮೊದಲಾದವು ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇದೀಗ ಮದುವೆ ಆರತಕ್ಷತೆಯೂ ಆನ್‌ಲೈನ್ ಮೂಲಕ ನಡೆದಿದೆ. ಇಂಡಿಗೋ ವಿಮಾನ ರದ್ದಾದ ಕಾರಣ ಹುಬ್ಬಳ್ಳಿಯಲ್ಲಿ ನಡೆದ ತಮ್ಮದೇ ಆರತಕ್ಷತೆಯನ್ನು ವಧು-ವರ ಆನ್‌ಲೈನ್‌ನಲ್ಲಿ ಹಾಜರಾದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ್ ಮತ್ತು ಒಡಿಶಾದ ಭುವನೇಶ್ವರದ ಸಂಗಮ ದಾಸ್ ಆರತಕ್ಷತೆ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಡೆಯಬೇಕಿತ್ತು. ಆದರೆ ಇಂಡಿಗೋ ವಿಮಾನ ರದ್ದಾದ ಕಾರಣ ನವದಂಪತಿಗೆ ಹುಬ್ಬಳ್ಳಿ ತಲುಪಲು ಅನಾನುಕೂಲವಾಗಿದೆ. ಅನಿವಾರ್ಯವಾಗಿ ವರ್ಚುವಲ್ ಆಗಿ ನಡೆದಿದೆ.
ನವೆಂಬರ್ 23ರಂದು ಭುವನೇಶ್ವರದಲ್ಲಿ ವಿವಾಹವಾದ ದಂಪತಿಯ ಮದುವೆ ಔತಣಕೂಟ ಬುಧವಾರ ವಧುವಿನ ತವರೂರಾದ ಹುಬ್ಬಳ್ಳಿಯಲ್ಲಿ ನಡೆಯಲಿತ್ತು. ಆದರೆ ಇಂಡಿಗೋ ವಿಮಾನಗಳು ರದ್ದಾದ ಕಾರಣದಿಂದಾಗಿ ದಂಪತಿ ಭುವನೇಶ್ವರದಲ್ಲಿಯೇ ಬಾಕಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಇಂಡಿಗೋ ವಿಮಾನ ರದ್ದಾಗಿ ಪ್ರಯಾಣಿಕರ ಪರದಾಟ: ವಾರದ ವಿಶ್ರಾಂತಿ ನಿಯಮ ಹಿಂಪಡೆದ ಡಿಜಿಸಿಎ
ವಧು-ವರರು ಡಿಸೆಂಬರ್ 2ರಂದು ಭುವನೇಶ್ವರದಿಂದ ಬೆಂಗಳೂರಿಗೆ ಮತ್ತು ನಂತರ ಹುಬ್ಬಳ್ಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮರುದಿನ ಮುಂಜಾನೆಯವರೆಗೆ ವಿಮಾನಗಳು ಪದೇ ಪದೇ ವಿಳಂಬವಾಗಿದ್ದು, ಡಿಸೆಂಬರ್ 3ರಂದು ರದ್ದಾಗಿದೆ. ಇದರಿಂದಾಗಿ ಹುಬ್ಬಳ್ಳಿಗೆ ಬರಲಾಗದ ದಂಪತಿ ವರ್ಚುವಲ್ ಆಗಿ ಕಾರ್ಯಕ್ರಮವನ್ನು ಹಾಜರಾಗಿದ್ದಾರೆ. ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮೂಲಕ ಪ್ರಯಾಣಿಸುತ್ತಿದ್ದ ಹಲವು ಸಂಬಂಧಿಕರು ಕೂಡಾ ಔತಣಕೂಟಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ.
ಇನ್ನು ಅತಿಥಿಗಳು ಈಗಾಗಲೇ ಜಮಾಯಿಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ, ವಧುವಿನ ಪೋಷಕರು ದಂಪತಿಗಳಿಗೆ ಕಾಯ್ದಿರಿಸಿದ ಆಸನಗಳಲ್ಲಿ ಕುಳಿತು ನಡೆಯಬೇಕಾದ ಆಚರಣೆಗಳನ್ನು ಮಾಡಿದರು. ವಧು-ವರರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಂದವರಿಂದ ಆಶೀರ್ವಾದ ಪಡೆದರು. ಅದಕ್ಕಾಗಿ ಸ್ಕ್ರೀನಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು! ಸದ್ಯ ಈ ವಿಡಿಯೋ ಆನ್‌ಲೈನ್ ಮೂಲಕ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಧುವಿನ ತಾಯಿ, “ನಾವು ಬುಧವಾರ ಮುಂಜಾನೆಯವರೆಗೂ ವಧು-ವರ ಹುಬ್ಬಳ್ಳಿಗೆ ತಲುಪುವ ನಿರೀಕ್ಷೆಯಲ್ಲಿದ್ದೆವು. ಆದರೆ, ವಿಮಾನ ರದ್ದಾದ ಕಾರಣ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ ನಾವು ಆರತಕ್ಷತೆಗೆ ಎಲ್ಲಾ ತಯಾರಿ ಮಾಡಿದ್ದೆವು. ನೆಂಟರೂ ಬಂದಿದ್ದರು. ಹಾಗಿರುವಾಗ ಕಾರ್ಯಕ್ರಮವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಸಾಧ್ಯವಾಗಿಲ್ಲ. ಆನ್‌ಲೈನ್ ಮೂಲಕವೇ ಎಲ್ಲ ರೀತಿ-ರಿವಾಜುಗಳನ್ನು ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ.
ಇಂಡಿಗೋ ವಿಮಾನಗಳು ರದ್ದು
ಕಳೆದ ಕೆಲವು ದಿನಗಳಿಂದ ಹಲವು ಇಂಡಿಗೋ ವಿಮಾನಗಳು ರದ್ದಾಗುತ್ತಿದೆ. ವಾರದ ರಜೆ ನೀಡುವ ನಿಯಮ ಅನುಸರಿಸಬೇಕಾದ ಕಾರಣದಿಂದಾಗಿ ಹಲವು ಪೈಲಟ್‌ಗಳು ರಜೆಯಲ್ಲಿದ್ದಾರೆ. ಅದರಿಂದಾಗಿ ವಿಮಾನ ರದ್ದು ಮಾಡಲಾಗಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ಹಾಗೆಯೇ ನಿಯಮವನ್ನು ಸಡಿಲಿಕೆ ಮಾಡುವಂತೆಯೂ ಮನವಿ ಮಾಡಿದೆ. ಇದೀಗ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ನಿಯಮವನ್ನು ವಾಪಸ್ ಪಡೆದುಕೊಂಡಿದೆ.
ಸಿಬ್ಬಂದಿ ಕೊರತೆಯಿಂದಾಗಿ ದೆಹಲಿ, ಜೈಪುರ, ಭೋಪಾಲ್, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಇತರ ನಗರಗಳಲ್ಲಿನ ಇಂಡಿಗೋ ವಿಮಾನಗಳು ರದ್ದಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಇವೆಲ್ಲವುದರ ನಡುವೆ ಹಲವು ಮಂದಿ ನಿಗದಿಯಾಗಿದ್ದ ಕಾರ್ಯಕ್ರಮಗಳಿಗೆ ಹಾಜರಾಗಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭದಿಂದ ಹಲವು ಕಾರ್ಯಕ್ರಮಗಳನ್ನು, ಸಭೆಗಳನ್ನು ಆನ್‌ಲೈನ್ ಮೂಲಕ ನಡೆಸುವುದು ಹೆಚ್ಚಾಗುತ್ತಿದೆ. ದೇವಾಲಯಗಳ ಪೂಜೆಯನ್ನು ನೇರ ಪ್ರಸಾರ ಮಾಡುವುದು, ವರ್ಚುವಲ್ ದರ್ಶನಕ್ಕೆ ಅವಕಾಶ ನೀಡುವುದು ಮೊದಲಾದವುಗಳು ಈ ಹಿಂದೆ ಸುದ್ದಿಯಾಗಿದೆ. ಇ-ಪೂಜೆ, ವರ್ಚುವಲ್ ಪೂಜೆಗಳ ಟ್ರೆಂಡ್ ಕೂಡಾ ಇದೆ. ಇವೆಲ್ಲವುದರ ನಡುವೆ ಈಗ ಇಂಡಿಗೋ ಸಮಸ್ಯೆಯಿಂದಾಗಿ ಆರತಕ್ಷತೆಯನ್ನೂ ಆನ್‌ಲೈನ್ ಮೂಲಕ ನಡೆಸಲಾಗಿದೆ. ಮುಂದೊಂದು ದಿನ ವಿವಾಹವೂ ಆನ್‌ಲೈನ್‌ನಲ್ಲಿ ನಡೆದರೆ ಆಶ್ಚರ್ಯವಿಲ್ಲ.





