ಭೌತಚಿಕಿತ್ಸಕರು (physiotherapists) ಮತ್ತು ಔದ್ಯೋಗಿಕ ಚಿಕಿತ್ಸಕರು (occupational therapists) ‘ಡಾಕ್ಟರ್’, ‘ಡಾ.’ ಪದವನ್ನು ಬಳಸುವುದರ ವಿರುದ್ಧ ವೈದ್ಯಕೀಯ ವೃತ್ತಿಪರರು ಸಲ್ಲಿಸಿದ್ದ ಅರ್ಜಿಗಳನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕಾಯ್ದೆಯು ‘ಡಾಕ್ಟರ್’, ‘ಡಾ.’ಗಳು ಎಂಬಿಬಿಎಸ್ ಪದವೀಧರಿಗೆ ಮಾತ್ರವೇ ಸೀಮಿತವಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದೆ ಎಂದು ಹೇಳಿದೆ.
‘ಡಾಕ್ಟರ್’ ಪದವನ್ನು ಆರಂಭದಲ್ಲಿ ಉನ್ನತ ಮಟ್ಟದ ಕಲಿಕೆಯನ್ನು ಸಾಧಿಸಿದವರು, ದೇವತಾಶಾಸ್ತ್ರ, ಕಾನೂನು ಮತ್ತು ತತ್ವಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಕಲಿಸಲು ಪರವಾನಗಿ ಪಡೆದ ವ್ಯಕ್ತಿಗಳಿಗೂ ಬಳಸಲಾಗುತ್ತಿತ್ತು. ಡಾಕ್ಟರ್ ಎಂಬ ಪದವು ಮೂಲತಃ ಕಲಿಸಲು ಅರ್ಹತೆ ಹೊಂದಿರುವ ವ್ಯಕ್ತಿ ಎಂಬ ಅರ್ಥ ಹೊಂದಿದೆ. ಆದರೆ, ಕ್ರಮೇಣ ವೈದ್ಯಕೀಯ ವಿಜ್ಞಾನದ ಪ್ರಗತಿಯೊಂದಿಗೆ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದ ಫಿಸಿಷಿಯನ್‌ಗಳು, ವೈದ್ಯಕೀಯ ಪದವಿ ಪಡೆದವರಿಗೂ ಡಾಕ್ಟರ್ ಎಂದು ಕರೆಯಲಾಯಿತು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ವಿವರಿಸಿದ್ದಾರೆ.
“ಆದ್ದರಿಂದ, ‘ಡಾಕ್ಟರ್’ ಎಂಬ ಶೀರ್ಷಿಕೆಯು ವೈದ್ಯಕೀಯ ವೃತ್ತಿಪರರಿಗೆ ಮಾತ್ರ ಸೇರಿದೆ ಎಂಬ ವಾದವು ತಪ್ಪು ಕಲ್ಪನೆಯಾಗಿದೆ. ಈಗಲೂ ಸಹ, ಹಳೆಯ ಕಾಲದಂತೆ, ಪಿಎಚ್‌ಡಿ ರೀತಿಯ ಉನ್ನತ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವ್ಯಕ್ತಿಗಳು ‘ಡಾಕ್ಟರ್’ ಎಂಬ ಶೀರ್ಷಿಕೆಯನ್ನು ಬಳಸಲು ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಹ ವೈದ್ಯಕೀಯ ವೃತ್ತಿಪರರಿಗೆ ಡಾಕ್ಟರ್ ಎಂಬ ಬಿರುದನ್ನು ನೀಡುವ ಯಾವುದೇ ನಿಬಂಧನೆಯು NMC ಕಾಯ್ದೆಯಲ್ಲಿ ಇಲ್ಲ ಎಂದು ಕೋರ್ಟ್ ಹೇಳಿದೆ.
ಕೇರಳ ರಾಜ್ಯ ವೈದ್ಯಕೀಯ ವೈದ್ಯರ ಕಾಯ್ದೆಯ ಸೆಕ್ಷನ್ 40ರಲ್ಲಿ ಬಳಸಲಾದ ‘ಡಾಕ್ಟರ್’ ಎಂಬ ಶೀರ್ಷಿಕೆಯನ್ನು ಅರ್ಹ ವೈದ್ಯಕೀಯ ವೃತ್ತಿಪರರು ತಮ್ಮ ಹೆಸರುಗಳ ಮುಂದೆ ‘ಡಾ.’ ಎಂಬ ಪೂರ್ವಪ್ರತ್ಯಯವನ್ನು (prefix) ಬಳಸಲು ಶಾಸನಬದ್ಧವಾಗಿ ಅರ್ಹತೆ ನೀಡುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.




