16 ವರ್ಷದ ಬಾಲಕಿಯೊಬ್ಬಳು ಪರೀಕ್ಷೆಗೆ ಹಾಜರಾದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿ ನಡೆದಿದೆ.
ಸೋಮವಾರ ಬಾಲಕಿ ಪರೀಕ್ಷೆಗೆ ಹಾಜರಾಗಿದ್ದಳು. ಅದಾದ ಬಳಿಕ ತೀವ್ರ ಹೊಟ್ಟೆ ನೋವಾಗುತ್ತಿರುವುದಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದಳು. ಆಕೆಯ ತಾಯಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಸ್ಕ್ಯಾನ್ ಮಾಡಲು ಸಲಹೆ ನೀಡಿದ್ದರು. ಹಾಗಾಗಿ ಸಮೀಪದ ಸ್ಕ್ಯಾನಿಂಗ್ ಕೇಂದ್ರ ಒಂದಕ್ಕೆ ಭೇಟಿ ನೀಡಿದ್ದಾಳೆ. ಸ್ಕ್ಯಾನಿಂಗ್ ಕೇಂದ್ರದಲ್ಲಿ ಕಾಯುತ್ತಿದ್ದ ಬಾಲಕಿ ಶೌಚಾಲಯಕ್ಕೆ ಹೋಗಿದ್ದು, ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ!
ಸಿಬ್ಬಂದಿ ನಂತರ ಶೌಚಾಲಯದೊಳಗೆ ನವಜಾತ ಶಿಶುವನ್ನು ನೋಡಿ ನಮಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿ ಮತ್ತು ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. “ತಾಯಿ ಮತ್ತು ಮಗು ಇಬ್ಬರೂ ಪ್ರಸ್ತುತ ಸುರಕ್ಷಿತರಾಗಿದ್ದಾರೆ. ವೈದ್ಯಕೀಯ ಆರೈಕೆಯಲ್ಲಿದ್ದಾರೆ” ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಬಾಲಕಿ ಮತ್ತು ಆಕೆಯ ತಾಯಿ ಶಿಶುವನ್ನು ಶೌಚಾಲಯದ ಕಸದ ಬುಟ್ಟಿಯಲ್ಲಿ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ. ಬಳಿಕ ಸಿಬ್ಬಂದಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಸದ್ಯ ಬಾಲಕಿ ಗರ್ಭಿಣಿಯಾಗಿರುವುದು ಆಕೆಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲವೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ತಿಂಗಳು ಇದೇ ರೀತಿಯ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿತ್ತು. ಪರೀಕ್ಷಾ ಕೇಂದ್ರವೊಂದರಲ್ಲಿ ಬೋರ್ಡ್ ಪರೀಕ್ಷೆಯ ಸಮಯದಲ್ಲಿ 10ನೇ ತರಗತಿಯ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. 17 ವರ್ಷದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಆರಂಭಿಸಿದ ಎರಡು ಗಂಟೆಗಳ ನಂತರ ತೀವ್ರ ಹೊಟ್ಟೆ ನೋವೆಂದು ಹೇಳಿ ಶೌಚಾಲಯಕ್ಕೆ ಹೋಗಿದ್ದಳು. ಬಹಳ ಹೊತ್ತಾದರೂ ಆಕೆ ತರಗತಿಗೆ ಬಾರದ್ದು ಕಂಡು ಮೇಲ್ವಿಚಾರಕರು ಶೌಚಾಲಯವನ್ನು ಪರಿಶೀಲಿಸಿದಾಗ ಬಾಲಕಿ ಮಗುವಿಗೆ ಜನ್ಮ ನೀಡಿರುವುದು ಕಂಡುಬಂದಿತ್ತು.
ತಕ್ಷಣವೇ ಶಾಲೆಯ ಮಹಿಳಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಬಾಲಕಿ ಮತ್ತು ಶಿಶುವನ್ನು ಆಂಬ್ಯುಲೆನ್ಸ್‌ನಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ 34 ವಾರಗಳು ಅಂದರೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಶಿಶು ಅಕಾಲಿಕವಾಗಿ ಜನಿಸಿತ್ತು. ಇನ್ನು ಆಶ್ಚರ್ಯವೆಂದರೆ ವಿದ್ಯಾರ್ಥಿನಿಯು ಗರ್ಭಿಣಿಯಾಗಿರುವ ವಿಷಯ ಆಕೆಯ ಪೋಷಕರಿಗಾಗಲಿ ಅಥವಾ ಶಾಲಾ ಮಂಡಳಿಗಾಗಲಿ ತಿಳಿದಿರಲಿಲ್ಲ.
ಇದನ್ನು ಓದಿದ್ದೀರಾ? ಉಡುಪಿ | ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಪ್ರಕರಣ – ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ WIM ಆಗ್ರಹ
ನೃತ್ಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ, ಇದರಿಂದ ಗರ್ಭಿಣಿಯಾಗಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಳು. ಆತ ಬೆದರಿಕೆ ಹಾಕಿದ್ದರಿಂದ ತಾನು ಈವರೆಗೆ ಯಾರಿಗೂ ಈ ವಿಚಾರ ತಿಳಿಸಿರಲಿಲ್ಲ ಎಂದು ಹೇಳಿದ್ದಳು. ಸದ್ಯ ಈ ಪ್ರಕರಣದ ತನಿಖೆ ಮುಂದುವರೆದಿದೆ.
2025ರ ಆಗಸ್ಟ್‌ನಲ್ಲಿ ಶಿವಮೊಗ್ಗದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ಆಕೆ ಗರ್ಭಿಣಿ ಎಂಬುದು ಹೆರಿಗೆಯಾಗುವವರೆಗೂ ಪೋಷಕರಿಗೆ ತಿಳಿದಿರಲಿಲ್ಲ. ಅದೇ ತಿಂಗಳು ಯಾದಗಿರಿಯ ವಸತಿ ಶಾಲೆಯ 9ನೇ ತರಗತಿಯ ಬಾಲಕಿಯೊಬ್ಬಳು ಶಾಲಾ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಳು.





