ಕ್ರಿಕೆಟ್ ಬಹುಕಾಲದಿಂದ ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆಯಾಗಿಯೇ ಇದೆ. ದ್ವೇಷ, ಸೇಡು ಎಲ್ಲವೂ ಮೈದಾನದಲ್ಲಿಯೇ ಮುಗಿಯುತ್ತದೆ. ಗೌರವ ಮಾತ್ರ ಉಳಿಯುತ್ತದೆ ಎಂಬುದನ್ನು 14 ಮಾಜಿ ಕ್ರಿಕೆಟ್ ದಿಗ್ಗಜರ ನಡೆ ನೆನಪಿಸುತ್ತಿದೆ...
ಭಾರತದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಸೇರಿದಂತೆ 5 ದೇಶಗಳ 14 ಮಾಜಿ ಕ್ರಿಕೆಟ್ ದಿಗ್ಗಜರು ಮಂಗಳವಾರ ಪಾಕಿಸ್ತಾನ ಸರ್ಕಾರಕ್ಕೆ ಒಂದು ಮನವಿ ಮಾಡಿಕೊಂಡಿದ್ದಾರೆ. ಆ ಮನವಿಯಲ್ಲಿ ಆ ಮಾಜಿ ನಾಯಕರು, 1992ರ ವಿಶ್ವಕಪ್ ವಿಜೇತ ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್ ಅವರಿಗೆ ಜೈಲಿನಲ್ಲಿ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಖಾನ್ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಇದ್ದಾರೆ. ಅವರ ಸಹೋದರಿ ಅಲೀಮಾ ಖಾನುಮ್ ಜೈಲಿನಲ್ಲಿ ಇಮ್ರಾನ್ ಅವರಿಗೆ ನೀಡಲಾಗುತ್ತಿರುವ ಸೌಲಭ್ಯದಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್ ಸುಮಾರು 800 ದಿನಗಳಿಗಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಇದ್ದು, ಅವರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಲೇ ಹೋಗುತ್ತಿದೆ. ಇದರಿಂದ ಜೈಲಿನಲ್ಲಿನ ಚಿಕಿತ್ಸೆ ಕುರಿತು ಗಂಭೀರ ಆತಂಕಗಳು ಉಂಟಾಗಿವೆ. ಕೆಲವು ದಿನಗಳ ಹಿಂದೆ, ನ್ಯಾಯಾಲಯದಿಂದ ನೇಮಿಸಲ್ಪಟ್ಟ ವಕೀಲರು, ಅಧಿಕಾರಿಗಳು ಮೂರು ತಿಂಗಳ ಕಾಲ ಅವರ ದೂರನ್ನು ಕಡೆಗಣಿಸಿದ್ದಾರೆ. ಪರಿಣಾಮವಾಗಿ, ಜೈಲಿನಲ್ಲಿರುವ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಬಲ ಕಣ್ಣಿನ ದೃಷ್ಟಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈಗ ಕೇವಲ 15 ಶೇಕಡಾ ದೃಷ್ಟಿ ಮಾತ್ರ ಉಳಿದಿದೆ ಎಂದು ಅವರ ಹತ್ತಿರದವರು ಹೇಳಿದ್ದಾರೆ. ಇದರಿಂದ ಅವರ ಬಂಧನ-ಆರೋಗ್ಯ ಕುರಿತು ಮತ್ತೊಂದು ವಿವಾದ ಉಂಟಾಗಿದೆ.
ಇದನ್ನು ಓದಿದ್ದೀರಾ?: ಕ್ರೀಡೆಗಿಂತ ‘ರಾಜಕೀಯ’ವೇ ಮೇಲುಗೈ: ಮೈದಾನದ ಆಟವಾಗಿ ಉಳಿಯದ ಭಾರತ-ಪಾಕ್ ಕ್ರಿಕೆಟ್
ಗವಾಸ್ಕರ್, ಕಪಿಲ್, ಮೈಕೆಲ್ ಅಥರ್ಟನ್, ಅಲನ್ ಬಾರ್ಡರ್, ಮೈಕೆಲ್ ಬ್ರಿಯರ್ಲಿ, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಮಾಜಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಬೆಲಿಂಡಾ ಕ್ಲಾರ್ಕ್, ಡೇವಿಡ್ ಗವರ್, ಕಿಮ್ ಹ್ಯೂಜಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಸ್ಟೀವ್ ವಾ ಮತ್ತು ಭಾರತದ ಮಾಜಿ ಕೋಚ್ ಜಾನ್ ರೈಟ್ ಸೇರಿ ಹದಿನಾಲ್ಕು ಮಾಜಿ ನಾಯಕರು ಪ್ರಧಾನಮಂತ್ರಿ ಶೆಹಬಾಜ್ ಶರೀಫ್‌ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನ ಸರ್ಕಾರಕ್ಕೆ ಇಮ್ರಾನ್ ಅವರ ಮಹತ್ವದ ಕ್ರಿಕೆಟ್ ಸಾಧನೆಗಳನ್ನು ನೆನಪಿಸುತ್ತಾ, ಈ ಮನವಿಯಲ್ಲಿ ಹೀಗೆ ಹೇಳಲಾಗಿದೆ:
ʼʼನಾವು, ನಮ್ಮ ರಾಷ್ಟ್ರಗಳ ಕ್ರಿಕೆಟ್ ತಂಡಗಳ ಮಾಜಿ ನಾಯಕರು, ಪಾಕಿಸ್ತಾನದ ವಿಶಿಷ್ಟ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್ನ ಮಹೋನ್ನತ ವ್ಯಕ್ತಿತ್ವವಾದ ಇಮ್ರಾನ್ ಖಾನ್ ಅವರಿಗೆ ಒದಗಿಸುತ್ತಿರುವ ಸೌಕರ್ಯ ಮತ್ತು ಬಂಧನದ ಪರಿಸ್ಥಿತಿಗಳ ಕುರಿತು ವರದಿಯಾಗಿರುವ ಸಂಗತಿಗಳ ಬಗ್ಗೆ ಆಳವಾದ ಚಿಂತೆ ವ್ಯಕ್ತಪಡಿಸಿ ಈ ಪತ್ರ ಬರೆಯುತ್ತಿದ್ದೇವೆ.
“ಇಮ್ರಾನ್ ಖಾನ್ ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆಗಳು ವಿಶ್ವವ್ಯಾಪಿಯಾಗಿ ಪ್ರಶಂಸಿಸಲ್ಪಟ್ಟಿವೆ. ನಾಯಕನಾಗಿ, ಅವರು ಪಾಕಿಸ್ತಾನವನ್ನು 1992ರ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಜಯಕ್ಕೆ ಕಾರಣರಾದವರು. ಅವರ ಕೌಶಲ್ಯ, ಸ್ಥೈರ್ಯ, ನಾಯಕತ್ವ ಮತ್ತು ಕ್ರೀಡಾಸ್ಫೂರ್ತಿಯನ್ನು ಅವಲಂಬಿಸಿದ್ದ ಆ ಜಯವು ಗಡಿಗಳನ್ನು ಮೀರಿ ಅನೇಕ ಪೀಳಿಗೆಗಳಿಗೆ ಪ್ರೇರಣೆಯಾಯಿತು.
“ನಮ್ಮಲ್ಲಿ ಅನೇಕರು ಅವರ ವಿರುದ್ಧ ಸ್ಪರ್ಧಿಸಿದ್ದೇವೆ, ಅವರೊಂದಿಗೆ ಮೈದಾನ ಹಂಚಿಕೊಂಡಿದ್ದೇವೆ ಅಥವಾ ಅವರ ಆಲ್ರೌಂಡರ್ ಪ್ರತಿಭೆ, ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಆರಾಧಿಸುತ್ತ ಬೆಳೆದಿದ್ದೇವೆ. ಅವರು ಈ ಕ್ರಿಕೆಟ್ ಆಟ ಕಂಡ ಅತ್ಯುತ್ತಮ ಆಲ್ರೌಂಡರ್ ಮತ್ತು ನಾಯಕರಲ್ಲಿ ಒಬ್ಬರು. ನಮ್ಮಿಂದ ಮಾತ್ರವಲ್ಲ, ಆಟಗಾರರು, ಅಭಿಮಾನಿಗಳು ಮತ್ತು ಆಡಳಿತಗಾರರಿಂದ ಸಮಾನ ಗೌರವ ಪಡೆದಿದ್ದಾರೆ.
“ಕ್ರಿಕೆಟ್‌ಗೆ ಮೀರಿಯೂ, ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ, ಸವಾಲಿನ ಕಾಲಘಟ್ಟದಲ್ಲಿ ದೇಶವನ್ನು ಮುನ್ನಡೆಸಿದ್ದಾರೆ. ರಾಜಕೀಯ ನಿಲುವುಗಳನ್ನೆಲ್ಲ ಮೀರಿ, ಅವರು ತಮ್ಮ ದೇಶದ ಉನ್ನತ ಹುದ್ದೆಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದಾರೆ. ಗೌರವಾನ್ವಿತ ವ್ಯಕ್ತಿಯ ಸ್ಥಾನವನ್ನು ಹೊಂದಿದ್ದಾರೆ’’ ಎಂದಿದ್ದಾರೆ.
ಜೈಲಿನಲ್ಲಿ ಇಮ್ರಾನ್ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ನಾಯಕರು, ʼʼಇತ್ತೀಚಿನ ವರದಿಗಳ ಪ್ರಕಾರ, ಬಂಧನದಲ್ಲಿರುವ ಇಮ್ರಾನ್ ಖಾನ್ ಅವರ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದೆ. ಇದು ನಮ್ಮನ್ನು ತೀವ್ರವಾಗಿ ಆತಂಕಕ್ಕೀಡುಮಾಡಿದೆ. ಗಡಿ ರೇಖೆಗಳನ್ನು ಮೀರುವ ನ್ಯಾಯಸಮ್ಮತ ಆಟ, ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಅರಿತ ಸಹ ಕ್ರಿಕೆಟ್ ಆಟಗಾರರಾಗಿ, ಇಮ್ರಾನ್ ಖಾನ್ ಅವರಂತಹ ಮಹತ್ವದ ವ್ಯಕ್ತಿಗೆ, ಮಾಜಿ ರಾಷ್ಟ್ರೀಯ ನಾಯಕ ಮತ್ತು ಜಾಗತಿಕ ಕ್ರೀಡಾ ಐಕಾನ್‌ಗೆ ತಕ್ಕ ಗೌರವ ಮತ್ತು ಮೂಲಭೂತ ಮಾನವೀಯ ಚಿಕಿತ್ಸೆ, ನಿಗಾ ದೊರಕಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಮುಂದುವರೆದು, ಪಾಕಿಸ್ತಾನ ಸರ್ಕಾರವು ಇಮ್ರಾನ್ ಖಾನ್ ಅವರಿಗೆ ತಕ್ಷಣದ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಮನವಿ ಮೂಲಕ ಆಗ್ರಹಿಸಲಾಗಿದೆ:
* ತಮ್ಮ ಆಯ್ಕೆಯ ಅರ್ಹ ತಜ್ಞರಿಂದ ತಕ್ಷಣದ, ಸಮರ್ಪಕ ಹಾಗೂ ನಿರಂತರ ವೈದ್ಯಕೀಯ ಆರೈಕೆ.
* ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ಮಾನವೀಯ ಮತ್ತು ಗೌರವಯುತವಾಗಿ ನೋಡಿಕೊಳ್ಳುವುದು.
* ಸಮೀಪದ ಕುಟುಂಬ ಸದಸ್ಯರಿಂದ ನಿಯಮಿತ ಭೇಟಿಗೆ ಅವಕಾಶ ಕಲ್ಪಿಸಿಕೊಡುವುದು.
* ಅನಾವಶ್ಯಕ ವಿಳಂಬವಿಲ್ಲದೆ ನ್ಯಾಯಸಮ್ಮತ ಮತ್ತು ಪಾರದರ್ಶಕ ಕಾನೂನು ಪ್ರಕ್ರಿಯೆಗಳಿಗೆ ಸಹಕಾರ ನೀಡುವುದು.

ಈ ಮನವಿ ಯಾವುದೇ ಕಾನೂನು ಪ್ರಕ್ರಿಯೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲದೆ, ಕ್ರೀಡಾಸ್ಫೂರ್ತಿ ಮತ್ತು ಸಾಮಾನ್ಯ ಮಾನವೀಯತೆಯ ಮನೋಭಾವದಲ್ಲಿ ಮಾಡಲಾಗಿದೆ ಎಂದು 14 ಮಾಜಿ ನಾಯಕರು ಹೇಳಿದ್ದಾರೆ.
ಕ್ರಿಕೆಟ್ ಬಹುಕಾಲದಿಂದ ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆಯಾಗಿಯೇ ಇದೆ. ದ್ವೇಷ, ಸೇಡು ಎಲ್ಲವೂ ಮೈದಾನದಲ್ಲಿಯೇ ಮುಗಿಯುತ್ತದೆ. ಗೌರವ ಮಾತ್ರ ಉಳಿಯುತ್ತದೆ ಎಂಬುದನ್ನು ನೆನಪಿಸುತ್ತದೆ. ಇಮ್ರಾನ್ ಖಾನ್ ತಮ್ಮ ವೃತ್ತಿಜೀವನಪೂರ್ತಿ ಆ ಮನೋಭಾವವನ್ನು ಪ್ರತಿಬಿಂಬಿಸಿದ್ದಾರೆ. ಇದೀಗ ಅಧಿಕಾರಿಗಳು ಶಿಷ್ಟಾಚಾರ ಮತ್ತು ನ್ಯಾಯದ ತತ್ವಗಳನ್ನು ಉಳಿಸಿ ಅದನ್ನು ಗೌರವಿಸಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಇಮ್ರಾನ್ ಖಾನ್ ಸ್ಥಾಪಿಸಿದ ಪಕ್ಷ ಪಾಕಿಸ್ತಾನ್ ತಹ್ರೀಕ್-ಎ-ಇನ್ಸಾಫ್ (PTI) ಕಳೆದ ವಾರ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿ, ವಿಶೇಷವಾಗಿ ಅವರ ಕಣ್ಣಿನ ದೃಷ್ಟಿ ಕುರಿತು ಗಂಭೀರವಾಗಿ ಯೋಚಿಸಿ, ಚಿಕಿತ್ಸೆ ಕೊಡಿಸಲು ಕೋರಿಕೊಂಡಿದೆ. ಹಾಗೆಯೇ ನಿರ್ಲಕ್ಷಿಸುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.
ಇದೇ ಸಂದರ್ಭದಲ್ಲಿ, ಟಿ20 ವಿಶ್ವಕಪ್ ಪಂದ್ಯಾವಳಿಗಳು ನಡೆಯುತ್ತಿವೆ. ಭಾರತ-ಪಾಕಿಸ್ತಾನ ತಂಡಗಳ ನಡುವೆ ಪಂದ್ಯವೂ ಜರುಗಿದೆ. ಆದರೆ, ಯಾರದೋ ಚಿತಾವಣೆಗೊಳಗಾದ ಆಟಗಾರರು ಕ್ರೀಡಾಸ್ಫೂರ್ತಿ ಮರೆತು, ಕೈ ಕುಲಕದೆ ಮೈದಾನದಲ್ಲಿಯೂ ಮುನಿಸು ತೋರಿಸುವ ಸಣ್ಣತನ ಪ್ರದರ್ಶಿಸಿದ್ದಾರೆ.
ಮಾಜಿ ಆಟಗಾರರು ಎಲ್ಲಿ, ಹಾಲಿ ಆಟಗಾರರು ಎಲ್ಲಿ? ಕಾಲ ಬದಲಾದಂತೆ ಆಟವೂ ಕೆಟ್ಟಿದೆ, ಆಟಗಾರರ ಮನಸ್ಸು ಕೆಟ್ಟಿದೆ. ಮಾನವೀಯತೆಯೂ ಮರೆಯಾಗಿದೆ.






