ದೇಶವನ್ನು ಕೃತಕ ಬುದ್ಧಿಮತ್ತೆಯ (AI) ಜಾಗತಿಕ ಕೇಂದ್ರವಾಗಿ ಪ್ರತಿಷ್ಠಾಪಿಸುವ ಉದ್ದೇಶದೊಂದಿಗೆ ದೆಹಲಿಯ ಭಾರತ್ ಮಂಟಪದಲ್ಲಿ ನಿನ್ನೆಯಿಂದ (ಫೆ.16-20) ಶುರುವಾಗಿರುವ ಜಾಗತಿಕ AI ಇಂಪ್ಯಾಕ್ಟ್ ಶೃಂಗಸಭೆ-2026 ಆರಂಭದಿಂದಲೇ ಗೊಂದಲ, ಅಸಮರ್ಪಕ ವ್ಯವಸ್ಥೆ ಮತ್ತು ಭಾಗವಹಿಸಿದವರ ಅಸಮಾಧಾನಕ್ಕೆ ಕಾರಣವಾಗಿದೆ. ದೇಶ-ವಿದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು, ಸ್ಟಾರ್ಟ್‌ಅಪ್ ಸಂಸ್ಥೆಗಳು ಹಾಗೂ ಉದ್ಯಮಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಸಮಿಟ್‌ಗೆ ಜತೆಗೆ ಆಯೋಜಿಸಲಾದ AI ಇಂಪ್ಯಾಕ್ಟ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದ ಸ್ಟಾರ್ಟ್‌ಅಪ್‌ಗಳು ಮತ್ತು ಪ್ರದರ್ಶಕರು ಎದುರಿಸಿದ ಸಮಸ್ಯೆಗಳು ಇದೀಗ ಬಹಿರಂಗವಾಗುತ್ತಿವೆ. ಪ್ರಧಾನಿ ಭೇಟಿ ನೆಪದಲ್ಲಿ ಮಧ್ಯಾಹ್ನದಿಂದಲೇ ಪ್ರದರ್ಶನ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದ್ದು, ಹಲವು ಗಂಟೆಗಳ ಕಾಲ ಪ್ರದರ್ಶಕರಿಗೆ ಒಳಗೆ ಪ್ರವೇಶ ನಿರಾಕರಿಸಲಾಗೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಭದ್ರತಾ ಸಿಬ್ಬಂದಿಯ ಸಮನ್ವಯದ ಕೊರತೆಯಿಂದಾಗಿ ಪ್ರದರ್ಶಕರು ಗೊಂದಲಕ್ಕೆ ಸಿಲುಕಿದರು ಎನ್ನಲಾಗಿದೆ. ಈ ಕುರಿತು ಪತ್ರಕರ್ತೆ ಸ್ಮಿತಾ ಶರ್ಮಾ ತಮ್ಮ ಯೂಟ್ಯೂಬ್ ಚಾನಲ್ (Smita Sharma Journalist) ಒಂದರಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ AI ಸ್ಟಾರ್ಟ್‌ಅಪ್ ಸಂಸ್ಥೆಯೊಂದರ ಸಹ ಸಂಸ್ಥಾಪಕ ಧನಂಜಯ್ ಯಾದವ್ ಅವರು, ತಮ್ಮ ಮಳಿಗೆಯಲ್ಲಿ ಇರಿಸಿದ್ದ AI ಸಾಧನಗಳನ್ನು ಅಲ್ಲೇ ಬಿಟ್ಟು ಹೋಗುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ ಬಳಿಕ, ಮರಳಿ ಬಂದಾಗ ಅವು ಕಳವಾಗಿರುವುದನ್ನು ಕಂಡು ಬೆಚ್ಚಿಬಿದ್ದಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಆರೋಪ ಇವರೊಬ್ಬರದ್ದೇ ಅಲ್ಲ. ಅನೇಕ ಉದ್ಯಮಿಗಳು ಮತ್ತು ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆಯ ನಡುವೆಯೇ ಕಳ್ಳತನ ನಡೆದಿರುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಸಮಾವೇಶದಲ್ಲಿ ಕುಡಿಯುವ ನೀರಿನ ಕೊರತೆ, ಶೌಚಾಲಯಗಳ ಅಸಮರ್ಪಕ ವ್ಯವಸ್ಥೆ, ಉದ್ದುದ್ದ ಕ್ಯೂಗಳು, ಇಂಟರ್ನೆಟ್ ಸಮಸ್ಯೆ ಮತ್ತು ಆಹಾರ ಮಳಿಗೆಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಇಲ್ಲದಿರುವುದು ಕೂಡ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. AI ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚಿಸುವ ವೇದಿಕೆಯಲ್ಲಿ UPI ಅಥವಾ ಆನ್‌ಲೈನ್ ಪಾವತಿ ಕಾರ್ಯನಿರ್ವಹಿಸದಿರುವುದು ವ್ಯಂಗ್ಯಕರ ಎಂದು ಹಲವರು ಟೀಕಿಸಿದ್ದಾರೆ. ಕೆಲವರು ತಮ್ಮದೇ ಬೂತ್‌ಗೆ ಪ್ರವೇಶ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನೂ ವಿವರಿಸಿದ್ದಾರೆ.
ಪತ್ರಕರ್ತರು ಹಾಗೂ ತಂತ್ರಜ್ಞಾನ ನೀತಿ ತಜ್ಞರೂ ಈ ಅವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದು, ಒಂದು ಪ್ರವೇಶ ದ್ವಾರದಿಂದ ಒಳಗೆ ಬರುವುದಕ್ಕೆ ಒಂದೂವರೆ ಗಂಟೆಗೂ ಹೆಚ್ಚು ಸಮಯ ಹಿಡಿದಿದ್ದು, ಒಳಗೆ ಪ್ರವೇಶಿಸಿದ ನಂತರವೂ ಒಂದು ಹಾಲ್‌ನಿಂದ ಮತ್ತೊಂದಕ್ಕೆ ಹೋಗಲು ದೀರ್ಘ ಕಾಲ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿಯ ಭೇಟಿ ಮುಗಿಯುವ ಹೊತ್ತಿಗೆ ದಿನದ ಬಹುತೇಕ ಕಾರ್ಯಕ್ರಮಗಳು ಮುಕ್ತಾಯಗೊಂಡಿದ್ದರಿಂದ, ಪ್ರದರ್ಶಕರು ಮತ್ತು ಪ್ರತಿನಿಧಿಗಳಿಗೆ ಸಮಾವೇಶದಿಂದ ಯಾವುದೇ ಲಾಭವಾಗಲಿಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.
ಇದನ್ನೂ ಓದಿ: AI ಶೃಂಗಸಭೆ-2026 | ಅವಕಾಶ-ಅಪಾಯಗಳ ಜಾಗತಿಕ ಚರ್ಚೆ
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಸಮಾವೇಶವನ್ನು ಯಶಸ್ವಿಯಾಗಿರುವಂತೆ ಎಂದು ತನ್ನದೇ ಬೆನ್ನು ತಟ್ಟಿಕೊಳ್ಳುತ್ತಿದೆ. ಆದರೆ ಅಸಲಿಗೆ ಅಲ್ಲಿ ಆದ ಅನುಭವ ಸಂಪೂರ್ಣ ಭಿನ್ನವಾಗಿದೆ ಎಂದು ಭಾಗವಹಿಸಿದವರು ಹೇಳುತ್ತಿದ್ದಾರೆ. ರೀಲ್ಸ್ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಸರ್ಕಾರ ಅರಿತುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಈ ಸಮಾವೇಶವನ್ನು ಅವಕಾಶವಾಗಿ ಬಳಸಬೇಕಾಗಿತ್ತು. ಆದರೆ ಅಸಮರ್ಪಕ ಯೋಜನೆ, ಜನಸಂದಣಿ ನಿಯಂತ್ರಣದ ಕೊರತೆ ಮತ್ತು ಮೂಲಭೂತ ಸೌಲಭ್ಯಗಳ ಅಭಾವದಿಂದ ಈ ಸಮಾವೇಶ ಟೀಕೆಗೆ ಗುರಿಯಾಗಿದೆ.
ಇನ್ನೂ ಕೆಲವು ದಿನಗಳ ಕಾರ್ಯಕ್ರಮ ಬಾಕಿ ಇರುವುದರಿಂದ, ಸಂಬಂಧಪಟ್ಟ ಇಲಾಖೆ ಮತ್ತು ಆಯೋಜಕರು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಗಳನ್ನು ಸರಿಪಡಿಸಬೇಕು ಹಾಗೂ ದೇಶದ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಒತ್ತಾಯಗಳು ವ್ಯಕ್ತವಾಗುತ್ತಿವೆ.





