ಟ್ರಸ್ಟ್ ಡೀಡ್‌ನಲ್ಲಿ ಉಲ್ಲೇಖಿಸಿರುವಂತೆ, PM CARES ಟ್ರಸ್ಟ್‌ನ ಆಡಳಿತ ಮಂಡಳಿಯ ಅಧ್ಯಕ್ಷರು ಭಾರತದ ಪ್ರಧಾನಮಂತ್ರಿಯೇ ಆಗಿರುತ್ತಾರೆ. ಅಲ್ಲದೆ, ಇನ್ನೂ ಮೂವರು ಟ್ರಸ್ಟಿಗಳನ್ನು ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವೂ ಪ್ರಧಾನಮಂತ್ರಿಯವರಿಗಿರುತ್ತದೆ. ಈ ಟ್ರಸ್ಟ್‌ನ ಕಡ್ಡಾಯ ಟ್ರಸ್ಟಿಗಳಲ್ಲಿ ರಕ್ಷಣಾ ಸಚಿವರು, ಹಣಕಾಸು ಸಚಿವರು ಮೊದಲಾದ ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳನ್ನು ಹೊಂದಿರುವವರು ಸೇರಿದ್ದಾರೆ. ದಿ ವೈರ್‌ನಲ್ಲಿ ಪ್ರಕಟವಾದ ಪಿ ರಮಣ್ ಅವರ ವಿಶ್ಲೇಷಣೆಯನ್ನು ಸಂಪಾದಕರ ಅನುಮತಿಯೊಂದಿಗೆ ʼಈ ದಿನʼದಲ್ಲಿ ಪ್ರಕಟಿಸುತ್ತಿದ್ದೇವೆ.
2020ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಕೀಯ ಸಭೆಯೊಂದರಲ್ಲಿ ʼಹೊಸ ವಿಶೇಷ ಪರಿಹಾರ ನಿಧಿ ಸ್ಥಾಪಿಸಲಾಗುತ್ತಿದೆʼ ಎಂದು ಘೋಷಿಸಿದಾಗ ಅನೇಕರಿಗೆ ಆಶ್ಚರ್ಯವಾಗಿತ್ತು. ಕಾರಣ ಇಷ್ಟೇ, 1948ರಿಂದಲೇ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಅಸ್ತಿತ್ವದಲ್ಲಿದ್ಯಾಗ್ಯೂ ಹೊಸತೊಂದು ಬಂದದ್ದು ಏಕೆ ಎಂದು.
ಕೋವಿಡ್-19 ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ವಿಫಲವಾದುದನ್ನು ಮುಚ್ಚಿಹಾಕಲು ಈ ಯತ್ನವೇ? (ಮಹಾಮಾರಿ ಸಮಯದಲ್ಲಿ ದೀಪ ಹಚ್ಚುವುದು, ಮಂತ್ರ ಜಪಿಸುವಂತಹ ಕಾರ್ಯಕ್ರಮಗಳಿಗೆ ಅಮೂಲ್ಯ ಸಮಯ ವ್ಯರ್ಥವಾಯಿತೆಂದು ಕೆಲ ಮಾಧ್ಯಮಗಳು ಟೀಕಿಸಿವೆ) ಅಥವಾ ಪ್ರಧಾನಮಂತ್ರಿಯವರ ವೈಯಕ್ತಿಕ ಬ್ರ್ಯಾಂಡನ್ನು ಮತ್ತಷ್ಟು ಬಲಪಡಿಸಲು ಪ್ರತ್ಯೇಕ ವೇದಿಕೆ ಸೃಷ್ಟಿಸುವ ಉದ್ದೇಶವೇ? ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳೆದ್ದವು.
ಕಾರಣ ಏನೇ ಇರಲಿ, 2020ರ ಮಾರ್ಚ್ 27ರಂದು ಖಾಸಗಿ ಟ್ರಸ್ಟ್ ಆಗಿ ನೋಂದಾಯಿಸಲ್ಪಟ್ಟ PM CARES ಆರಂಭದಿಂದಲೇ ವಿವಾದಗಳನ್ನು ಸೃಷ್ಟಿಸಿತು. ಇದರ ಕಾರ್ಯವಿಧಾನ ಸದಾ ಗೂಢತೆಯಲ್ಲೇ ಇತ್ತು. ಮಾಧ್ಯಮಗಳು ಪ್ರತೀಕಾರದ ಭಯದಿಂದ ಹೆಚ್ಚಿನ ವಿಚಾರಗಳನ್ನು ಹೊರ ತೆಗೆಯುವಲ್ಲಿ ಎಚ್ಚರಿಕೆಯಿಂದ ವರ್ತಿಸಿದವು. ಹೀಗಾಗಿ ನಿಧಿಯ ಬಗೆಗಿನ ಮಾಹಿತಿ ತುಣುಕು-ತುಣುಕಾಗಿ ಮಾತ್ರ ಹೊರಬಂತು.
ಅಮೆರಿಕದ ವಾಷಿಂಗ್ಟನ್‌ನ International Centre for Not-for-Profit Law (ICNL) ಸಂಸ್ಥೆಯ ಅಧ್ಯಯನದ ವರದಿಗಳು ಹೆಚ್ಚು ಗಮನ ಸೆಳೆದಿವೆ. ಕೋವಿಡ್ ಮಹಾಮಾರಿಯ ಸಮಯದಲ್ಲಿ ಏಷ್ಯಾದ 6 ದೇಶಗಳಲ್ಲಿ ಪರಿಹಾರ ನಿಧಿಗಳನ್ನು ಹೇಗೆ ಸಂಗ್ರಹಿಸಲಾಯಿತು ಹಾಗೂ ಹೇಗೆ ಬಳಸಲಾಯಿತು ಎಂಬುದನ್ನು ಈ ಅಧ್ಯಯನ ವಿಶ್ಲೇಷಿಸಿದೆ. ಆ ಪೈಕಿ ಭಾರತದ PM CARES ಕುರಿತು 6 ಪುಟಗಳ ವಿಶೇಷ ಅಧ್ಯಾಯವಿದೆ.
ಟ್ರಸ್ಟ್ ಡೀಡ್‌ನಲ್ಲಿ ಉಲ್ಲೇಖಿಸಿರುವಂತೆ, PM CARES ಟ್ರಸ್ಟ್‌ನ ಆಡಳಿತ ಮಂಡಳಿಯ ಅಧ್ಯಕ್ಷರು ಭಾರತದ ಪ್ರಧಾನಮಂತ್ರಿಯೇ ಆಗಿರುತ್ತಾರೆ. ಅಲ್ಲದೆ, ಇನ್ನೂ ಮೂವರು ಟ್ರಸ್ಟಿಗಳನ್ನು ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವೂ ಪ್ರಧಾನಮಂತ್ರಿಯವರಿಗಿರುತ್ತದೆ. ಈ ಟ್ರಸ್ಟ್‌ನ ಕಡ್ಡಾಯ ಟ್ರಸ್ಟಿಗಳಲ್ಲಿ ರಕ್ಷಣಾ ಸಚಿವರು, ಹಣಕಾಸು ಸಚಿವರು ಮೊದಲಾದ ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳನ್ನು ಹೊಂದಿರುವವರು ಸೇರಿದ್ದಾರೆ.
ಇದರ ರಚನೆ ನೋಡಿದರೆ, PM CARES ಸರ್ಕಾರದ ಅವಿಭಾಜ್ಯ ಅಂಗವೇ ಭಾವನೆ ಮೂಡುತ್ತದೆ. ಆದರೆ, ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ಹಿಂಜರಿಯುತ್ತಿರುವುದು (ಇತ್ತೀಚೆಗೆ ಕೆಲವು ಅಧಿಕೃತ ಆಡಿಟ್ ವರದಿಗಳು ಮಾತ್ರ ಲಭ್ಯ) ಇದರ ಸ್ಥಾನಮಾನ ಹಾಗೂ ಕಾನೂನಾತ್ಮಕ ಪಾತ್ರದ ಕುರಿತು ಗೊಂದಲವನ್ನುಂಟು ಮಾಡುತ್ತದೆ. ಇದಲ್ಲದೆ, ಸತ್ಯಮೇವ ಜಯತೆ, ತ್ರಿವರ್ಣ ಧ್ವಜ, ಅಶೋಕ ಸಿಂಹಸ್ತಂಭ ಮೊದಲಾದ ರಾಷ್ಟ್ರೀಯ ಚಿಹ್ನೆಗಳನ್ನು ವ್ಯಾಪಕವಾಗಿ ಬಳಸುವ ಮೂಲಕವೂ PM CARES ತನ್ನನ್ನು ಒಂದು ಅಧಿಕೃತ ಸರ್ಕಾರಿ ನಿಧಿಯಂತೆ ಪ್ರದರ್ಶಿಸಿಕೊಳ್ಳುತ್ತದೆ. ಜೊತೆಗೆ, ಟ್ರಸ್ಟ್‌ಗೆ ಲಭ್ಯವಾಗಿರುವ ಅನೇಕ ಸೌಲಭ್ಯಗಳು ಮತ್ತು ವಿಶೇಷಾಧಿಕಾರಗಳು ಇದೊಂದು ಸರ್ಕಾರಿ ಸ್ವಾಮ್ಯದ ನಿಧಿಯೇ ಎನ್ನುವ ಭ್ರಮೆ ಉಂಟು ಮಾಡುತ್ತವೆ.
ICNL ವರದಿ ಪ್ರಕಾರ, PM CARES ನಿಧಿ ಸ್ಥಾಪನೆಯಾದ ಕ್ಷಣದಿಂದಲೇ ಅನೇಕ ಹಣಕಾಸು ನಿಯಂತ್ರಣಗಳಿಂದ ವಿನಾಯಿತಿ ಪಡೆದುಕೊಂಡಿದೆ ಎಂಬ ಅಂಶಗಳು ಸದ್ಯ ಗಮನಾರ್ಹವಾಗಿವೆ. ಸಾಮಾನ್ಯವಾಗಿ ಸಾರ್ವಜನಿಕ ನಿಧಿಗಳಿಗೆ ಅನ್ವಯಿಸುವ ನಿಯಮಗಳನ್ನೇ ಇಲ್ಲಿ ವಿಶೇಷವಾಗಿ ಸಡಿಲಿಸಲಾಗಿದೆ ಎಂದು ವರದಿ ಉಲ್ಲೇಖಿಸುತ್ತದೆ. ಆದಾಯ ತೆರಿಗೆ ಕಾಯ್ದೆ, 1961ರಡಿ ನೀಡಲಾಗುವ ಸಾರ್ವಜನಿಕ ನಿಧಿಗಳಂತೆಯೇ ತೆರಿಗೆ ಸಡಿಲಿಕೆ ಇದಕ್ಕೂ ಇದೆ. ಹಾಗೆಯೇ Foreign Contribution Regulation Act (FCRA) ಅಡಿಯಲ್ಲಿ ಇರುವ ನಿಯಮಗಳಿಂದಲೂ ವಿನಾಯಿತಿ ಸಿಕ್ಕಿರುವುದರಿಂದ ವಿದೇಶಿ ಮೂಲಗಳಿಂದ ಯಾವುದೇ ಮಿತಿಯಿಲ್ಲದೆ ದೇಣಿಗೆಗಳನ್ನು ಸ್ವೀಕರಿಸುವ ಅವಕಾಶ ಈ ನಿಧಿಗೆ ಲಭಿಸಿದೆ ಎಂದೂ ವರದಿ ಸ್ಪಷ್ಟಪಡಿಸುತ್ತದೆ.
ಇತರ ಅನರ್ಹ ಲಾಭರಹಿತ ಸಂಸ್ಥೆಗಳಿಗಿಂತ ಭಿನ್ನವಾಗಿ, PM CARES ನಿಧಿಯು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಸಂಗ್ರಹವಾಗುವ ಹಣವನ್ನೂ ಪಡೆಯುತ್ತದೆ. ಸಾಮಾನ್ಯವಾಗಿ CSR ನಿಧಿಗಳನ್ನು ಸ್ವೀಕರಿಸುವ ಸಂಸ್ಥೆಗಳು, ಕಂಪನಿಗಳ ಕಾಯ್ದೆಯ ಪ್ರಕಾರ, ನಿಗದಿತ ಹಾಗೂ ನಿರ್ದಿಷ್ಟ ಚಟುವಟಿಕೆಗಳಿಗೆ ಮಾತ್ರ ಆ ಹಣವನ್ನು ಬಳಸಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿರುತ್ತವೆ. ನಿಗದಿತ ಉದ್ದೇಶಗಳಿಗೆ ಹಣ ಬಳಕೆಯಾಗದೆ ಉಳಿದಲ್ಲಿ, ಆ ಮೊತ್ತವನ್ನು ದೇಣಿಗೆ ನೀಡಿದ ಕಂಪನಿಗಳಿಗೆ ಹಿಂದಿರುಗಿಸಬೇಕು ಅಥವಾ ಸರ್ಕಾರ ನಿರ್ವಹಿಸುವ ಅಧಿಕೃತ ನಿಧಿಗಳಿಗೆ ವರ್ಗಾಯಿಸಬೇಕು. ಆದರೆ PM CARES ವಿಷಯದಲ್ಲಿ ಹಾಗಾಗಿಲ್ಲ. ಸರ್ಕಾರವೇ ನೇರವಾಗಿ ಕಂಪನಿಗಳಿಗೆ CSR ಭಾಗವಾಗಿ PM CARES ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದೆ. ಇದು ಈ ನಿಧಿಗೆ ಸರ್ಕಾರದ ಅಧಿಕೃತ ಬೆಂಬಲವಿದೆ ಎಂಬ ಸಂದೇಶವನ್ನು ನೀಡುವುದರ ಜೊತೆಗೆ, ಇತರ ಲಾಭರಹಿತ ಸಂಸ್ಥೆಗಳಿಗಿಂತ PM CARESಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಸರ್ಕಾರ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR)ಗೆ ಬರುತ್ತಿದ್ದ ಹಣವನ್ನು PM CARES ಕಡೆಗೆ ತಿರುಗಿಸಿದ ಪರಿಣಾಮ, ಇತರ ಸ್ವಯಂಸೇವಾ ಹಾಗೂ ಧಾರ್ಮಿಕ ಸಂಸ್ಥೆಗಳ ಪಾಲಿಗೆ ಬರುತ್ತಿದ್ದ ದೇಣಿಗೆಗಳು ಗಣನೀಯವಾಗಿ ಕಡಿಮೆಯಾದವು. ಕೆಲವು ಸಂಸ್ಥೆಗಳು ತೀವ್ರ ಹಣಕಾಸು ಕೊರತೆಯನ್ನು ಎದುರಿಸಬೇಕಾಯಿತು, ಪರಿಣಾಮ ಕೆಲವೆಡೆ ಉದ್ಯೋಗ ಕಡಿತವೂ ಸಂಭವಿಸಿದೆ. ಈ ಅಂಶಗಳನ್ನು ನಾಗರಿಕ ಸಮಾಜದ ಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ನೀಡಿದ ಹೇಳಿಕೆಗಳ ಆಧಾರದ ಮೇಲೆ ದಾಖಲಿಸಲಾಗಿದೆ. ಮಹಾಮಾರಿ ಸಮಯದಲ್ಲಿ ಸೇವಾ ಚಟುವಟಿಕೆಗಳು ಹೆಚ್ಚಾಗಬೇಕಿದ್ದ ಸಂದರ್ಭದಲ್ಲೇ, ದಾನಗಳ ಕೊರತೆ ಸಂಸ್ಥೆಗಳ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರಿದೆ ಎಂದು ವರದಿ ವಿಶ್ಲೇಷಿಸುತ್ತದೆ.
ಇದಲ್ಲದೆ, PM CARES ಕುರಿತು ಮಾಹಿತಿ ಕೇಳುವ ಪ್ರಯತ್ನಗಳ ಮೇಲೂ ನಿರ್ಬಂಧಗಳು ವಿಧಿಸಲ್ಪಟ್ಟಿವೆ. ಇತ್ತೀಚೆಗೆ ಪ್ರಧಾನಮಂತ್ರಿ ಕಾರ್ಯಾಲಯವು ಲೋಕಸಭೆಯಲ್ಲಿ PM CARES, ಪ್ರಧಾನಮಂತ್ರಿಗಳ ಪರಿಹಾರ ನಿಧಿ ಮತ್ತು ರಾಷ್ಟ್ರೀಯ ರಕ್ಷಣಾ ನಿಧಿ ಕುರಿತು ಪ್ರಶ್ನೆಗಳನ್ನು ಸ್ವೀಕರಿಸಬಾರದು ಎಂದು ಸೂಚನೆ ನೀಡಿದೆ. ಈ ನಿಧಿಗಳು ಸಂಪೂರ್ಣವಾಗಿ ಸ್ವಯಂಪ್ರೇರಿತ ಸಾರ್ವಜನಿಕ ದೇಣಿಗೆಯಿಂದ ನಿರ್ಮಿತವಾಗಿದ್ದು, ಭಾರತದ ಸಂಯುಕ್ತ ನಿಧಿಯಿಂದ (Consolidated Fund of India) ಹಣ ಪಡೆಯುವುದಿಲ್ಲ, ಹಾಗಾಗಿ ಸಂಸತ್ತಿನ ಮೇಲ್ವಿಚಾರಣೆ ಅಥವಾ ಪ್ರಶ್ನೋತ್ತರಗಳಿಗೆ ಒಳಪಡುವ ಅಗತ್ಯವಿಲ್ಲ ಎಂಬ ನಿಲುವನ್ನು ಸರ್ಕಾರ ಮುಂದಿಟ್ಟಿದೆ.
ಅದೇ ರೀತಿ, Right to Information Act (RTI) ಅಡಿಯಲ್ಲಿ ಮಾಹಿತಿ ನೀಡುವುದರಿಂದಲೂ PM CARES ಅನ್ನು ದೂರವಿಡಲಾಗಿದೆ. Comptroller and Auditor General of India (CAG) ಪರಿಶೀಲನೆಯಿಂದಲೂ ಹೊರಗಿಡಲಾಗಿದೆ; ಬದಲಾಗಿ ಖಾಸಗಿ ಆಡಿಟರ್‌ಗಳನ್ನು ನೇಮಿಸಲಾಗಿದೆ.
ಕೆಲ ಮಾಹಿತಿಗಳ ಪ್ರಕಾರ, PM CARES ಕೇವಲ ಒಂದೇ ವರ್ಷದಲ್ಲಿ ಸುಮಾರು ₹10,990 ಕೋಟಿ ಸಂಗ್ರಹಿಸಿದೆ. ಅದರ 53% ಹಣ ಖಾಸಗಿ ವಲಯದಿಂದ, 42% ಸಾರ್ವಜನಿಕ ವಲಯದಿಂದ ಹರಿದು ಬಂದಿತ್ತು. ಆ ಪೈಕಿ ₹3,976 ಕೋಟಿ ಮಾತ್ರ ವೆಚ್ಚಮಾಡಲಾಗಿದೆ. ಮಾರ್ಚ್ 2021ರ ವೇಳೆಗೆ 64% ಹಣ ಬಳಕೆಯಾಗದೆ ಉಳಿದಿತ್ತು. ₹7,044 ಕೋಟಿ ಬಾಕಿ ಉಳಿದುಕೊಂಡಿತ್ತು.
ಒಟ್ಟು ದೇಣಿಗೆಯ ಸುಮಾರು 15% ಹಣ ಟಾಟಾ ಟ್ರಸ್ಟ್‌ಗಳಿಂದ ಬಂದಿದೆ. ರಿಲಯನ್ಸ್ ₹500 ಕೋಟಿ, ಆದಿತ್ಯ ಬಿರ್ಲಾ ಗ್ರೂಪ್ ₹400 ಕೋಟಿ, ಅದಾನಿ ಎಂಟರ್‌ಪ್ರೈಸಸ್ ₹100 ಕೋಟಿ ನೀಡಿವೆ. ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್‌ಗಳು ಸೇರಿ ₹175 ಕೋಟಿ ನೀಡಿವೆ. 38 ಸಾರ್ವಜನಿಕ ವಲಯದ ಘಟಕಗಳಿಂದ CSR ರೂಪದಲ್ಲಿ ₹175 ಕೋಟಿ ಬಂದಿದೆ. ನವೋದಯ ಶಾಲೆಗಳು, ಐಐಟಿಗಳು, ಐಐಎಮ್‌ಗಳು ಮತ್ತು ಕೇಂದ್ರ ವಿಶ್ವವಿದ್ಯಾಲಯಗಳು ಸೇರಿ ₹21.81 ಕೋಟಿ ನೀಡಿದ್ದಾರೆ.
ಸರ್ಕಾರ ವಿದೇಶಿ ದೇಣಿಗೆಗಳ ಮೇಲೆ ಕಠಿಣ ನಿಯಂತ್ರಣ ಹಾಕಿದ್ದರೂ, ಮೊದಲ ಮೂರು ವರ್ಷಗಳಲ್ಲಿ PM CARES ₹535.44 ಕೋಟಿ ವಿದೇಶಿ ದೇಣಿಗೆ ಪಡೆದಿದೆ ಎಂದು ಅಧ್ಯಯನ ಹೇಳುತ್ತದೆ. ಭಾರತದ ಪ್ರಮುಖ ಶಸ್ತ್ರಾಸ್ತ್ರ ಆಮದುದಾರ ಸಂಸ್ಥೆಯಾದ Rosoboronexport USD 2 ಮಿಲಿಯನ್ ನೀಡಿದೆಯೆಂದು ವರದಿಯಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಚೀನಾ ಗಡಿಯ ಉದ್ವಿಗ್ನತೆಯ ನಂತರವೂ TikTok ಸೇರಿದಂತೆ ಇತರೆ ಚೀನೀ ಕಂಪನಿಗಳಿಂದ ದೇಣಿಗೆ ಸ್ವೀಕರಿಸಲಾಗಿದೆ ಎಂದು ಆರೋಪಿಸಿದರು. ಪಂಜಾಬ್‌ನ ಆಗಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ಇದೇ ವಿಷಯವನ್ನು ಎತ್ತಿಹಿಡಿದಿದ್ದರು.
PM CARES ಹಣ ಬಳಕೆಯ ಬಗ್ಗೆ ಕೂಡ ಪ್ರಶ್ನೆಗಳಿವೆ. ಜೂನ್ 2020ರಲ್ಲಿ ಸರ್ಕಾರ ₹2,000 ಕೋಟಿ ವೆಚ್ಚದಲ್ಲಿ 50,000 ವೆಂಟಿಲೇಟರ್‌ಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿಕೊಂಡಿತ್ತು. ಆದರೆ RTI ಉತ್ತರದಲ್ಲಿ 40,350 ವೆಂಟಿಲೇಟರ್‌ಗಳನ್ನು ಖರೀದಿಸಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂತು. ಅವುಗಳಲ್ಲಿ 17,100 ವೆಂಟಿಲೇಟರ್‌ಗಳನ್ನು ಮಾತ್ರ ರಾಜ್ಯಗಳಿಗೆ ಹಂಚಲಾಗಿದೆ. ಕೆಲವೆಡೆ ವೆಂಟಿಲೇಟರ್‌ಗಳು ದೋಷಪೂರಿತವಾಗಿದ್ದವು ಎಂಬ ವರದಿಗಳೂ ಬಂದಿವೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!
PM CARESಗೆ ಸರ್ಕಾರ ನೀಡಿದ ಆದ್ಯತೆಯಿಂದ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಸಂಸ್ಥೆಗಳಿಗೆ ಹಣದ ಕೊರತೆ ಉಂಟಾಗಿದೆ. 2020-21ರಲ್ಲಿ ಸುಮಾರು 52% ಲಾಭರಹಿತ ಸಂಸ್ಥೆಗಳು ತಮ್ಮ ವಾರ್ಷಿಕ ಬಜೆಟ್ ಕಡಿತಗೊಳಿಸಬೇಕಾಯಿತು; ಸರಾಸರಿ 32% ಕಡಿತ ಮಾಡಲಾಗಿದೆ. ಇದರಿಂದ FCRA ಅನುಸರಣೆ ಮತ್ತು ಮರುನೋಂದಣಿ ವೆಚ್ಚಗಳು ಕೂಡ ಹೆಚ್ಚಾದವು. ICNL ಉಲ್ಲೇಖಿಸಿದ ಮತ್ತೊಂದು ಅಧ್ಯಯನದ ಪ್ರಕಾರ, ಭಾರತದ ವಾರ್ಷಿಕ CSR ಅನುದಾನದ ಸುಮಾರು ಮೂರನೇ ಭಾಗ PM CARESಗೆ ಹರಿದುಹೋಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದ ನಾಗರಿಕ ಸಮಾಜ ಸಂಸ್ಥೆಗಳು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಯಿತು.
PM CARES ನಿಧಿಗೆ 100% ತೆರಿಗೆ ರಿಯಾಯಿತಿ ಇರುವುದರಿಂದ, ಇತರ ಅನೇಕ ಲಾಭರಹಿತ ಸಂಸ್ಥೆಗಳಿಗಿಂತ, ಕಂಪನಿಗಳು PM CARES ಕಡೆಗೆ ಹೆಚ್ಚು ಆಕರ್ಷಿತವಾದವು. ಸಾಮಾನ್ಯವಾಗಿ ದೇಣಿಗೆ ನೀಡುವಾಗ ತೆರಿಗೆ ಸಡಿಲಿಕೆಯ ಅಂಶವು ಪ್ರಮುಖ ಪಾತ್ರವಹಿಸುವುದರಿಂದ, ಈ ಸಂಪೂರ್ಣ ವಿನಾಯಿತಿ ಕಂಪನಿಗಳ ನಿರ್ಧಾರದಲ್ಲಿ ನಿರ್ಣಾಯಕವಾಗಿತ್ತು. ಜೊತೆಗೆ, PM CARES ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬ ಭಾವನೆ ಕೂಡ ದೇಣಿಗೆಗಳು ಈ ನಿಧಿಯತ್ತ ಹೆಚ್ಚು ಹರಿಯುವಂತೆ ಮಾಡಿತು. ಪ್ರಧಾನಮಂತ್ರಿಯವರ ನೇತೃತ್ವ, ರಾಷ್ಟ್ರೀಯ ಚಿಹ್ನೆಗಳ ಬಳಕೆ ಹಾಗೂ ಸರ್ಕಾರದ ಅಧಿಕೃತ ಮನವಿಗಳು, ಈ ನಿಧಿಯನ್ನು ಒಂದು ವಿಶ್ವಾಸಾರ್ಹ ಮತ್ತು ಆದ್ಯತೆಯ ವೇದಿಕೆಯಂತೆ ಪ್ರದರ್ಶಿಸಿದವು.
ಇದರಿಂದ ಹಣಕಾಸು ಸಂಪನ್ಮೂಲಗಳು ಕೇಂದ್ರೀಕೃತಗೊಂಡವು. ಇದರ ನೇರ ಪರಿಣಾಮವಾಗಿ, ಸ್ಥಳೀಯ ಮಟ್ಟದಲ್ಲಿ ನೆಲಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಸ್ವಯಂಸೇವಾ ಸಂಸ್ಥೆಗಳು ದೇಣಿಗೆಗಳಿಂದ ವಂಚಿತವಾದವು. ಸಮುದಾಯ ಆಧಾರಿತ ಸೇವೆಗಳು, ತುರ್ತು ನೆರವು ಮತ್ತು ಕಲ್ಯಾಣ ಕಾರ್ಯಗಳಲ್ಲಿ ತೊಡಗಿದ್ದ ಸಂಸ್ಥೆಗಳ ಕೈ ತಪ್ಪಿದ ಹಣ, ಅವರ ಕಾರ್ಯಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತು.
ವಿಶ್ಲೇಷಣೆ: ಪಿ ರಾಮನ್
ಕೃಪೆ: The wire ಇಂಗ್ಲಿಷ್ ಮೂಲ https://thewire.in/government/pm-cares-a-pandemic-fund-that-centralised-money-and-avoided-scrutiny
ಇಂಗ್ಲಿಷ್ ಜಾಲತಾಣ The wire ನಲ್ಲಿ ಪ್ರಕಟವಾಗಿರುವ ಈ ವಿಶ್ಲೇಷಣೆಯನ್ನು ʼಈ ದಿನʼದಲ್ಲಿ ಪ್ರಕಟಿಸಲು ಅನುಮತಿಸಿದ ದಿ ವೈರ್ ಸಂಪಾದಕರಿಗೆ ಧನ್ಯವಾದಗಳು.





