ತನ್ನ ಅಂಗಡಿಯಿಂದ ಆಹಾರ ಪದಾರ್ಥವೊಂದನ್ನು ಕದ್ದಿದ್ದ ಯುವಕನೋರ್ವನಿಗೆ ಆ ಅಂಗಡಿಯ ಮಾಲೀಕ ‘ಮೀಸೆ ಮಾಧವನ್’ ಪ್ರಶಸ್ತಿ ನೀಡಿ ಅಭಿನಂದಿಸಿದ ಘಟನೆ ಕೇರಳದ ಕಡಕ್ಕವೂರಿನಲ್ಲಿಮ ಚಿರಯಿನ್‌ಕೀಜುವಿನಲ್ಲಿ ನಡೆದಿದೆ.
ಇತ್ತೀಚೆಗೆ ಯುವಕನೋರ್ವ ಅನೀಶ್ ಎಂಬವರ ಕಡಕ್ಕವೂರಿನಲ್ಲಿರುವ ಆದಿತ್ಯ ಬೇಕರಿ ಮತ್ತು ಫಾಸ್ಟ್ ಫುಡ್ ಅಂಗಡಿಯಿಂದ 500 ರೂ. ಮೌಲ್ಯದ ಆಹಾರ ಪ್ಯಾಕೆಟ್ ಕದ್ದು, ಪರಾರಿಯಾಗಿದ್ದ. ಈ ಘಟನೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಕೆಲವು ದಿನಗಳ ನಂತರ ಕದ್ದಿದ್ದಾತನ ಮನೆಯ ವಿಳಾಸವನ್ನು ಪತ್ತೆಹಚ್ಚಿದ ಮಾಲೀಕ ಅನೀಶ್, ಆತನ ಮನೆಯ ತನಕ ಹೋಗಿ ‘ಮೀಸೆ ಮಾಧವನ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಫಲಕದಲ್ಲಿ ಘಟನೆಯ ಸಿಸಿಟಿವಿಯ ಚಿತ್ರವನ್ನು ಹಾಕಲಾಗಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಕೇಂದ್ರ ಚುನಾವಣಾ ಆಯೋಗರಿಂದ ನಾಗರೀಕರ ಪೌರತ್ವದ ಕಳ್ಳತನ, ಮತಗಳ್ಳತನ; ಎಸ್ ಯುಸಿಐ ಸದಸ್ಯೆ ಅಪರ್ಣಾ
ಇತ್ತೀಚೆಗೆ ರಾತ್ರಿ ವೇಳೆ ಯುವಕನೊಬ್ಬ ಬೈಕ್‌ನಲ್ಲಿ ಬಂದು ಅಂಗಡಿಗೆ ನುಗ್ಗಿ ಸ್ವಲ್ಪ ಆಹಾರ ತಿಂದು, ಬಳಿಕ ಆಹಾರ ಪ್ಯಾಕೆಟ್ ಒಂದನ್ನು ಕದ್ದು ಪರಾರಿಯಾಗಿದ್ದ. ಅನುಮಾನಗೊಂಡ ಸ್ಥಳೀಯರು ಅನೀಶ್ ಮತ್ತು ಅವರ ಪತ್ನಿಗೆ ಮಾಹಿತಿ ನೀಡಿದ್ದರು. ದಂಪತಿ ಬೇಕರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಅನೀಶ್ ಆ ಯುವಕನ ಮಾಹಿತಿ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಬದಲು ಅನೀಶ್ ಮತ್ತು ಅವರ ತಂಡವು ಯುವಕನಿಗೆ ಪ್ರಶಸ್ತಿ ನೀಡಿದೆ. “ಚತುರ ಕಳ್ಳನಾದ” ಕಾರಣ ಯುವಕನಿಗೆ ‘ಮೀಸೆ ಮಾಧವನ್’ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಮಲಯಾಳಂ ನಟ ದಿಲೀಪ್ ಅಭಿನಯಿಸಿದ್ದ ‘ಮೀಸೆ ಮಾಧವನ್’ ಚಿತ್ರದ ಹೆಸರನ್ನು ಪ್ರಶಸ್ತಿಯನ್ನು ನೀಡುವಾಗ ಬಳಸಿದ್ದಾರೆ. ‘ಮೀಸೆ ಮಾಧವನ್’ ಆಗಿ ನಟಿಸಿದ್ದ ದಿಲೀಪ್, ಊರಿನಲ್ಲಿ ಕಳ್ಳನ ಪಾತ್ರ ನಿರ್ವಹಿಸಿದ್ದರು.
ಸದ್ಯ ಈ ಘಟನೆಯ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈವರೆಗೂ ಯುವಕನ ಸಾಮಾಜಿಕ ಹಿನ್ನೆಲೆ, ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.





