ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ನವೆಂಬರ್ 11ರಂದು ತೆಲಂಗಾಣದಲ್ಲಿ ಉಪಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಅಜರುದ್ದೀನ್ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಕುತೂಹಲ ಕೆರಳಿಸಿದೆ.
ಅಜರುದ್ದೀನ್ ಅವರು ತೆಲಂಗಾಣ ಸರ್ಕಾರಗಳಲ್ಲಿ ಸಚಿವ ಸಂಪುಟ ಸೇರಿದ ಮೂರನೇ ಮುಸ್ಲಿಂ ನಾಯಕರಾಗಿದ್ದಾರೆ. 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ಬಳಿಕ, ಮೂರು ಸರ್ಕಾರಗಳು ತೆಲಂಗಾಣದಲ್ಲಿ ಆಡಳಿತ ನಡೆಸಿವೆ. ಈ ಮೂರು ಸರ್ಕಾರಗಳಲ್ಲಿಯೂ ಒಬ್ಬರು ಅಥವಾ ಇಬ್ಬರು ಮುಸ್ಲಿಂ ನಾಯಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಬಿಆರ್‌ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ನೇತೃತ್ವದ ಮೊದಲ (2014-19) ಸರ್ಕಾರದಲ್ಲಿ ತಲಸಾನಿ ಸೈದಾ ರಶೀದ್ ಅಹ್ಮದ್ ಅವರು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ ಸಚಿವರಾಗಿದ್ದರು. ನಂತರ, 2019ರಲ್ಲಿ ರಚನೆಯಾದ ಕೆಸಿಆರ್ ನೇತೃತ್ವದ ಎರಡನೇ ಸರ್ಕಾರದಲ್ಲಿಯೂ ತಲಸಾನಿ ಅವರು ಸಚಿವರಾಗಿ ಮುಂದುವರೆದಿದ್ದರು. ಜೊತೆಗೆ, ಸಯ್ಯದ್ ಅಮೀನ್ ಉಲ್ ಹಸನ್ ಜುನೈದಿ ಅವರೂ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಅವರು ಅರಣ್ಯ, ಪರಿಸರ, ವನ್ಯಜೀವಿ ಖಾತೆ (MoS) ನಿರ್ವಹಿಸಿದ್ದರು. ಇದೀಗ, ಅಜರುದ್ದೀನ್ ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
ನವೆಂಬರ್ 11ರಂದು ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈ ವರ್ಷದ ಜೂನ್‌ನಲ್ಲಿ ಬಿಆರ್‌ಎಸ್ ಶಾಸಕ ಮಂಗತಿ ಗೋಪಿನಾಥ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅವರ ಮರಣದಿಂದ ತೆರವಾಗಿರುವ ಜುಬಿಲಿ ಹಿಲ್ಸ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ಉಪಚುನಾವಣೆ ಘೋಷಿಸಲಾಗಿದೆ.
ಮುಸ್ಲಿಂ ಬಾಹುಳ್ಯವುಳ್ಳ ಜುಬಿಲಿ ಹಿಲ್ಸ್ ಕ್ಷೇತ್ರವನ್ನು ಗೆಲ್ಲುವುದು ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಚಾರವಾಗಿದೆ. ನಿರ್ಣಾಯಕ ಮತದಾರರಾಗಿರುವ ಮುಸ್ಲಿಮರ ವಿಶ್ವಾಸವನ್ನು ಉಳಿಸಿಕೊಳ್ಳುವ ಸಲುವಾಗಿ ಅಜರುದ್ದೀನ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಜರುದ್ದೀನ್ ಅವರು 2023ರ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಗೋಪಿನಾಥ್ ವಿರುದ್ಧ ಸೋಲುಂಡಿದ್ದರು. ಇತ್ತೀಚೆಗೆ ತೆಲಂಗಾಣ ಸರ್ಕಾರವು ಅಜರುದ್ದೀನ್ ಅವರನ್ನು ರಾಜ್ಯಪಾಲರ ಕೋಟಾದಡಿಯಲ್ಲಿ ವಿಧಾನ ಪರಿಷತ್ತಿನ (MLC) ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಆದರೆ, ಅವರ ನಾಮನಿರ್ದೇಶನವನ್ನು ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಇನ್ನೂ ಅನುಮೋದಿಸಿಲ್ಲ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಅಂದಹಾಗೆ, 62 ವರ್ಷದ ಅಜರುದ್ದೀನ್ ಅವರು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರೂ ಆಗಿದ್ದರು. ಅವರು, 1990ರ ದಶಕದಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಅವರ ನೇತೃತ್ವದಲ್ಲಿ ತಂಡವು 1990–91 ಮತ್ತು 1995ರ ಏಷ್ಯಾ ಕಪ್ ಗೆದ್ದುಕೊಂಡಿತ್ತು. ಅಲ್ಲದೆ, 1996ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಂಡವನ್ನು ಸೆಮಿಫೈನಲ್‌ವರೆಗೆ ಕೊಂಡೊಯ್ದಿದ್ದರು. ಜಾಗತಿಕವಾಗಿ ಅತ್ಯುತ್ತಮ ‘ಏಕದಿನ’ (ODI) ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂಬ ಖ್ಯಾತಿಯನ್ನೂ ಪಡೆದಿದ್ದರು. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ, 99 ಟೆಸ್ಟ್ ಪಂದ್ಯಗಳು ಮತ್ತು 334 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಅಜರುದ್ದೀನ್ ಅವರು 2009ರಲ್ಲಿ ಕಾಂಗ್ರೆಸ್ ಸೇರಿದರು. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮೊರಾದಾಬಾದ್ ಕ್ಷೇತ್ರದಿಂದ ಗೆದ್ದು ಸಂಸದರಾಗಿ, ಸಂಸತ್ ಪ್ರವೇಶಿಸಿದ್ದರು.




