ದೇಶದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಹರಿಯಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು ದಟ್ಟವಾದ ಮಂಜು ಆವರಿಸಿದೆ. ಹಲವು ಸ್ಥಳಗಳಲ್ಲಿ ದಾರಿಯೇ ಕಾಣದಂತಾಗಿದೆ. ಕೆಲವು ರಾಜ್ಯಗಳಲ್ಲಿ ಶಾಲೆಗಳಲ್ಲಿ ರಜೆಯನ್ನೂ ಘೋಷಿಸಲಾಗಿದೆ. ಮುಖ್ಯವಾಗಿ ಮಂಜು ಜನಜೀವನ ಮತ್ತು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅಂದರೆ 2.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3 ಡಿಗ್ರಿಯಷ್ಟು ಕಡಿಮೆಯಾಗಿದೆ. ಇನ್ನುಳಿದಂತೆ ನರ್ನಾಲ್ 4°C, ಭಿವಾನಿ 5.5°C, ರೋಹ್ಟಕ್ 7.2°C, ಚಂಡೀಗಢ 5.6°C ಮತ್ತು ಅಂಬಾಲಾ 8°C ಉಷ್ಣಾಂಶ ದಾಖಲಾಗಿದೆ. ಈ ಪ್ರದೇಶಗಳಲ್ಲಿ ಗೋಚರತೆಯ ಮಟ್ಟ (Visibility) 20 ರಿಂದ 50 ಮೀಟರ್‌ಗಿಂತಲೂ ಕಡಿಮೆಯಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯಲ್ಲ ದೇಶದ ‘ಟಾಪ್ 5’ ಅತಿ ಕಲುಷಿತ ನಗರಗಳಿವು!
ಭಾರತೀಯ ಹವಾಮಾನ ಇಲಾಖೆ (IMD) ಹರಿಯಾಣದ ಹಲವು ಭಾಗಗಳಿಗೆ ಡಿಸೆಂಬರ್ 31ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದಟ್ಟವಾದ ಮಂಜು ಹಾಗೆಯೇ ಇರುತ್ತದೆ ಮತ್ತು ಚಳಿ ಇನ್ನಷ್ಟೂ ಅಧಿಕವಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಗೋಚರತೆಯ ಕೊರತೆಯಿಂದಾಗಿ ರೈಲು ಮತ್ತು ವಿಮಾನ ಸಂಚಾರವೂ ವಿಳಂಬವಾಗಿದೆ.
ಇನ್ನು ಹರಿಯಾಣದ ಶಿಕ್ಷಣ ಇಲಾಖೆಯು ಈ ಹಿಂದೆ ಕೆಲವು ಕಡೆಗಳಲ್ಲಿ ಶಾಲಾ ಸಮಯವನ್ನು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 3:30ಕ್ಕೆ ಬದಲಾಯಿಸಿತ್ತು. ಸಾಮಾನ್ಯವಾಗಿ ಬೆಳಿಗ್ಗೆ 7:55 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಮಧ್ಯಾಹ್ನ 12:40 ರಿಂದ ಸಂಜೆ 5:15 ರವರೆಗೆ ಎರಡು ಪಾಳಿಯಲ್ಲಿ ಶಾಲೆ ನಡೆಯುತ್ತಿತ್ತು. ಆದರೆ ಚಳಿಗಾಲದ ಕಾರಣ ಶಾಲಾ ಅವಧಿ ಬದಲಾಯಿಸಲಾಗಿತ್ತು. ಅದಾದ ಬಳಿಕ ಇದೀಗ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ 2026ರ ಜನವರಿ 1ರಿಂದ 15ರವರೆಗೆ ಅಧಿಕೃತ ಚಳಿಗಾಲದ ರಜೆ ಘೋಷಿಸಲಾಗಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ತೀವ್ರ ಕುಸಿತ ಉಷ್ಣಾಂಶ
ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಉಷ್ಣಾಂಶ ತೀವ್ರ ಕುಸಿದಿದೆ. ಡಿಸೆಂಬರ್ 30ರವರೆಗೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಹಲವು ಭಾಗಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ತಾಪಮಾನವು 2.5°C ಗೆ ಕುಸಿದಿದ್ದು, ಇದು ರಾಜ್ಯದ ಅತ್ಯಂತ ತಂಪಾದ ನಗರ ಎನಿಸಿಕೊಂಡಿದೆ. ಇನ್ನುಳಿದಂತೆ 30 ನಗರಗಳಲ್ಲಿ ಉಷ್ಣಾಂಶವು 10°C ಗಿಂತ ಕಡಿಮೆಯಾಗಿದೆ. ಗ್ವಾಲಿಯರ್‌ನಂತಹ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 6.7°C ದಾಖಲಾಗಿದೆ. ತೀವ್ರ ಚಳಿಯ ಕಾರಣ ಗ್ವಾಲಿಯರ್ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಡಿಸೆಂಬರ್ 30ರಂದು ರಜೆ ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ಮುಂದಿನ ಒಂದು ವಾರ ಹಗಲು, ರಾತ್ರಿ ಸಾಧಾರಣ ಮಳೆ ಸಾಧ್ಯತೆ
ಛತ್ತೀಸ್‌ಗಢದಲ್ಲಿ ಕನಿಷ್ಠ ತಾಪಮಾನವು 9°C ಆಸುಪಾಸಿನಲ್ಲಿದೆ. ತೀವ್ರ ಚಳಿಯಿರುವ ಕಾರಣ ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಮುಂಜಾನೆ ಮತ್ತು ರಾತ್ರಿ ವೇಳೆ ಮನೆಯಲ್ಲೇ ಇರುವಂತೆ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯು ತಿಳಿಸಿದೆ.
ರಾಜಸ್ಥಾನದಲ್ಲಿ ಸತತ ಮೂರನೇ ದಿನವೂ ಶೀತಗಾಳಿ ಮುಂದುವರೆದಿದ್ದು, ಶಿಕಾರ್ ಜಿಲ್ಲೆಯ ಫತೇಪುರ್ 3.5°C ಕನಿಷ್ಠ ತಾಪಮಾನ ದಾಖಲಾಗಿದೆ. ಜೈಪುರದಲ್ಲಿ 8.5°C ನಿಂದ 9.3°C ರವರೆಗೆ ದಾಖಲಾಗಿದೆ. ದೌಸಾ 4.5°C, ಅಲ್ವಾರ್ 4.8°C, ಸಿಕಾರ್ 5.0°C, ಮೌಂಟ್ ಅಬು ಮತ್ತು ವನಸ್ಥಲಿಯಲ್ಲಿ ತಲಾ 5.1°C ಉಷ್ಣಾಂಶ ದಾಖಲಾಗಿದೆ.
ಇನ್ನು ಪಶ್ಚಿಮದ ಮಾರುತಗಳ (Western Disturbance) ಪ್ರಭಾವದಿಂದಾಗಿ ಡಿಸೆಂಬರ್ 31 ಮತ್ತು ಜನವರಿ 1ರಂದು ಬಿಕಾನೇರ್, ಚುರು, ಸಿಕಾರ್ ಮತ್ತು ಜುಂಜುನು ಸೇರಿದಂತೆ ರಾಜಸ್ಥಾನದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಹೊಸ ವರ್ಷದ ಆರಂಭದಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.





