ಅಮೆರಿಕದ ಸುಂಕ ದಾಳಿಗೆ ಚೀನಾ ಅದೇ ಹಾದಿಯಲ್ಲಿ ಪ್ರತಿಕ್ರಿಯಿಸುತ್ತಿದೆ. ತನ್ನ ವ್ಯಾಪಾರ ಸಂಬಂಧಗಳಲ್ಲಿ ಗಟ್ಟಿಯಾಗಿ ನಿಂತಿದೆ. ಆದರೆ, ಭಾರತಕ್ಕೆ ಅಮೆರಿಕ ಮತ್ತು ನ್ಯಾಟೋ ಎಚ್ಚರಿಕೆಗಳು ತಲೆನೋವಾಗಿ ಪರಿಣಮಿಸಿವೆ. ಆದಾಗ್ಯೂ, ಇಬ್ಬಂದಿ ನೀತಿ ಸಲ್ಲದು ಎಂದು ಭಾರತ ಪ್ರತಿಕ್ರಿಯಿಸಿದೆ.
ಭಾರತ ಮತ್ತು ರಷ್ಯಾ ನಡುವಿನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸಂಬಂಧವನ್ನು ಮುರಿಯಲು ಅಮೆರಿಕ ಹವಣಿಸುತ್ತಿದೆ. ನಾನಾ ತಂತ್ರ-ಕುತಂತ್ರಗಳನ್ನು ರೂಪಿಸುತ್ತಿದೆ. ಇತ್ತೀಚೆಗೆ, ಭಾರತವು ಸೇರಿದಂತೆ ಹಲವಾರು ರಾಷ್ಟ್ರಗಳ ಮೇಲೆ ಭಾರೀ ಆಮದು ಶುಲ್ಕ ವಿಧಿಸಿರುವ ಅಮೆರಿಕ, ಮತ್ತೆ ಸುಂಕ ದಾಳಿಗೆ ಮುಂದಾಗಿದೆ. ರಷ್ಯಾದಿಂದ ತೈಲ ಖರೀದಿ ಮಾಡುವ ಭಾರತ, ಚೀನಾ ಹಾಗೂ ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳ ತೈಲ ಖರೀದಿಯ ಮೇಲೆ 500% ಸುಂಕ ವಿಧಿಸಲು ಅಮೆರಿಕ ಸೆನೆಟ್ ಚರ್ಚೆ ನಡೆಸುತ್ತಿದೆ.
ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಭಾರತ ಮತ್ತು ಇತರ ದೇಶಗಳು ರಷ್ಯಾದ ತೈಲವನ್ನು ಖರೀದಿಸುವುದರ ಮೇಲೆ 500% ಸುಂಕಗಳನ್ನು ವಿಧಿಸುವ ‘ರಷ್ಯಾ ನಿರ್ಬಧ ಕಾಯ್ದೆ’ ಎಂಬ ಮಸೂದೆಯನ್ನು ಸೆನೆಟ್‌ನಲ್ಲಿ ಮಂಡಿಸಿದ್ದಾರೆ. ಈ ಮಸೂದೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬೆಂಬಲಿಸಿದ್ದಾರೆ. ಅಲ್ಲದೆ, ಅಮೆರಿಕ ನೇತೃತ್ವದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ ರಷ್ಯಾದೊಂದಿಗೆ ವ್ಯಾಪಾರ ಮುಂದುವರೆಸುವ ರಾಷ್ಟ್ರಗಳ ಮೇಲೆ ‘ದ್ವಿತೀಯಕ ನಿರ್ಬಂಧ’ (ಸೆಕೆಂಡರಿ ಸ್ಯಾಂಕ್ಷನ್) ಅಡಿಯಲ್ಲಿ 100% ತೆರಿಗೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜುಲೈ 16ರ ಬುಧವಾರ ಟ್ರಂಪ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ರುಟ್ಟೆ ಅವರು ಭೇಟಿಯಾಗಿದ್ದರು. ಈ ವೇಳೆ, ರಷ್ಯಾದ ಕಚ್ಚಾ ತೈಲ, ತೈಲ ಉತ್ಪನ್ನಗಳು ಹಾಗೂ ಕಲ್ಲಿದ್ದಲಿನ ಪ್ರಮುಖ ಖರೀದಿದಾರರಾಗಿರುವ ಚೀನಾ, ಭಾರತ ಹಾಗೂ ಬ್ರೆಜಿಲ್‌ಗೆ ಬೆದರಿಕೆ ಹಾಕಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗಾಣಿಸಲು ಶಾಂತಿ ಮಾತುಕತೆ ಮತ್ತು ಕದನ ವಿರಾಮಕ್ಕಾಗಿ ರಷ್ಯಾ ಮೇಲೆ ಭಾರತ ಮತ್ತು ಚೀನಾ ಒತ್ತಡ ಹೇರಬೇಕು. ಅದಕ್ಕಾಗಿ, ರಷ್ಯಾದ ತೈಲ ಆಮದನ್ನು ಸ್ಥಗಿತಗೊಳಿಸಬೇಕು. ರಷ್ಯಾ ಮೇಲೆ ಹೆಚ್ಚು ಸುಂಕವನ್ನು ವಿಧಿಸಬೇಕು. 50 ದಿನಗಳಲ್ಲಿ ಇದು ಸಂಭವಿಸದಿದ್ದರೆ, ರಷ್ಯಾದೊಂದಿಗೆ ತೈಲ ವ್ಯಾಪಾರ ನಡೆಸುವ ರಾಷ್ಟ್ರಗಳ ಮೇಲೆ ಭಾರೀ ಸುಂಕ ಹೇರುವುದಾಗಿ ಟ್ರಂಪ್ ಮತ್ತು ರುಟ್ಟೆ ಧಮ್ಕಿ ಹಾಕಿದ್ದಾರೆ.
ಆದರೆ, ನ್ಯಾಟೋದ ಭಾಗವೇ ಆಗಿರುವ ಟರ್ಕಿಯಂತಹ ರಾಷ್ಟ್ರಗಳ ಕೂಡ ರಷ್ಯಾದಿಂದ ತೈಲ ಖರೀದಿ ಮಾಡುತ್ತಿವೆ. ಆದರೆ, ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಟ್ರಂಪ್ ಆಗಲೀ, ರುಟ್ಟೆ ಆಗಲೇ ಯಾವುದೇ ಬೆದರಿಕೆ, ಧಮ್ಕಿ ಹಾಕಿಲ್ಲ. ನ್ಯಾಟೋದಿಂದ ಹೊರಗಿರುವ ರಾಷ್ಟ್ರಗಳ ಮೇಲೆ ಮಾತ್ರವೇ ಸುಂಕ ದಾಳಿಗೆ ಅಮೆರಿಕ ಮತ್ತು ನ್ಯಾಟೋ ಮುಂದಾಗಿವೆ. ಇಬ್ಬಂದಿ ಧೋರಣೆ ಮೆರೆದಿವೆ.
ಸದ್ಯಕ್ಕೆ, ಅಮೆರಿಕದ ಸುಂಕ ದಾಳಿಗೆ ಚೀನಾ ಅದೇ ಹಾದಿಯಲ್ಲಿ ಪ್ರತಿಕ್ರಿಯಿಸುತ್ತಿದೆ. ತನ್ನ ವ್ಯಾಪಾರ ಸಂಬಂಧಗಳಲ್ಲಿ ಗಟ್ಟಿಯಾಗಿ ನಿಂತಿದೆ. ಆದರೆ, ಭಾರತಕ್ಕೆ ಅಮೆರಿಕ ಮತ್ತು ನ್ಯಾಟೋ ಎಚ್ಚರಿಕೆಗಳು ತಲೆನೋವಾಗಿ ಪರಿಣಮಿಸಿವೆ. ಆದಾಗ್ಯೂ, ಇಬ್ಬಂದಿ ನೀತಿ ಸಲ್ಲದು ಎಂದು ಭಾರತ ಪ್ರತಿಕ್ರಿಯಿಸಿದೆ. ಕಾದು ನೋಡುವ ತಂತ್ರ ಅಳವಡಿಸಿಕೊಂಡಿರುವ ಭಾರತ, ಸದ್ಯಕ್ಕೆ ರಷ್ಯಾ ಜೊತೆಗಿನ ವ್ಯಾಪಾರವನ್ನು ಮುಂದುವರೆಸಿದೆ.
ಭಾರತ – ರಷ್ಯಾ ತೈಲ ಸಂಬಂಧ ಮತ್ತು ಅಮೆರಿಕ-ನ್ಯಾಟೋ ಧ್ವಂದ ನೀತಿ
ಜಾಗತಿಕ ತೈಲ ರಫ್ತಿನಲ್ಲಿ ರಷ್ಯಾ 25% ಪಾಲನ್ನು ಹೊಂದಿದೆ. ರಷ್ಯಾದ ತೈಲ ರಫ್ತು ಸ್ಥಗಿತ ಅಥವಾ ಹೆಚ್ಚಳವು ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ, ಅಮೆರಿಕ ಮತ್ತು ನ್ಯಾಟೋ ಬೆದರಿಕೆ ಹಾಕುತ್ತಿರುವ ನಿರ್ಬಂಧ ಮತ್ತು ಅಧಿಕ ಸುಂಕದ ವಿಚಾರವು ಗಂಭೀರ ವಿಷಯವಾಗಿ ಎದುರಾಗಿದೆ.
ಗಮನಾರ್ಹವಾಗಿ, ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಸದ್ಯಕ್ಕೆ 40% ಇದೆ. 2025ರ ಏಪ್ರಿಲ್‌ನಲ್ಲಿ 29% ಇದ್ದ ತೈಲ ಆಮದು ಪಾಲು, ಮೇ ವೇಳೆಗೆ 40%ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅಮೆರಿಕವು ಮೊದಲ ಸುತ್ತಿನಲ್ಲಿ ಭಾರತವೂ ಸೇರಿ ಹಲವು ರಾಷ್ಟ್ರಗಳ ಮೇಲೆ ಮೊದಲ ಸುತ್ತಿನಲ್ಲಿ ಹೆಚ್ಚಿನ ಸುಂಕವನ್ನು ಹೇರಿತ್ತು ಮತ್ತು ರಷ್ಯಾ ಮೇಲೆ ನಿರ್ಬಂಧ ಹೇರಿತ್ತು. ಅಮೆರಿಕದ ಸುಂಕ ಹೇರಿಕೆ ಮತ್ತು ನಿರ್ಬಂಧಗಳ ಹೊರತಾಗಿಯೂ ರಷ್ಯಾ ಜೊತೆಗಿನ ತೈಲ ವ್ಯಾಪಾರವನ್ನು ಭಾರತ ಹೆಚ್ಚಿಸಿದೆ.
ಭಾರತ ಮಾತ್ರವೇ ರಷ್ಯಾ ಜೊತೆಗೆ ತೈಲ ವ್ಯಾಪಾರ ಮಾಡುತ್ತಿಲ್ಲ. ಯುರೋಪಿಯನ್ ಒಕ್ಕೂಟ (EU) ಮತ್ತು ನ್ಯಾಟೋದ ಸದಸ್ಯ ರಾಷ್ಟ್ರ ಟರ್ಕಿ ಮತ್ತು ಇತರ ದೇಶಗಳು ರಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ಮತ್ತು ಪೈಪ್‌ಲೈನ್ ಗ್ಯಾಸ್‌ಅನ್ನು ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ. 2022ರಿಂದ ಈವರೆಗೆ ರಷ್ಯಾ ರಫ್ತು ಮಾಡಿರುವ ಒಟ್ಟು ಎಲ್‌ಎನ್‌ಜಿ ಪೈಕಿ 51% ಮತ್ತು ಪೈಪ್‌ಲೈನ್ ಗ್ಯಾಸ್‌ನಲ್ಲಿ 37%ಅನ್ನು ಯುರೋಪಿಯನ್ ಒಕ್ಕೂಟ ಖರೀದಿಸಿದೆ.
ಅಲ್ಲದೆ, ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿ, ಅದನ್ನು ಸಂಸ್ಕರಿಸಿ ಭಾರತವು ತೈಲವನ್ನು ಮಾರಾಟ ಮಾಡುತ್ತಿದೆ. ಭಾರತದ ಸಂಸ್ಕರಿತ ತೈಲಕ್ಕೆ ಯುರೋಪಿಯನ್ ಒಕ್ಕೂಟವೂ ಗ್ರಾಹಕನಾಗಿದೆ. 2024ರಲ್ಲಿ ಭಾರತವು ಯುರೋಪಿಯನ್ ಒಕ್ಕೂಟಕ್ಕೆ ರಫ್ತು ಮಾಡಿದ ತೈಲ ಉತ್ಪನ್ನಗಳಲ್ಲಿ 9 ಬಿಲಿಯನ್ ಯುರೋ (81,000 ಕೋಟಿ ರೂ.) ಮೌಲ್ಯದ ತೈಲವು ರಷ್ಯಾದಿಂದ ಪಡೆದ ಕಚ್ಚಾ ತೈಲದಿಂದ ಸಂಸ್ಕರಿತವಾದದ್ದೇ ಆಗಿದೆ. ಅಂದರೆ, ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೋದ ಸದಸ್ಯ ರಾಷ್ಟ್ರಗಳು ನೇರವಾಗಿ ಮತ್ತು ಪರೋಕ್ಷವಾಗಿ ರಷ್ಯಾದ ತೈಲವನ್ನು ಖರೀದಿಸುತ್ತಿವೆ. ಆದಾಗ್ಯೂ, ಈ ಖರೀದಿಗಳ ಬಗ್ಗೆ ಅಮೆರಿಕ ಮತ್ತು ನ್ಯಾಟೋ ಮಾತನಾಡುತ್ತಿಲ್ಲ. ಆದರೆ, ನ್ಯಾಟೋದಿಂದ ಹೊರಗಿರುವ ಭಾರತ ಮತ್ತು ಇತರ ರಾಷ್ಟ್ರಗಳನ್ನು ಮಾತ್ರವೆ ಟೀಕಿಸುತ್ತಿವೆ. ಭಾರತವನ್ನು ಗುರಿಯಾಗಿಸಿಕೊಂಡಿವೆ.
ಈ ಲೇಖನ ಓದಿದ್ದೀರಾ?: ಸಿರಿಯಾದ ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೂ, ಅದರ ನಿಜವಾದ ಗುರಿ ಟರ್ಕಿ!
ಯುರೋಪಿಯನ್ ರಾಷ್ಟ್ರಗಳು 2024ರಲ್ಲಿ ಬರೋಬ್ಬರಿ 25 ಬಿಲಿಯನ್ ಡಾಲರ್ (2 ಲಕ್ಷ ಕೋಟಿ ರೂ.) ಮೌಲ್ಯದ ತೈಲ ಮತ್ತು ಗ್ಯಾಸ್‌ಅನ್ನು ರಷ್ಯಾದಿಂದ ಖರೀದಿಸಿವೆ. ಆದರೆ, ಉಕ್ರೇನ್‌ನಿಂದ 22 ಬಿಲಿಯನ್ ಡಾಲರ್ (1.8 ಲಕ್ಷ ಕೋಟಿ ರೂ.) ಮೌಲ್ಯದ ತೈಲವನ್ನು ಖರೀದಿಸಿವೆ. ಇದು ನ್ಯಾಟೋ ರಾಷ್ಟ್ರಗಳೇ ರಷ್ಯಾದ ಯುದ್ಧ ಯಂತ್ರಕ್ಕೆ ಆರ್ಥಿಕ ಕೊಡುಗೆ ನೀಡುತ್ತಿವೆ ಎಂಬುದು ಸ್ಪಷ್ಟವಾಗಿದೆ. ಇದು ಅಮೆರಿಕ ಮತ್ತು ನ್ಯಾಟೋದ ಇಬ್ಬಂದಿ ಧೋರಣೆಯನ್ನು ಬಹಿರಂಗಗೊಳಿಸುತ್ತದೆ.
ಅಮೆರಿಕ-ನ್ಯಾಟೋದ ಇಬ್ಬಂದಿ ನೀತಿಗೆ ಕಾರಣಗಳೇನು?
ನ್ಯಾಟೋ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿಚಾರದಲ್ಲಿ ಹಾಗೂ ನ್ಯಾಟೋದಿಂದ ಹೊರಗಿರುವ ರಾಷ್ಟ್ರಗಳ ವಿಚಾರದಲ್ಲಿ ಅಮೆರಿಕ ಮತ್ತು ನ್ಯಾಟೋ ಇಬ್ಬಂದಿ ಧೋರಣೆ ಅನುಸರಿಸುತ್ತಿವೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿವೆ. ಪ್ರಮುಖ ಕಾರಣಗಳಿವೆ:
ನೈತಿಕ ದ್ವಂದ್ವ ನಿಲುವು: ರಷ್ಯಾದಿಂದ ಹೆಚ್ಚು ತೈಲು ಖರೀದಿ ಮಾಡುವುದು ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತವೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಟೀಕಿಸುತ್ತಲೇ ಇವೆ. ಆದರೆ, ಇದೇ ರಾಷ್ಟ್ರಗಳು ಕೂಡ ರಷ್ಯಾದಿಂದ ತೈಲವನ್ನು ಖರೀದಿ ಮಾಡುತ್ತಿವೆ. ತಮ್ಮ ಟೀಕೆ-ಅಭಿಪ್ರಾಯಕ್ಕೆ ತಾವೇ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಇನ್ನು, ನ್ಯಾಟೋದ ಸದಸ್ಯ ರಾಷ್ಟ್ರ ಟರ್ಕಿ ತೈಲ ಖರೀದಿಯಲ್ಲಿ ರಷ್ಯಾದ ದೊಡ್ಡ ಖರೀದಿದಾರ ರಾಷ್ಟ್ರವಾಗಿದೆ. ಆದರೆ, ಈ ರಾಷ್ಟ್ರಗಳ ಮೇಲೆ ಅಮೆರಿಕ ಆಗಲೀ, ನ್ಯಾಟೋ ಆಗಲೀ ಯಾವುದೇ ಎಚ್ಚರಿಕೆ, ಬೆದರಿಕೆ, ನಿರ್ಬಂಧ ಇರಲಿ, ವಿರೋಧವನ್ನೂ ವ್ಯಕ್ತಪಡಿಸಿಲ್ಲ.
ರಾಜಕೀಯ ಒತ್ತಡ ಮತ್ತು BRICS: ಭಾರತ, ಚೀನಾ ಮತ್ತು ಬ್ರೆಜಿಲ್ ನೇತೃತ್ವದ BRICS ಒಕ್ಕೂಟವು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಡಾಲರ್‌ಗೆ ಪರ್ಯಾಯವಾಗಿ ತಮ್ಮದೇ ಕರೆನ್ಸಿಗಳಲ್ಲಿ ವ್ಯಾಪಾರ-ವಹಿವಾಟು ನಡೆಸಲು ಚರ್ಚೆಗಳನ್ನು ನಡೆಸುತ್ತಿವೆ. ಇದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಳವಳ ಉಂಟುಮಾಡಿದೆ. ಬ್ರಿಕ್ಸ್‌ನ ಬೆಳವಣಿಗೆಯನ್ನು ತಡೆಯಲು ನ್ಯಾಟೋ ಹವಣಿಸುತ್ತಿದೆ. ಹೀಗಾಗಿಯೇ, ಅಧಿಕ ಸುಂಕದ ಬೆದರಿಕೆಗಳು ಬರುತ್ತಿವೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ವ್ಯಾಪ್ತಿ ಮೀರಿ ವರ್ತಿಸುತ್ತಿದೆ ನ್ಯಾಟೋ: ನ್ಯಾಟೋ ಒಂದು ಯುದ್ಧ-ಸಾಮರಸ್ಯದ ಒಕ್ಕೂಟ. ಇದಕ್ಕೆ, ಜಾಗತಿಕ ವ್ಯಾಪಾರ ನೀತಿಗಳನ್ನು ನಿಯಂತ್ರಿಸುವ ಅಧಿಕಾರ ಇಲ್ಲ. ಆದರೂ, ಭಾರತದಂತಹ ಸಾರ್ವಭೌಮ ರಾಷ್ಟ್ರಕ್ಕೆ ಆರ್ಥಿಕ ನಿರ್ಧಾರಗಳ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಇದು ರಾಜತಾಂತ್ರಿಕ ಗಡಿಯ ಉಲ್ಲಂಘನೆಯಾಗಿದೆ. ಆದರೆ, ಇದನ್ನು ಭಾರತವು ಗಂಭೀರವಾಗಿ ವಿರೋಧಿಸಬೇಕಿದೆ.
ಭಾರತದ ಶಕ್ತಿ (ಇಂಧನ) ಭದ್ರತೆಯ ಆದ್ಯತೆ: ಭಾರತವು ತನಗೆ ಕಚ್ಚಾ ತೈಲದ ಅಗತ್ಯಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಅಗತ್ಯವಿರುವ ಕಚ್ಚಾ ತೈಲದ ಪೈಕಿ ಬರೋಬ್ಬರಿ 88% ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ತೈಲ ರಫ್ತು ಮಾಡುತ್ತಿದ್ದು, ಭಾರತದ ಆರ್ಥಿಕ ಹೊರೆ ಸುಧಾರಿಸಲು ನೆರವಾಗಿದೆ. ಜೊತೆಗೆ, ಭಾರತವು 2007ರಲ್ಲಿ 27 ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಈಗ 40 ದೇಶಗಳಿಗೆ ವಿಸ್ತರಿಸಿದೆ. ಅಲ್ಲದೆ, ಸಂಸ್ಕರಿತ ತೈಲದ ರಫ್ತನ್ನೂ ಹೆಚ್ಚಿಸಿದೆ. ಇದನ್ನು ತಡೆಯುವುದೂ ಅಮೆರಿಕ-ನ್ಯಾಟೋದ ಹುನ್ನಾರವೆಂದು ಹೇಳಲಾಗಿದೆ.
ಮುಂದೇನು? ಏನೆಲ್ಲ ಆಗಬಹುದು?
ಭಾರತ-ಅಮೆರಿಕ ಸಂಬಂಧ: ಅಮೆರಿಕಾದ ರಷ್ಯಾ ನಿರ್ಬಂಧ ಕಾಯ್ದೆ-2025ರಲ್ಲಿ ರಷ್ಯಾ ಜೊತೆಗೆ ತೈಲ ವ್ಯಾಪಾರ ನಡೆಸುವ ರಾಷ್ಟ್ರಗಳ ಮೇಲೆ 500% ಸುಂಕ ವಿಧಿಸುವ ಪ್ರಸ್ತಾಪವಿದೆ. ಇದು ಭಾರತ-ಅಮೆರಿಕದ ಸಂಬಂಧಗಳನ್ನು ಸಂಕೀರ್ಣಗೊಳಿಸಬಹುದು. ಭಾರತವು ತನ್ನ ಇಂಧನ ಭದ್ರತೆಗೆ ಹೆಚ್ಚು ಒತ್ತುಕೊಡಬಹುದು. ತನ್ನ ಆದ್ಯತೆಗಳ ಬಗ್ಗೆ ಈಗಾಗಲೇ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಾಹಂಗೆ ತಿಳಿಸಿರುವುದಾಗಿ ಭಾರತ ಹೇಳಿಕೊಂಡಿದೆ.
BRICS ಮತ್ತು ಜಾಗತಿಕ ಇಂಧನ ಸಮತೋಲನ: BRICS ರಾಷ್ಟ್ರಗಳ ವಿಸ್ತರಣೆಯು ಜಾಗತಿಕ ಆರ್ಥಿಕತೆಯಲ್ಲಿ ಬಹುಕೇಂದ್ರೀಯ (multipolar) ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಬ್ರಿಕ್ಸ್ ವಿಸ್ತರಣೆಯು ನ್ಯಾಟೋದ ಎಚ್ಚರಿಕೆಯನ್ನು ಬುಡಮೇಲು ಮಾಡುವ ಪ್ರಯತ್ನದ ಭಾಗವೆಂದು ವಿಶ್ಲೇಷಕರು ಹೇಳುತ್ತಾರೆ.
ಶಕ್ತಿ ಮಾರುಕಟ್ಟೆ ಸ್ಥಿರತೆ: ಭಾರತವು ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾದ ತೈಲ ಖರೀದಿಯನ್ನು ಮುಂದುವರೆಸುವುದರಿಂದ ಜಾಗತಿಕ ತೈಲ ಬೆಲೆಗಳು ಸ್ಥಿರವಾಗಿರುತ್ತವೆ. ಒಂದು ವೇಳೆ ಈ ಖರೀದಿಗಳು ಸ್ಥಗಿತಗೊಂಡರೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಗೊಂದಲ ಉಂಟಾಗಬಹುದು. ಇದು ಯುರೋಪ್ ಸೇರಿದಂತೆ ಎಲ್ಲ ರಾಷ್ಟ್ರಗಳ ಮೇಲೆ ಗಂಭೀರ ಆರ್ಥಿಕ ಪರಿಣಾಮ ಬೀರಬಹುದು.
ಭಾರತದ ನಿಲುವು ಮತ್ತು ಪ್ರತಿಕ್ರಿಯೆ
ಅಮೆರಿಕ ಮತ್ತು ನ್ಯಾಟೋ ಎಚ್ಚರಿಕೆಗಳಿಗೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಶಕ್ತಿ ಭದ್ರತೆಯೇ ತನ್ನ ಆದ್ಯತೆಯಾಗಿದೆ ಎಂದಿರುವ ಭಾರತವು, ‘ಇಬ್ಬಂದಿ ನೀತಿ’ ಬೇಡವೆಂದು ಅಮೆರಿಕ-ನ್ಯಾಟೋಗೆ ಎಚ್ಚರಿಕೆ ನೀಡಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು, “ನಮ್ಮ ಜನರ ಶಕ್ತಿ (ಇಂಧನ) ಭದ್ರತೆಯನ್ನು ಖಾತರಿಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಪ್ರಯತ್ನದ ಭಾಗವಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಆಯ್ಕೆಗಳು ಮತ್ತು ಜಾಗತಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಖರೀದಿಯ ನಿರ್ಧಾರವನ್ನು ನಿರ್ಧರಿಸುತ್ತೇವೆ. ಈ ವಿಷಯದಲ್ಲಿ ಯಾವುದೇ ಇಬ್ಬಂದಿ ನೀತಿಗಳು ಬೇಡವೆಂದು ಎಚ್ಚರಿಕೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ”ಭಾರತವು ತೈಲ ಆಮದಿಗಾಗಿ 40 ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದೆ. ರಷ್ಯಾದ ತೈಲ ಆಮದಿಗೆ ಯಾವುದೇ ತೊಂದರೆಯಾದರೂ ಪರ್ಯಾಯ ಮೂಲಗಳಿಂದ ತೈಲ ಪಡೆಯುವ ವಿಶ್ವಾಸವಿದೆ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದು ಜಾಗತಿಕ ತೈಲ ಬೆಲೆಗಳನ್ನು ಸ್ಥಿರಗೊಳಿಸಿದೆ. ಇಲ್ಲದಿದ್ದರೆ, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120-130 ಡಾಲರ್‌ಗೆ ಏರಿಕೆಯಾಗುತ್ತಿತ್ತು” ಎಂದು ಪ್ರತಿಪಾದಿಸಿದ್ದಾರೆ.




